ADVERTISEMENT

ಇನ್ನು ಬಾದಾಮಿ ತಾಲ್ಲೂಕು ಅಭಿವೃದ್ಧಿಗೆ ಶ್ರೀಕಾರ?

ನೂತನ ಶಾಸಕರಿಂದ ಋಣ ತೀರಿಸುವ ಮಾತು; ಸ್ಥಳೀಯರಲ್ಲಿ ಗರಿಗೆದರಿದ ನಿರೀಕ್ಷೆ

ವೆಂಕಟೇಶ್ ಜಿ.ಎಚ್
Published 11 ಜೂನ್ 2018, 7:33 IST
Last Updated 11 ಜೂನ್ 2018, 7:33 IST
ಬಾದಾಮಿ ತಾಲ್ಲೂಕು ಕಟಗೇರಿ ಬಳಿಯ ಘಟಪ್ರಭಾ ಕಾಲುವೆಯಲ್ಲಿ ಇಲ್ಲಿಯವರೆಗೆ ಹನಿ ನೀರು ಹರಿದಿಲ್ಲ
ಬಾದಾಮಿ ತಾಲ್ಲೂಕು ಕಟಗೇರಿ ಬಳಿಯ ಘಟಪ್ರಭಾ ಕಾಲುವೆಯಲ್ಲಿ ಇಲ್ಲಿಯವರೆಗೆ ಹನಿ ನೀರು ಹರಿದಿಲ್ಲ   

ಬಾಗಲಕೋಟೆ: ಚಾಮುಂಡೇಶ್ವರಿಯಲ್ಲಿ ಸೋತರೂ, ಇಲ್ಲಿ ಕೈ ಹಿಡಿದು ತಮ್ಮ ರಾಜಕೀಯ ಬದುಕಿನ ಗ್ರಾಫ್ ಕುಸಿಯ
ದಂತೆ ನೋಡಿಕೊಂಡ ಬಾದಾಮಿ ಕ್ಷೇತ್ರದ ಜನರ ಋಣ ತೀರಿಸುವ ಮಾತನ್ನು ಶಾಸಕ ಸಿದ್ದರಾಮಯ್ಯ ಆಡುತ್ತಿದ್ದಾರೆ. ಇದು ನಾಲ್ಕು ದಶಕಗಳ ನಂತರ ಹೊಸ ನಾಯಕತ್ವ ಕಂಡ ಬಾದಾಮಿ ಕ್ಷೇತ್ರದ ಶ್ರೇಯೋಭಿಲಾಷಿಗಳ ಮನದಲ್ಲಿ ಹೊಸ ಭರವಸೆ ಮೂಡಿಸಿದೆ.

ಚಾಲುಕ್ಯರ ಅವಧಿಯಲ್ಲಿ ರಾಜಧಾನಿಯ ಸಮ್ಮಾನದೊಂದಿಗೆ ಮೆರೆದಿದ್ದ ಬಾದಾಮಿಯ ಪಾಲಿಗೆ ಈಗ ಉಳಿದಿರುವುದು ಹಳೆಯ ದಿನಗಳ ವೈಭವದ ಕನವರಿಕೆ ಮಾತ್ರ. ಸಮ್ಮಿಶ್ರ ಸರ್ಕಾರದ ಜುಟ್ಟು ಹಿಡಿದು ಈಗಲೂ ‘ಪ್ರಭಾವಿ’ ಎನಿಸಿರುವ ತಮ್ಮೂರಿನ ಶಾಸಕರು, ಬಾದಾಮಿಗೆ ನೆಮ್ಮದಿಯ ದಿನಗಳ ತಂದುಕೊಡಲಿದ್ದಾರೆಯೇ ಎಂಬ ಪ್ರಶ್ನೆ ಸ್ಥಳೀಯರದ್ದು.

