ADVERTISEMENT

ಆರೋಗ್ಯ ಕವಚಕ್ಕೆ ತಮಾಷೆ ಕರೆ ಸಲ್ಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:35 IST
Last Updated 17 ಫೆಬ್ರುವರಿ 2011, 10:35 IST

ಬಾಗಲಕೋಟೆ: “ಆರೋಗ್ಯ ಕವಚದ 108 ಆ್ಯಂಬುಲೆನ್ಸ್‌ಗಳು ತುರ್ತು ಸಂದರ್ಭಗಳಲ್ಲಿ ಆಪದ್ಬಾಂಧವನಂತೆ ಧಾವಿಸುವ ಮೂಲಕ ಸಾರ್ವಜನಿಕರಿಗೆ ಸಕಾಲಕ್ಕೆ ಅತ್ಯುತ್ತಮ ಸೇವೆ ಒದಗಿಸುತ್ತಿವೆ. ಆರೋಗ್ಯ ಇಲಾಖೆ ಜಾರಿಗೆ ತಂದಿರುವ ಈ ವ್ಯವಸ್ಥೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಅಂಗವಿಕಲರ ಸಂಘದ ಮುಖಂಡ ಘನಶ್ಯಾಂ ಭಾಂಡಗೆ ಹೇಳಿದರು.

ನಗರದ ವಾಸವಿ ಟಾಕೀಸ್ ಬಳಿಯ ಹರಣಶಿಕಾರಿ ಕಾಲನಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ಆರೋಗ್ಯ ಕವಚ’ದ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರೋಗ್ಯ ಸಚಿವ ಶ್ರೀರಾಮುಲು ಜಾರಿಗೆ ತಂದಿರುವ ಯೋಜನೆಯು ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಜನರಿಗೆ ಅನುಕೂಲಕರವಾಗಿದೆ ಎಂದು ಭಾಂಡಗೆ ಅಭಿಪ್ರಾಯಪಟ್ಟರು.ಇದೇ ವೇಳೆ ಮಾತನಾಡಿದ ಆರೋಗ್ಯ ಕವಚ ಉಸ್ತುವಾರಿ ಅಧಿಕಾರಿ ಶಫಿ ದಫೇದಾರ, “ತುರ್ತುಸೇವೆಗೆ ಮಾತ್ರ 108 ಆ್ಯಂಬುಲೆನ್ಸ್‌ಗಳು  ಮೀಸಲಾಗಿವೆ. ಕೆಲವರು ತಮಾಷೆಗಾಗಿ ಈ ಸಂಖ್ಯೆಗೆ ಕರೆ ಮಾಡಿ ಮೊಬೈಲ್ ಸ್ವಿಚ್‌ಆಫ್ ಮಾಡುತ್ತಿರುವುದು” ದುರದೃಷ್ಟಕರ ಎಂದರು.

“ಇಂತಹ ಅನಗತ್ಯ ಕರೆಗಳಿಂದಾಗಿ ಗೊಂದಲ ಉಂಟಾಗುತ್ತದೆ. ಆಗ ನಿಜವಾಗಿಯೂ ಸಂಕಟದಲ್ಲಿರುವರಿಗಸಕಾಲಕ್ಕೆ ತುರ್ತುಸೇವೆ ಒದಗಿಸುವುದು ಸಾಧ್ಯವಾಗುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

‘ಹಣ ನೀಡಬೇಡಿ’
“ಆರೋಗ್ಯ ಕವಚ ಸೇವೆಯು ಸಂಪೂರ್ಣ ಉಚಿತವಾಗಿದೆ. ಯಾವುದೇ ಕಾರಣಕ್ಕೂ ಸಿಬ್ಬಂದಿಗೆ ಹಣ ನೀಡಬಾರದು. ಒಂದು ವೇಳೆ ಯಾರಾದರೂ ಹಣ ಕೇಳಿದರೆ ಕೂಡಲೇ 108ಕ್ಕೆ ಕರೆ ಮಾಡಿ ಆ ಸಿಬ್ಬಂದಿ ಬಂದ ವಾಹನ ಸಂಖ್ಯೆಯನ್ನು ತಿಳಿಸಬೇಕು” ಎಂದು ಶಫಿ ಹೇಳಿದರು.

ಆರೋಗ್ಯ ಕವಚ ಸಿಬ್ಬಂದಿಯಾದ ಶಾಂತವೀರ ಹಿರೇಮಠ, ಕೆ.ಎಸ್. ಕುಂದರಗಿ, ಮಲ್ಲಿಕಾರ್ಜುನ, ಸೋಮಶೇಖರ, ಇಮ್ಯಾನ್ಯುಯಲ್, ಸಂಜು ಹಾಗೂ ಸ್ಥಳೀಯ ಜನರು ಉಪಸ್ಥಿತರಿದ್ದರು.
ಆರೋಗ್ಯ ಕವಚ ಸೇವೆಯ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.