ADVERTISEMENT

ಆಮೆಗತಿಯಲ್ಲಿ ಬಸ್ ನಿಲ್ದಾ ಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 8:37 IST
Last Updated 17 ಫೆಬ್ರುವರಿ 2014, 8:37 IST
ಬಾಗಲಕೋಟೆ ಹಳೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನವೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾಮಗ್ರಿಗಳು ನಿಲ್ದಾಣದಲ್ಲಿ ಬಿದ್ದಿರುವ ದೃಶ್ಯ
ಬಾಗಲಕೋಟೆ ಹಳೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನವೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾಮಗ್ರಿಗಳು ನಿಲ್ದಾಣದಲ್ಲಿ ಬಿದ್ದಿರುವ ದೃಶ್ಯ   

ಬಾಗಲಕೋಟೆ: ಹಳೆನಗರದಲ್ಲಿರುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಆಮೆಗತಿ­ಯಲ್ಲಿ ಸಾಗುತ್ತಿದ್ದು, ಬಸ್‌ ನಿಲುಗಡೆಗೆ ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
2012 ಅಕ್ಟೋಬರ್ ನಲ್ಲಿ ಅಂದಿನ ಶಾಸಕ ವೀರಣ್ಣ ಚರಂತಿಮಠ ಅವರು ಬಸ್‌ ನಿಲ್ದಾಣ ನವೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದರು. ಇದೀಗ ಎರಡು ವರ್ಷ­ವಾದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳದಿರುವುದು ವಿಪ­ರ್ಯಾಸ.

ಬಸ್ ನಿಲ್ದಾಣ ನವೀಕರಣ ಕಾಮಗಾರಿ ಅರ್ಧದಷ್ಟೂ ಪೂರ್ಣ­ಗೊಳ­್ಳದಿರುವುದು ಅಧಿಕಾರಿ­ಗಳ ಮತ್ತು ಗುತ್ತಿಗೆದಾರರ ಕಾರ್ಯ­ವೈಖರಿಗೆ ಕನ್ನಡಿ ಹಿಡಿದಂತಿದೆ.
ಬಸ್ ನಿಲ್ದಾಣದ ಪ್ಲ್ಯಾಟ್‌­ಫಾರ್ಮ್‌ಗೆ ಕಾಂಕ್ರೀಟ್‌ ಹಾಕಿದ್ದನ್ನು ಬಿಟ್ಟರೆ, ಉಳಿದಂತೆ ಬೇರೇನೂ ಕಾಮಗಾರಿ ನಡೆದಿಲ್ಲ. ಕಟ್ಟಡ ಕಾಮಗಾರಿ ಇನ್ನೂ ಆರಂಭ­ವಾಗ­ಬೇಕಷ್ಟೆ. ಕಾಮಗಾರಿ ನಡೆಯುತ್ತಿರು­ವುದನ್ನು ಗಮನಿಸಿದರೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಕಾಲ ಬೇಕಾಗ­ಬಹುದು.

ದುರಸ್ತಿ ಕಾರ್ಯ ನಡೆದಿರುವ ಹಿನ್ನೆಲೆ­ಯಲ್ಲಿ ಬಸ್ ನಿಲುಗಡೆಗೆ ಸರಿ­ಯಾದ ವ್ಯವಸ್ಥೆ ಇಲ್ಲದಂತಾಗಿದೆ. ಗ್ರಾಮೀಣ ಮತ್ತು ನಗರಗಳಿಗೆ ಪ್ರಯಾಣಿಕ­ರನ್ನು ಕರೆದೊಯ್ಯುವ ಬಸ್ ನಿಲುಗಡೆ ಸರಿಯಾದ ಸ್ಥಳ­ವಿಲ್ಲದಿ­ರುವುದರಿಂದ ಪ್ರಯಾ­ಣಿಕರು ನಿಲ್ದಾಣಕ್ಕೆ ಬರುವ ಪ್ರತಿ ಬಸ್‌ಗಳನ್ನು ಎಲ್ಲಿಗೆ ಹೋಗುತ್ತದೆ ಎಂದು ಓಡಿ­ಹೋಗಿ ನೋಡಬೇಕಾದ ಸ್ಥಿತಿ ಇದೆ.