ಕೃಷಿ, ನೇಕಾರಿಕೆ ಕ್ಷೇತ್ರದ ಜನರ ವೃತ್ತಿಯಾದರೂ, ಪ್ರವಾಸೋದ್ಯಮ ಇಲ್ಲಿನ ಪ್ರವೃತ್ತಿ. ಆದರೆ ಅದ್ಯಾವುದೂ ಉದ್ಯೋಗ ಅರಸಿ ಇಲ್ಲಿಂದ ಗೋವಾ, ಮಂಗಳೂರು, ಬೆಂಗಳೂರು, ಮಹಾರಾಷ್ಟ್ರದ ರತ್ನಗಿರಿಗೆ ಗುಳೇ ಹೋಗುವವರನ್ನು ತಡೆದಿಲ್ಲ. ಜಿಲ್ಲೆಯಲ್ಲಿ ಗುಳೇ ಪ್ರಮಾಣ ಹೆಚ್ಚಿರುವವರ ತಾಲ್ಲೂಕುಗಳು ಎಂಬ ಹಣೆಪಟ್ಟಿ ಬಾದಾಮಿ, ಗುಳೇದಗುಡ್ಡಕ್ಕೆ ಸಲ್ಲುತ್ತದೆ. ಅದನ್ನು ಕಳಚುವ ದೊಡ್ಡ ಸವಾಲು ಸಿದ್ದರಾಮಯ್ಯ ಎದುರಿಗಿದೆ.

ADVERTISEMENT

ಸಮಗ್ರ ನೀರಾವರಿ ವ್ಯವಸ್ಥೆ, ನೇಕಾರರಿಗೆ ನೆರವು, ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿಗೆ ಸಿದ್ದರಾಮಯ್ಯ ಮುಂದಾಗಿ ಬಾದಾಮಿಗೆ ಭಾಗ್ಯ ತಂದುಕೊಡಲಿ ಎಂಬುದು ಸ್ಥಳೀಯರ ಅಭಿಮತ. ಆ ನಿಟ್ಟಿನಲ್ಲಿ ‘ಪ್ರಜಾವಾಣಿ’ ಬೆಳಕು ಚೆಲ್ಲವ ಪ್ರಯತ್ನಕ್ಕೆ ಹಲವರು ದನಿಗೂಡಿಸಿದ್ದಾರೆ.

ಲಲಿತಕಲಾ ವಿಶ್ವವಿದ್ಯಾಲಯ ಆರಂಭಿಸಿ..

‘ಬಾದಾಮಿಯಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಕಾರ್ಯಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಚಾಲನೆ ಸಿಕ್ಕಿದೆ. ಉದ್ದೇಶಿತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಸ್.ಸಿ.ಪಾಟೀಲ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅನುಷ್ಠಾನಗೊಳ್ಳಲಿ’ ಎಂದು ಬನಶಂಕರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಸ್ತು ಶಿಲ್ಪ ಮತ್ತು ಚಿತ್ರಕಲಾ ಕೇಂದ್ರದ ಮುಖ್ಯಸ್ಥ ಕೃಷ್ಣ ಕಟ್ಟಿ ಹೇಳುತ್ತಾರೆ.

‘ಐದನೇ ಶತಮಾನದಲ್ಲಿಯೇ ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ಎಲ್ಲಾ ರೀತಿಯ ಕಲೆಗಳ ಪ್ರಯೋಗ ನಡೆದಿದೆ. ಕುಟುಕನಕೇರಿ, ಸಿಡಿಲಪಡಿಯಲ್ಲಿ ಪ್ರಾಗೈತಿಹಾಸಿಕ ಕಾಲದ ಚಿತ್ರಗಳು ದೊರೆತಿವೆ. ಇಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಬಾದಾಮಿಯ ಹೆಸರು, ಕೀರ್ತಿ ವಿಶ್ವಮಟ್ಟದಲ್ಲಿ ಹಬ್ಬಲಿದೆ. ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ ಬರಲಿದ್ದಾರೆ’ ಎಂಬುದು ಕಟ್ಟಿ ಅವರ ಅಭಿಮತ.

