ಬೀಳಗಿ: ತಾಲ್ಲೂಕಿನ ನಾಗರಾಳ ಗ್ರಾಮದ ದಕ್ಷಿಣಕ್ಕೆ ಬೆಟ್ಟದ ಮೇಲಿರುವ ಕಾನನದ ದೇವಿ ಕಪ್ಪರ ಪಡಿಯಮ್ಮನ (ಲಕ್ಷ್ಮೆದೇವಿ) ರಥೋತ್ಸವ ಇದೇ 2ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಯುಗಾದಿ ಅಮವಾಸ್ಯೆಯನಂತರ ಚೈತ್ರ ಶುದ್ಧ ಪ್ರತಿಪದೆಯಿಂದ ಪ್ರಾರಂಭಗೊಳ್ಳುವ ತಾಯಿ ಪಡಿಯಮ್ಮನ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ನಾಗರಾಳದ ದಿಗಂಬರೇಶ್ವರ ಮಠದಲ್ಲಿ ಅಲ್ಲಿನ ಪೀಠಾಧಿಪತಿಗಳ ನೇತೃತ್ವದಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬರುತ್ತಿವೆ.
ಬಾದಾಮಿ ಬನಶಂಕರಿಯ ರಥೋತ್ಸವ ಯಾವ ವಾರ ನಡೆಯುತ್ತದೆಯೋ ಅದೇ ವಾರದಂದು ನಾಗರಾಳ ಕಪ್ಪರ ಪಡಿಯಮ್ಮನ ರಥೋತ್ಸವ ನಡೆಯುತ್ತದೆ. ಈಗ ಮೂರು ತಿಂಗಳಿನ ಹಿಂದೆ ಬಾದಾಮಿ ರಥೋತ್ಸವ ನಡೆದದ್ದು ಸೋಮವಾರ. ಇಂದು ನಡೆಯುವ ಕಪ್ಪರ ಪಡಿಯಮ್ಮನ ರಥೋತ್ಸವ ಕೂಡಾ ಸೋಮವಾರವೇ ಆಗಿದೆ.
ರಥೋತ್ಸವದ ದಿನ ಸುಂದರವಾದ ಕೆತ್ತನೆಯಿಂದ ಕೂಡಿದ ಕಟ್ಟಿಗೆ ರಥಕ್ಕೆ ಹೂಹಾರ, ಬಾಳೆಯ ಗೊನೆ, ಕಬ್ಬಿನ ಗರಿಯಿಂದ ಸಿಂಗರಿಸಿದ್ದರೂ ಕೂಡ ಢಾಳಾಗಿ ಎದ್ದು ಕಾಣುವಂತೆ ಹಸಿರು ಸೀರೆಯನ್ನು ತೊಡಿಸುತ್ತಾರೆ.
ತೇರನ್ನೆಳೆಯುವಾಗ ತೇರಿನಲ್ಲಿ ದಿಗಂಬರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನಿರಿಸಿ ರುತ್ತಾರೆ. ಹಾಗಂತ ಅದು ದಿಗಂಬರೇಶ್ವರರ ತೇರಾಗಲಾರದು. ಕಾರಣವೆಂದರೆ ಹಸಿರು ಸೀರೆಯನ್ನುಟ್ಟ ತಾಯಿ ಪಡಿಯಮ್ಮನ ಮಡಿಲಲ್ಲಿ ದಿಗಂಬರೇಶ್ವರರು ಮಗುವಾಗಿ ಕುಳಿತಿರುತ್ತಾರೆ ಅಷ್ಟೇ. ಪಡಿಯಮ್ಮ ಹಾಗೂ ದಿಗಂಬರೇಶ್ವರರದು ತಾಯಿ ಮಗುವಿನ ಸಂಬಂಧವೆಂದು ಹೇಳುತ್ತಾರೆ. ಹಾಗಾಗಿಯೇ ಇದು ಪಡಿಯಮ್ಮನ ತೇರೆಂದು ಕರೆಯುತ್ತಾರೆ.
