ADVERTISEMENT

ಇದು ಸುಳ್ಳೇನ್ರೀ ಶೆಟ್ಟರ್‌?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 5:14 IST
Last Updated 24 ಅಕ್ಟೋಬರ್ 2017, 5:14 IST

ಧಾರವಾಡ: ರಾಜ್ಯದ 22 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದು ಸುಳ್ಳೇನ್ರಿ ಜಗದೀಶ ಶೆಟ್ಟರ್‌? ಶಾಲೆಗೆ ಹೋಗುವ ಪ್ರತಿ ಮಗುವಿಗೂ ವಾರದಲ್ಲಿ 5 ದಿನ ಹಾಲು ನೀಡುತ್ತಿರುವುದು ಸುಳ್ಳೇನ್ರಿ ಶೆಟ್ಟರ್‌? ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಪ್ರತಿ ಲೀಟರ್‌ಗೆ ₹ 5ರಂತೆ ಪ್ರೋತ್ಸಾಹ ಧನ ನೀಡುತ್ತಿರುವುದು ಸುಳ್ಳೇನ್ರೀ ಶೆಟ್ಟರ್‌? ರಾಜ್ಯದಲ್ಲಿ 1.74 ಲಕ್ಷ ಕೃಷಿ ಹೊಂಡ ನಿರ್ಮಿಸಿದ್ದು ಸುಳ್ಳೇನ್ರಿ ಜಗದೀಶ ಶೆಟ್ಟರ್‌?...

ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದ ಉದ್ದಕ್ಕೂ ಸರ್ಕಾರದ ಸಾಧನೆಯ ಜತೆಗೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರನ್ನು ವ್ಯಂಗ್ಯದ ಧಾಟಿಯಲ್ಲೇ ಪ್ರಶ್ನೆಗಳ ಸುರಿಮಳೆಗರೆದರು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದನ್ನು ಲಾಲಿಪಾಪ್‌ಗೆ ಹೋಲಿಸಿರುವ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್‌ ಅವರು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ರಾಜ್ಯದ ಜನತೆ 17 ಜನ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದಾರೆ. ಈ ಸಂಸದರಿಗೆ ಸಾಮರ್ಥ್ಯ ಇದ್ದರೆ ಸಂಸತ್ತಿಗೆ ಮುತ್ತಿಗೆ ಹಾಕಿ ಸಾಲ ಮನ್ನಾ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

ಒಲೆ ಮುಂದೆ: ‘2010ರಲ್ಲಿ ಉಗ್ರಪ್ಪ ಅವರು ವಿಧಾನ ಪರಿಷತ್ತಿನಲ್ಲಿ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದ್ದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ನಮ್ಮಲ್ಲಿ ನೋಟು ಮುದ್ರಿಸುವ ಯಂತ್ರ ಇಲ್ಲ ಎಂದಿದ್ದರು. ಆದರೆ, ಈಗ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎನ್ನುತ್ತಿದ್ದಾರೆ. ಇವರ ಸ್ಥಿತಿ ಕಂಡರೆ ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತಿದೆ’ ಎಂದು ಲೇವಡಿ ಮಾಡಿದರು.

‘ಮಾತು, ಮಾತಿಗೆ ಮಿಷನ್ 150 ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರ ಉತ್ಸಾಹ ಈಗ ಕುಗ್ಗಿದೆ. ಅವರ ಮಿಷನ್‌ ಈಗ 50ಕ್ಕೆ ಕುಗ್ಗಿದೆ. ಹೋದಲೆಲ್ಲಾ ಮಿಷನ್‌ 150, ಮಿಷನ್‌ 150 ಎನ್ನುತ್ತಿರುವ ಅವರ ಜೇಬಿನಲ್ಲಿ ಏನಾದರೂ ಮಿಷನ್‌ ಇದಿಯೇ ಎಂಬುದನ್ನು ಪರೀಕ್ಷಿಸಬೇಕಾಗಿದೆ’ ಎಂದು ವ್ಯಂಗ್ಯವಾಡಿದರು.