ಗುಳೇದಗುಡ್ಡಕ್ಕೆ ಪದವಿ ಕಾಲೇಜು ಕೊಡಿ: ‘ಗುಳೇದಗುಡ್ಡ ತಾಲ್ಲೂಕು ಕೇಂದ್ರವಾದರೂ ಅಲ್ಲಿ ಸರ್ಕಾರಿ ಪದವಿ ಕಾಲೇಜು ಇಲ್ಲ. ಅಲ್ಲಿನ ಗರ್ಲ್ಸ್ ಪಿಯು ಕಾಲೇಜಿನಲ್ಲಿಯೇ 450ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಅವರು ಮುಂದೆ ಸರ್ಕಾರಿ ಪದವಿ ಕಾಲೇಜಿಗೆ ಸೇರಬೇಕಾದರೆ ಬಾದಾಮಿ ಇಲ್ಲವೇ ಬಾಗಲಕೋಟೆಗೆ ಹೋಗಬೇಕು. ಊರಿನ ಖಾಸಗಿ ಕಾಲೇಜಿಗೆ ಶುಲ್ಕ ಪಾವತಿ ಸಾಧ್ಯವಾಗದೇ ಬಹಳಷ್ಟು ಮಂದಿ ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ನಮ್ಮೂರಿಗೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿಸಲಿ’ ಎಂದು ಸ್ಥಳೀಯ ಮಹಾಂತೇಶ ಕೆಲೂರ ಆಗ್ರಹಿಸುತ್ತಾರೆ.

