ADVERTISEMENT

ಎಪಿಎಂಸಿ ಹೊರಗೆ ಖರೀದಿ ಬೇಡ: ಜಗದಾಳ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 6:40 IST
Last Updated 17 ಅಕ್ಟೋಬರ್ 2012, 6:40 IST

ಮಹಾಲಿಂಗಪುರ: ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಕೃಷಿ ಮಾರುಕಟ್ಟೆ ಪ್ರಾಂಗಣ ಹೊರತು ಪಡಿಸಿ ಬೇರೆ ಸ್ಥಳಗಳಲ್ಲಿ ನಡೆಸುತ್ತಿರುವ ಖರೀದಿಯನ್ನು ನಿಲ್ಲಿಸಬೇಕೆಂದು ಕೆಸರಗೊಪ್ಪದ ಕೃ.ಮಾ.ನಿರ್ದೇಶಕ ಬಾಳಪ್ಪ ಜಗದಾಳ ಆಗ್ರಹಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯ ಸಾಮಾನ್ಯ ಸಭೆಯಲ್ಲಿ ಜಗದಾಳ ವಿಷಯ ಪ್ರಸ್ತಾಪಿಸಿ ಕಾನೂನು ಪ್ರಕಾರ ಎಲ್ಲ ಖರೀದಿದಾರರು ಎಪಿಎಂಸಿ ಆವರಣದಲ್ಲೇ ಖರೀದಿ ಪ್ರಕ್ರಿಯೆ ನಡೆಸಬೇಕು. ಆದರೆ ಎಪಿಎಂಸಿಗೆ ಕಿಲೋಮೀಟರ್‌ಗಟ್ಟಲೆ ದೂರದಲ್ಲಿ ಖರೀದಿ ನಡೆಯುವುದರಿಂದ ತೂಕ, ಲೆಕ್ಕ ಹಾಗೂ ದಾಖಲೆ ರಹಿತ ವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಹೊರಗೆ ನಡೆಯುತ್ತಿರುವ ಎಲ್ಲ ಖರೀದಿಗಳನ್ನು ಎಪಿಎಂಸಿ ಆವರಣಕ್ಕೆ ತರಬೇಕು ಎಂದು ಅವರು ಮನವಿ ಮಾಡಿದರು.

ಇಲ್ಲಿಯ ವರೆಗೆ ಕೃಷಿ ಮಾರುಕಟ್ಟೆ ನೋಂದಾಯಿತ ಖರೀದಿದಾರರು ಸಂತೆಯ ದಿನದಂದು ಮಾರುಕಟ್ಟೆ ಪ್ರಾಂಗಣ ಹೊರತು ಪಡಿಸಿ ಮುಧೋಳ ರಸ್ತೆ, ಬುದ್ನಿ, ಕೆಸರಗೊಪ್ಪ ರಸ್ತೆಯಲ್ಲಿ ಖರೀದಿ ಪ್ರಕ್ರಿಯೆ ನಡೆಸುತ್ತ ಬಂದಿದ್ದಾರೆ. ಸರಿಯಾದ ಮೇಲ್ವಿಚಾರಣೆ ಆಗದೇ ಖರೀದಿಯಲ್ಲಿ ಅನೇಕ ಲೋಪದೋಷಗಳಾಗಿವೆ. ಖರೀದಿದಾರರಿಂದ ಆಗಿರುವ ಅವ್ಯವಹಾರಗಳು ಇತ್ತೀಚೆಗೆ ಕಂಡುಬಂದಿದ್ದು, ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದೆ ಎಂದರು.

ಪುರಸಭೆಗೆ ತೆರಿಗೆ ಕಟ್ಟುವ ವಿಚಾರದಲ್ಲಿ ಮಾತುಕತೆ ನಡೆದು ನೀರು, ಚರಂಡಿ ಹಾಗೂ ಸ್ವಚ್ಛತಾ ವ್ಯವಸ್ಥೆಯನ್ನು ಸಮಿತಿ ಮಾಡಿಕೊಳ್ಳುವುದಾದರೆ ಪುರಸಭೆಗೆ ತೆರಿಗೆ ಏಕೆ ಕಟ್ಟಬೇಕು ಎಂದು ಸದಸ್ಯರಾದ ಮಹಾಂತೇಶ ಪಟ್ಟಣಶೆಟ್ಟಿ ಹಾಗೂ ಅಶೋಕ ಕುಳಲಿ ಪ್ರಶ್ನಿಸಿದರು. ಹಮಾಲರಿಗಾಗಿ ನಿರ್ಮಿಸಿ ಕೊಡಬೇಕಾಗಿರುವ 108 ಮನೆಗಳ ಪೈಕಿ ಕೇವಲ 51 ಮನೆಗಳನ್ನು ನಿರ್ಮಿಸಲಾಗಿದೆ. ಉಳಿದ 57 ಮನೆಗಳನ್ನು ಯಾವಾಗ ನಿರ್ಮಿಸುತ್ತೀರಿ ಎಂಬ ವಿವರವನ್ನೂ ಕೇಳಿದರು.

ಸಭೆಯ ಅಧ್ಯಕ್ಷತೆಯನ್ನು ಎಪಿಎಂಸಿ ಅಧ್ಯಕ್ಷ ಎಂ.ಎಲ್.ಮಾಚಕನೂರ ವಹಿಸಿದ್ದರು. ಕಾರ್ಯದರ್ಶಿ ಎಚ್.ಎ. ಪುರಾಣಿಕ ಹಿಂದಿನ ಸಭೆಯ ನಡುವಳಿಕೆ ಸಭೆಗೆ ತಿಳಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಾರುತಿ ಹವಾಲ್ದಾರ, ಶಿವಾನಂದ ಕಾಂಬಳೆ, ವಂದನಾ ಚಂದನಶಿವ, ಹಿಂದಿನ ಅಧ್ಯಕ್ಷ ಹಣಮಂತ ತುಳಸೀಗೇರಿ, ಸತ್ಯಪ್ಪಗೌಡ ನ್ಯಾಮಗೌಡ್ರ, ಭೀಮಪ್ಪ ಬಂದಿ, ಅರ್ಜುನ ಚೌರಡ್ಡಿ, ಲೋಕಣ್ಣ ಕತ್ತಿ, ನಿಂಗಪ್ಪ ಜಗದಾಳ ಹಾಗೂ ವೆಂಕಪ್ಪ ಗೊಬ್ಬರದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.