ADVERTISEMENT

ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಬೆಟ್ಟಿಂಗಿನಲ್ಲಿ ಯುವಕರು

ಚಾಲುಕ್ಯರ ಐತಿಹಾಸಿಕ ನಾಡು ಈಗ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 14 ಮೇ 2018, 6:18 IST
Last Updated 14 ಮೇ 2018, 6:18 IST

ಬಾದಾಮಿ: ಐತಿಹಾಸಿಕ ಚಾಲುಕ್ಯರ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರಿನ ಒಡೆಯರ ಸಾಮ್ರಾಜ್ಯದ ವಾರಸುದಾರರ ನಡುವೆ ಏರ್ಪಟ್ಟಿದ್ದ ಚುನಾವಣಾ ಕದನ ಈಗ ಸ್ತಬ್ಧವಾಗಿದೆ.

ಮತದಾನ ಮುಗಿದು, ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಹಾಗೂ ಮತದಾರರು ಎದುರು ನೋಡುತ್ತಿದ್ದಾರೆ. ಅಲ್ಲಲ್ಲಿ ಪರ-ವಿರೋಧವಾಗಿ ಬೆಟ್ಟಿಂಗ್‌ ಕೂಡ ನಡೆಯುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಭ್ಯರ್ಥಿಯಾದ ಸಂಸದ ಬಿ. ಶ್ರೀರಾಮುಲು ಸ್ಪರ್ಧೆಯಿಂದ ಇಡೀ ಮತಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ಚಾಲುಕ್ಯರ ನಾಡಿಗೆ ಪ್ರಧಾನಿ, ಮಾಜಿ ಪ್ರಧಾನಿಯಾದಿಯಾಗಿ ಸಚಿವರು, ಮಾಜಿ ಸಚಿವರು, ವಿವಿಧ ಪಕ್ಷಗಳ ನಾಯಕರು ಬಂದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಬರೋಬ್ಬರಿ 3 ವಾರಗಳ ಕಾಲ ಜನಪ್ರತಿನಿಧಿಗಳು ಮತ್ತು  ಅವರ ಬೆಂಬಲಿಗರು ಇಲ್ಲಿಯೇ ಠಿಕಾಣಿ ಹೂಡಿದ್ದರು.

ADVERTISEMENT

ಅಬ್ಬರದ ಚುನಾವಣಾ ಪ್ರಚಾರದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಯೋಜನೆಗಳು ಮತ್ತು ಸಾಧನೆಗಳನ್ನು ಜನರ ಮುಂದಿಡುತ್ತಿದ್ದವು. ದೆಹಲಿ, ಮುಂಬೈ, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್‌, ಬಾಗಲಕೋಟೆ ಮೂಲದ ಮಾಧ್ಯಮ ಪ್ರತಿನಿಧಿಗಳು ಕೂಡ ಇಲ್ಲಿಯೇ ಠಿಕಾಣಿ ಹೀಡಿದ್ದರು. ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಗಳನ್ನು ದೇಶಕ್ಕೆ ತಲುಪಿಸುತ್ತಿದ್ದರು.

ಶಾಂತಿಯುತ ಮತದಾನಕ್ಕಾಗಿ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆಸೆ, ಆಮಿಷ ಒಡ್ಡದಂತೆ ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ಕಟ್ಟೆಚ್ಚರ ವಹಿಸಿತ್ತು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸಮಬಲ ಸಾಧಿಸಲಿವೆ ಎಂದು ಕೆಲವರು ಮಾತನಾಡಿಕೊಂಡರೆ, ಮತ್ತೆ ಕೆಲವರು ಮತದಾರರ ಜಾತಿಯ ಲೆಕ್ಕಾಚಾರದಲ್ಲೂ ಮುಳುಗಿದ್ದಾರೆ. ಒಟ್ಟಾರೆ ಮತದಾರರು ಯಾರಿಗೆ ವಿಜಯಮಾಲೆ ಹಾಕುವರು ಎಂಬುದು ಮೇ 15ರಂದು ತಿಳಿಯಲಿದೆ.

‘ಇಲೆಕ್ಸೆನ್‌ ಮುಗುದು ಊರೆಲ್ಲ ಶಾಂತ ಆಗೈತಿ ನೋಡ್ರಿ, ಕೂಸು ಎರದ ಹಾಕಿದರ ಹೆಂಗ ಸುಮ್ಮನ ಮಲಗತೈತಿ ಹಾಂಗ ಊರೆಲ್ಲ ಎರೆದ ಹಾಕದೆಂಗ ಆಗೈತ್ರಿ’ ಎಂದು ಮಲ್ಲಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.