ಪ್ರವಾಸೋದ್ಯಮ ಅಭಿವೃದ್ಧಿ, ಇನ್ನೂ ಮರಿಚಿಕೆ: ‘ಜಗತ್ತಿನ ಕೆಲವು ದೇಶಗಳಲ್ಲಿ ಯುನೆಸ್ಕೊ ಮನ್ನಣೆ ನೀಡಿದ ಒಂದೂ ಪಾರಂಪರಿಕ ತಾಣ ಇಲ್ಲ. ಆದರೆ ಕರ್ನಾಟಕದಲ್ಲಿ ಪಟ್ಟದಕಲ್ಲು ಸೇರಿದಂತೆ ಎರಡು ತಾಣಗಳು ಇವೆ. ಅಂತಹ ಹೆಮ್ಮೆಯ ನೆಲ ಇದು. ಆದರೆ ವಿದೇಶಿ ಪ್ರವಾಸಿಗರು ಅಲ್ಲಿಗೆ ಬಂದರೆ ಮಧ್ಯಾಹ್ನದ ವೇಳೆ ತುತ್ತು ಅನ್ನ ಸಿಗುವುದಿಲ್ಲ. ಇದು ನಮ್ಮ ಮೂರ್ಖತನದ ಪರಮಾವಧಿ’ ಎಂದು ಬಾದಾ
ಮಿಯ ಇತಿಹಾಸ ತಜ್ಞ ಡಾ. ಶಿಲಾಕಾಂತ ಪತ್ತಾರ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಪಟ್ಟದಕಲ್ಲಿನ ರೀತಿಯೇ ಮತ್ತೊಂದು ವಿಶ್ವ ಪಾರಂಪರಿಕ ತಾಣ ಮಧ್ಯಪ್ರದೇಶದ ಖುಜುರಾಹೊ ಕೂಡ ಪುಟ್ಟ ಹಳ್ಳಿ. ಅಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಿದೆ. ಪ್ರತಿ ದಿನ ಮುಂಜಾನೆ 600 ಪ್ರವಾಸಿಗರನ್ನು ಹೊತ್ತ ಬೊಯಿಂಗ್ ವಿಮಾನ ಬಂದಿಳಿಯುತ್ತದೆ. ಪಟ್ಟದಕಲ್ಲು ಖುಜುರಾಹೊಗಿಂತ 300 ವರ್ಷ ಹಳೆಯ ತಾಣ. ದುಖಃದ ಸಂಗತಿ ಎಂದರೆ ಬಾದಾಮಿ ರೈಲು ನಿಲ್ದಾಣದಲ್ಲಿ ಮುಂಬೈ–ಗದಗ, ಶಿರಡಿ ಎಕ್ಸ್‌ಪ್ರೆಸ್ ಪಾಸಿಂಗ್ ಟ್ರೈನ್‌ಗಳಿಗೆ ನಿಲುಗಡೆ ಇಲ್ಲ. ಬಾದಾಮಿಯ ಮ್ಯೂಸಿಯಂಗೆ ದ್ವಿಚಕ್ರ ವಾಹನಗಳಲ್ಲೂ ತೆರಳಲು ಸಾಧ್ಯವಿಲ್ಲ. ಸ್ಥಳೀಯಾಡಳಿತದ ಕೃಪೆ ಅಲ್ಲಿನ ಪರಿಸ್ಥಿತಿಯನ್ನು ಅಷ್ಟೊಂದು ಹದಗೆಡಿಸಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಶೇ 10ರಷ್ಟು ಮಾತ್ರ ಬಾದಾಮಿಯ ದರ್ಶನವಾಗುತ್ತದೆ. ಉಳಿದ 90 ಭಾಗ ಮುಖ್ಯವಾಹಿನಿಂದ ಹೊರಗೆ ಇದೆ. ಇಲ್ಲಿನ ಅಗಸ್ತ್ಯತೀರ್ಥ ಹೊಂಡಕ್ಕೆ ಊರ ಗಟಾರದ ನೀರು ಹರಿಯುವುದ ತಡೆಯಲು ಸಾಧ್ಯವಾಗಿಲ್ಲ. ಇನ್ನೆಲ್ಲಿಯ ಪ್ರವಾಸೋದ್ಯಮ ಅಭಿವೃದ್ಧಿ. ಇಲ್ಲಿನವರಿಗೆ ರಾಜಕೀಯ ಇಚ್ಛಾಶಕ್ತಿಯೂ ಇಲ್ಲ. ಈ ನೆಲ ಪ್ರೀತಿ ಮಾಡುವವರೇ ಇಲ್ಲ. ಅಮೂಲ್ಯ ಮಾಣಿಕ್ಯವೊಂದನ್ನು ಹಿರಿಯರು ನಮ್ಮ ಕೈಯಲ್ಲಿ ಕೊಟ್ಟು ಹೋಗಿದ್ದಾರೆ’ ಎಂದು ನೊಂದು ನುಡಿಯುತ್ತಾರೆ.

‘ಹಂಪಿ ರೀತಿ ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಮೂಲ ಸೌಕರ್ಯ ಕಲ್ಪಿಸಿ ಸಿದ್ದರಾಮಯ್ಯ ಅವರಾದರೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಿ’ ಎಂದು ಒತ್ತಾಯಿಸುತ್ತಾರೆ.

ಸಮಗ್ರ ನೀರಾವರಿಯ ಕನಸು..