‘ಸೀರೆ ಕೊಟ್ಟಿಲ್ವಾ, ಸೈಕಲ್‌ ಕೊಟ್ಟಿಲ್ವಾ ಎಂದು ಕೇಳುವ ಯಡಿಯೂರಪ್ಪ ಅವರು ಈ ಬಾರಿ ಚುನಾವಣೆಯಲ್ಲಿ ತಮ್ಮ ಸರ್ಕಾರದ ಈ ಎರಡು ಸಾಧನೆಗಳ ಜತೆಗೆ ಜೈಲಿಗೆ ಹೋಗಿದ್ದು, ನೀಲಿ ಚಿತ್ರ ನೋಡಿ ಅಧಿಕಾರ ಕಳೆದುಕೊಂಡಿದ್ದನ್ನೂ ಸೇರಿಸಬಹುದು’ ಎಂದರು.

‘ಟಿಪ್ಪು ಜಯಂತಿಯಂದು ಟಿಪ್ಪು ವೇಷ ಧರಿಸಿ ಟಿಪ್ಪುವನ್ನು ಕೊಂಡಾಡಿದ್ದ ಯಡಿಯೂರಪ್ಪ ಅವರಿಗೆ ಈಗ ಟಿಪ್ಪು ದೇಶದ್ರೋಹಿಯಂತೆ ಕಾಣುತ್ತಿದ್ದಾನೆ. ಹಾಗಿದ್ದರೆ ಇವರಿಗೆ ಎರಡು ನಾಲಿಗೆ ಇದೆಯೇ? ಸದಾ ಸುಳ್ಳನ್ನೇ ಹೇಳುವ ಬಿಜೆಪಿ ನಾಯಕರಿಗೆ ಚರಿತ್ರೆಯನ್ನು ತಿರುಚಿ ಗೊತ್ತೇ ಹೊರತು, ಜನರಿಗೆ ಚರಿತ್ರೆ
ಯನ್ನು ತಿಳಿಸಿ ಗೊತ್ತಿಲ್ಲ. ಇತಿಹಾಸವನ್ನ ಅರಿಯದವನು ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ’ ಎಂದರು.

‘ಬ್ರಿಟೀಷರ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಸೆಣಸಿದ ಕನ್ನಡಿಗ ಟಿಪ್ಪು ಸುಲ್ತಾನ್‌. ಯುದ್ಧದ ವೆಚ್ಚ ನೀಡುವಂತೆ ಬ್ರಿಟೀಷರು ಪಟ್ಟು ಹಿಡಿದಾಗ ತನ್ನ ಇಬ್ಬರು ಮಕ್ಕಳನ್ನು ಅಡವಿಟ್ಟು ಶ್ರೀರಂಗಪಟ್ಟಣ ಸಂಸ್ಥಾನ ಉಳಿಸಿದವನು ಟಿಪ್ಪು. ಇಂಥ ವ್ಯಕ್ತಿಯನ್ನು ಬಿಜೆಪಿ ರಾಷ್ಟ್ರದ್ರೋಹಿ ಎಂದೆನ್ನುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆಜೆಪಿ ಕಟ್ಟಿದಾಗ ಅಲ್ಲಾಹುವಿನೆ ಮೇಲೆ ಆಣೆ ಮಾಡಿ ಇನ್ನು ಮುಂದೆ ಬಿಜೆಪಿಗೆ ಹೋಗಲ್ಲ ಎಂದಿದ್ದರು. ಆದರೆ, ನಂತರ ಅವರು ಮಾಡಿದ್ದೇನು?’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರ ಹಾಸ್ಯ, ಲೇವಡಿ ಮಿಶ್ರಿತ ಮಾತು ಮತ್ತು ಆಂಗಿಕ ಅಭಿನಯಕ್ಕೆ ಜನರು ಚಪ್ಪಾಳೆ, ಶಿಳ್ಳೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.