ಕಾಮಗಾರಿ ನಡೆಯುತ್ತಿರು­ವುದ­ರಿಂದ ಹೊರ ಮತ್ತು ಒಳಗೆ ಬಸ್ ಬರಲು ಒಂದೇ ಪ್ರವೇಶ ದ್ವಾರ ಇರುವುದರಿಂದ ಬಸ್‌ ಚಾಲಕರಿಗೆ ಇಕ್ಕಟ್ಟಿನ ಸ್ಥಳದಲ್ಲಿ ಬಸ್ ತಿರುಗಿಸ­ಬೇಕಾದ ದುಃಸ್ಥಿತಿ ಬಂದೊದಿಗಿದೆ.
ಮಳೆಗಾಲದಲ್ಲಿಯಂತೂ ನೀರು ನಿಲ್ದಾಣವನ್ನೇ ಸುತ್ತುವರಿದಿರುತ್ತದೆ. ಪ್ರಯಾಣಿಕರು ನೀರಿನಲ್ಲೇ ನಿಲ್ಲಬೇಕಾ­ಗುತ್ತದೆ. ಕಳೆದ ಮಳೆಗಾಲದಲ್ಲಿ ನಿಲ್ದಾಣದ ಒಳಗಡೆ ಇರುವ ಅಂಗಡಿ­ಗಳಿಗೂ ಮಳೆ ನೀರು ನುಗ್ಗಿ ತೊಂದರೆಯಾಗಿದ್ದನ್ನು ಇಲ್ಲಿ ನೆನಪಿಸಿ­ಕೊಳ್ಳಬಹುದು.
ಬಸ್ ನಿಲ್ದಾಣದ ಆವರಣ­ದಲ್ಲಿ­ರುವ ಶೌಚಾಲಯದಲ್ಲಿ ಶುಚಿತ್ವ ಕೊರತೆ ಎದ್ದು ಕಾಣುತ್ತಿದೆ.

ಅಷ್ಟೇ ಅಲ್ಲದೇ ಶೌಚಾಲಯದ ಬಾಗಿಲು­ಗಳಿಗೆ ಚಿಲಕವೇ ಇಲ್ಲದಿರುವುದು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.
ಬಸ್‌ ನಿಲ್ದಾಣದ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತ­ನಾಡಿದ ಪ್ರಯಾಣಿಕ ಬಸು ಪಾತ್ರೋಟಿ, ‘ಬಸ್‌ ನಿಲ್ದಾಣ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದೆ. ಈ ಅವಧಿಯಲ್ಲಿ ಹೊಸ ಬಸ್‌ ನಿಲ್ದಾಣವನ್ನೇ ನಿರ್ಮಿಸ­ಬಹುದಿತ್ತು’ ಎಂದರು.
‘ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಗದಷ್ಟು ದೂಳು ಮೈಗೆ ಮೆತ್ತಿಕೊ­ಳ್ಳು­ತ್ತದೆ, ಉಸಿರಾಡಲು ಸಮಸ್ಯೆ­ಯಾಗುತ್ತಿದೆ. ಕುಡಿಯಲು ನೀರು ಸಿಗುತ್ತಿಲ್ಲ, ಎಲ್ಲೆಂದರಲ್ಲಿ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳಲಾಗಿದೆ, ನಿಲ್ದಾಣದ ಇಡೀ ವಾತಾವರಣ ನರಕ­ಮಯವಾಗಿದೆ. ತಕ್ಷಣ ಸ್ಥಳೀಯ ಶಾಸಕರು, ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು’ ಆಗ್ರಹಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.