‘ಮಲಪ್ರಭೆ, ಘಟಪ್ರಭೆ ಜಲಾಶಯಗಳಿಂದ ಕಾಲುವೆ ಮೂಲಕ ನೀರು ಹರಿಸಿ ತಾಲ್ಲೂಕನ್ನು ಸಮಗ್ರ ನೀರಾವರಿಗೆ ಒಳಪಡಿಸುವ ಕನಸಿಗೆ ಎರಡು ದಶಕ ಸಂದರೂ, ಅದಿನ್ನೂ ನನಸಾಗಿಲ್ಲ. ರಾಮದುರ್ಗ–ಕಾಕನೂರು, ಮುತ್ತಲಗೇರಿ, ಬನಶಂಕರಿ, ಬಾದಾಮಿ ಮೂಲಕ ಗುಳೇದಗುಡ್ಡಕ್ಕೆ ಮಲಪ್ರಭಾ ಎಡದಂಡೆ ಕಾಲುವೆ ಇದ್ದರೂ ಬನಶಂಕರಿಯಿಂದ ಮುಂದಕ್ಕೆ ನೀರು ಹರಿದು ದಶಕವೇ ಸಂದಿದೆ. ಇನ್ನು ಲೋಕಾಪುರ ಮೂಲಕ ಕಟಗೇರಿ, ಕೆಲವಡಿ, ತಿಮ್ಮಸಾಗರದ ಕಡೆಗೆ ಸಾಗುವ ಘಟಪ್ರಭಾ ಕಾಲುವೆಯಲ್ಲಿ ಇಲ್ಲಿಯವರೆಗೂ ಒಮ್ಮೆಯೂ ನೀರು ಹರಿದಿಲ್ಲ. ಬದಲಿಗೆ ಕಾಲುವೆ ದುರಸ್ತಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಹಾಕಲಾಗಿದೆ. ಹೊಲಗಾಲುವೆಗಳಂತೂ ಗುರುತೇ ಇಲ್ಲದಂತಾಗಿವೆ’ ಎಂದು ಹಿರಿಯರಾದ ಎಸ್.ಎಂ.ಹಿರೇಮಠ ಆರೋಪಿಸುತ್ತಾರೆ.

‘ಈಗ ಹೇಗಿದ್ದರೂ ತಾಲ್ಲೂಕಿನಲ್ಲಿ ಕಾಲುವೆ ಜಾಲ ಇದೆ. ಅದಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರು ಹರಿಸಿದರೆ ಎರಡು ತಾಲ್ಲೂಕುಗಳು ಸಮಗ್ರ ನೀರಾವರಿಯ ಕನಸು ನನಸಾದೀತು. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಾನೇ ಮನವಿ ಮಾಡುತ್ತೇನೆ’ ಎಂದು ಜೆಡಿಎಸ್‌ ಮುಖಂಡ ಹನುಮಂತ ಮಾವಿನಮರದ ಹೇಳುತ್ತಾರೆ.

ಕೆಂದೂರು ಕೆರೆ ತುಂಬಿಸಿ..

‘ಬಾದಾಮಿಯಿಂದ ಪಟ್ಟದಕಲ್ಲು–ಐಹೊಳೆ ಮಾರ್ಗದಲ್ಲಿ ಸಿಗುವ ಕೆಂದೂರು ಕೆರೆ 182 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಜಿಲ್ಲೆಯ ಅತಿ ದೊಡ್ಡ ಕೆರೆ ಎನಿಸಿದೆ. ಆದರೆ 10 ವರ್ಷಗಳಿಂದ ಸಂಪೂರ್ಣ ಒಣಗಿದೆ. ಕೆರೆಯ ಹೂಳು ತೆಗೆಸಿ, ಒತ್ತುವರಿ ತೆರವುಗೊಳಿಸಿ ಆಲಮಟ್ಟಿ ಹಿನ್ನೀರು ಇಲ್ಲವೇ ಘಟಪ್ರಭಾ ನದಿಯಿಂದ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಿ ಸುತ್ತಲಿನ ಹಳ್ಳಿಗಳ ಕೊಳವೆಬಾವಿಗಳು ಮರುಪೂರಣಗೊಳ್ಳಲಿವೆ. ನೀರು ತುಂಬಿದರೆ ಅಲ್ಲೊಂದು ಪಕ್ಷಿಧಾಮ ತಲೆ ಎತ್ತಲಿದೆ. ಮೀನುಗಾರಿಕೆ, ಬೋಟಿಂಗ್‌ಗೆ ಅವಕಾಶ ಮಾಡಿಕೊಟ್ಟರೆ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಯಾಗಲಿದೆ’ ಎಂದು ಬಾದಾಮಿಯ ನಿಸರ್ಗ ಬಳದ ಅಧ್ಯಕ್ಷ ಎಸ್‌.ಎಚ್‌.ವಾಸನ ಹೇಳುತ್ತಾರೆ.