ಈ ಮಠದ ಮೂಲ ಸ್ವಾಮಿಗಳಾದ ದಿಗಂಬರೇಶ್ವರರು ಗೋಕಾಕ ತಾಲ್ಲೂಕಿನ ಯೋಗಿಕೊಳ್ಳದಿಂದ ತಾಯಿಯ ಆಜ್ಞೆಯೊಂದಿಗೆ ಆಕೆಯೊಡನೆ ಇಲ್ಲಿಗೆ ಬಂದು ನೆಲೆಸುತ್ತಾರೆ. ಅವರನ್ನು ತಾಯಿಯ ರೂಪದಲ್ಲಿ ಕಪ್ಪರ ಪಡಿಯಮ್ಮನೇ ಸಲುಹಿದ್ದನ್ನು ಇಲ್ಲಿನ ಜನ ಇಂದಿಗೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ರಥೋತ್ಸವದ ಮರುದಿನ ಏ. 3ರಂದು ಸಂಜೆ 5 ಗಂಟೆಗೆ ಹಾಲೋಕಳಿ, ನಲವತ್ತು ಅಡಿ ಎತ್ತರದ ಮೂರೂವರೆ ಅಡಿ ಸುತ್ತಳತೆಯ ಜಾರುಗಂಬವನ್ನು ತೆಕ್ಕೆಬಡಿದು ಏರುವುದು ಸಾಹಸವೇ ಹೌದು.
ಮೇಲಿಂದ ಹರಿದು ಬರುತ್ತಿರುವ ಹಾಲು, ತುಪ್ಪ, ಬೆಣ್ಣೆಯಂತಹ ಜಿಡ್ಡಿನ ದ್ರವ ಪದಾರ್ಥಗಳನ್ನು ಎದುರಿಸುತ್ತಲೇ ಮುಂಗೈಯ್ಯಲ್ಲಿ ಬಲವಿದ್ದವರು ಏರಿ ಮಠದಿಂದ ಬೆಳ್ಳಿಯ ಕಡಗ, ರುಮಾಲು ಪಡೆದುಕೊಳ್ಳುವುದು ಸಾಮಾನ್ಯ ಮಾತಲ್ಲ. ಅಳ್ಳೆದೆಯವರು ನೋಡಿ ಬೆಚ್ಚಿ ಬೀಳುವಂತಹುದು.
ಏ.4 ರಂದು ನಾಡಿನ ಹೆಸರಾಂತ ಕುಸ್ತಿಪಟುಗಳಿಂದ ಜಂಗಿ ಕುಸ್ತಿಗಳು ನಡೆಯುತ್ತವೆ. ಏ.5 ರಂದು ಜಾನುವಾರುಗಳ ಜಾತ್ರೆ. ಉತ್ತರ ಕರ್ನಾಟಕದ ದೊಡ್ಡ ಜಾನುವಾರು ಜಾತ್ರೆಗಳಲ್ಲೊಂದು ಹೆಸರು ಮಾಡಿರುವ ಜಾನುವಾರು ಜಾತ್ರೆಗೆ ದೂರದೂರಿನಿಂದ ಹಲವಾರು ತಳಿಯ ಜಾನುವಾರುಗಳು ಬರುತ್ತವೆ.
ಇನ್ನೇನು ಮಳೆಗಾಲ ಪ್ರಾರಂಭಗೊಳ್ಳುವ ಸಮಯವಾಗಿರುವುದರಿಂದ ಜಾನುವಾರುಗಳ ವ್ಯಾಪಾರ ಜೋರಾಗಿಯೇ ನಡೆಯುತ್ತದೆ. ಉತ್ತಮ ರಾಸುಗಳಿಗೆ ಮಠದಿಂದ ಪಾರಿತೋಷಕ ನೀಡಲಾಗುತ್ತದೆ. ಏ.6ರಂದು ಕಳಸವನ್ನಿಳಿಸಿ ಮೆರವಣಿಗೆ ಮಾಡಿ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯುತ್ತಾರೆ.
ಐದೂ ದಿನಗಳ ಕಾಲ ಮಠದ ಆವರಣದಲ್ಲಿ ಲೇಝಿಮ್, ಗೀಗೀಪದ, ಲಾವಣಿ, ಹಲಗಿ ಮದಾಲಸಿ, ಭಜನೆ, ಜಾನಪದ ನೃತ್ಯ, ಬಯಲಾಟಗಳು, ಸ್ಥಳೀಯ ಕಲಾವಿದರಿಂದ ನಾಟಕಗಳು ಅವ್ಯಾಹತವಾಗಿ ಪ್ರದರ್ಶನಗೊಳ್ಳುತ್ತಿರುತ್ತವೆ. ಎಲ್ಲ ಕಲಾವಿದರಿಗೂ ಸಮಾನ ಅವಕಾಶ ಕಲ್ಪಿಸಿ, ಅವರನ್ನು ಗೌರವಿಸಿ ಪ್ರೋತ್ಸಾಹಿಸುವುದರೊಂದಿಗೆ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವತ್ತ ನಾಗರಾಳ ದಿಗಂಬರೇಶ್ವರರ ಮಠವು ಶ್ರಮಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.