ADVERTISEMENT

ಉಪವಾಸ ಹಿಂದಕ್ಕೆ, ಧರಣಿ ನಿರಂತರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 9:55 IST
Last Updated 19 ಜೂನ್ 2011, 9:55 IST

ಮುಧೋಳ: ನಿರಾಣಿ ಸಕ್ಕರೆ ಕಾರ್ಖಾನೆಯಿಂದ ರೈತರ ಭೂಸ್ವಾಧೀನ  ಮತ್ತು ಪರಿಸರ ಮಾಲಿನ್ಯವಾಗುತ್ತಿರುವುದನ್ನು ವಿರೋಧಿಸಿ 52 ದಿನಗಳಿಂದ ನಡೆಯುತ್ತಿದ್ದ ರೈತರ ಉಪವಾಸ ಸತ್ಯಾಗ್ರಹ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮನವೊಲಿಕೆಯಿಂದ ಶನಿವಾರ ಕೊನೆಗೊಂಡು ಧರಣಿ ಮುಂದುವರಿಸಲು ತೀರ್ಮಾನಿಸಲಾಯಿತು.

ಮುಧೋಳದ ತಹಸೀಲ್ದಾರರ ಕಚೇರಿ ಮುಂಭಾಗ ನಡೆಯುತ್ತಿರುವ  ರೈತರ ಉಪವಾಸ ಸತ್ಯಾಗ್ರಹಕ್ಕೆ ಸರ್ಕಾರದ ಯಾವುದೇ ರೀತಿಯ ಸ್ಪಂದನೆ ದೊರೆಯದ ಕಾರಣ ಈ ತೀರ್ಮಾನ ಕೈಗೊಳ್ಳಲಾಯಿತು.

ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ದೇವೇಗೌಡ ಮಾತನಾಡಿ,  ಹೃದಯವಿಲ್ಲದ, ಕಲ್ಲುಹೃದಯದ ಮತ್ತು ರೈತ ವಿರೋಧಿ ಸರ್ಕಾರದ ಮುಂದೆ ಅಮರಣಾಂತ ಉಪವಾಸ ನಡೆಸಿ ಆರೋಗ್ಯ ಹದಗೆಡಿಸಿಕೊಳ್ಳುವ ಬದಲು ನಿರಂತರ ಧರಣಿ ನಡೆಸಿ, ನಾನೂ ಧರಣಿಯಲ್ಲಿ ಭಾಗವಹಿಸುತ್ತೇನೆ ಎಂದ ಕಾರಣ ಉಪವಾಸ ಸತ್ಯಾಗ್ರಹ ಕೈಬಿಡಲಾಯಿತು.

ಉಪವಾಸ ಸತ್ಯಾಗ್ರಹ ಕೈಬಿಡಲು ಒಪ್ಪಿದ ರೈತ ಮುಖಂಡರಾದ ಸಂಜು ಷಾ, ಸಂಗಣ್ಣ ಗವರೋಜಿ,ರವೀಂದ್ರ ಪಾಟೀಲ ಮತ್ತು ಗಣಪತಿ ಮೇತ್ರಿ ಅವರಿಗೆ ಹಣ್ಣಿನ ರಸವನ್ನು ಮಾಜಿ ಪ್ರಧಾನಿ ನೀಡುವ ಮೂಲಕ ಉಪವಾಸ ಸತ್ಯಾಗ್ರಹ ನಿಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಣ್ಣ ತಳೇವಾಡ, ರಮೇಶ ಗಡದನ್ನವರ, ಶಂಕರ ನಾಯ್ಕ, ಗಿರಿಯಪ್ಪ ಕಿವಡಿ, ಐ.ಎಚ್. ಅಂಬಿ, ಬಂಡು ಘಾಟಗೆ, ಎಂ.ಡಿ. ಗಾಯಕವಾಡ ಮುತ್ತಪ್ಪ ಕೋಮಾರ, ಅಶೋಕ ಕುಳಲಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.