10 ವರ್ಷವಾದರೂ ತಲೆ ಎತ್ತದ ಹೋಟೆಲ್ ಸಂಕೀರ್ಣ..

‘ಪಟ್ಟದಕಲ್ ಬಳಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಟೆಲ್ ಸಂಕೀರ್ಣ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ 10 ವರ್ಷಗಳ ಹಿಂದೆಯೇ ಪಕ್ಕದ ಕಾಟಾಪುರ ಗ್ರಾಮದ ಎಂಟು ಮಂದಿ ರೈತರಿಂದ 24 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ. ಆದರೆ ಅಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಜಾಗ ಮುಳ್ಳು–ಕಂಟಿಗಳಿಂದ ಆವೃತವಾಗಿದೆ. ಯೋಜನೆ ಕೈ ಬಿಡಲಾಗಿದೆ’ ಎಂದು ಇಲಾಖೆ ಹೇಳುತ್ತಿದೆ. ಸಾಗುವಳಿಗೆ ಜಮೀನು ಮರಳಿಸುವಂತೆ ರೈತರು ಈಗ ಪಟ್ಟುಹಿಡಿದಿದ್ದಾರೆ.

ಗುಳೇದಗುಡ್ಡ–ಐಹೊಳೆ ಸಂಪರ್ಕ ರಸ್ತೆ..

‘ಗುಳೇದಗುಡ್ಡದಿಂದ ನಿಂಬಲಗುಂದಿ ಮೂಲಕ ಐಹೊಳೆಗೆ ರಸ್ತೆ ನಿರ್ಮಿಸಿದರೆ ಸುತ್ತಲಿನ ಹಳ್ಳಿಗಳು ಪಟ್ಟಣದ ಜೊತೆ ಸಂಪರ್ಕಕ್ಕೆ ಬರುತ್ತವೆ. ಈಗ ಐಹೊಳೆಗೆ ಕಮತಗಿ ಮೂಲಕ 30 ಕಿ.ಮೀ ಸುತ್ತುಬಳಸಿ ಹೋಗಬೇಕಿದೆ. ಆಸಂಗಿ ಮಲಪ್ರಭಾ ಸೇತುವೆ ಮೂಲಕ ಈ ರಸ್ತೆ ಸಿದ್ಧವಾದಲ್ಲಿ ಐಹೊಳೆ ಕೇವಲ 9 ಕಿ.ಮೀ ಆಗಲಿದೆ. ಇದರಿಂದ ಸುತ್ತಲಿನ ಮುಳ್ಳೂರು, ಕಳ್ಳಿಗುಡ್ಡ, ಹೂವಿನಹಳ್ಳಿ, ಬೆನಕನವಾರಿ, ಐಹೊಳೆ, ಕುಣಿಬೆಂಚಿ ನೇರವಾಗಿ ಗುಳೇದಗುಡ್ಡದ ಸಂಪರ್ಕಕ್ಕೆ ಬರಲಿವೆ. ಇದು ಮಾರುಕಟ್ಟೆ, ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕವಾಗಿಯೂ ನೆರವಾಗಲಿದೆ’ ಎಂಬುದು ಸ್ಥಳೀಯರ ಒತ್ತಾಯ.

ಬಾದಾಮಿ ಬಗ್ಗೆ ಒಂದಷ್ಟು...

ಲಿಂಗಾನುಪಾತ ಕುಸಿತ: 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತ ಗಮನಿಸದರೆ 2011ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ 934 ಹೆಣ್ಣು ಮಕ್ಕಳು ಇದ್ದಾರೆ. 2001ರ ಜನಗಣತಿಯಲ್ಲಿ ಈ ಪ್ರಮಾಣ 942 ಇದೆ. ಇದು ಲಿಂಗಾನುಪಾತ ಕುಸಿತ ಬಿಂಬಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.