ADVERTISEMENT

ಕಬ್ಬಿನ ದರ: ₹ 3140 ನಿಗದಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 5:31 IST
Last Updated 8 ನವೆಂಬರ್ 2017, 5:31 IST
ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ಕಾರ್ಖಾನೆ ಅಧ್ಯಕ್ಷ ಮುರುಗೇಶ ನಿರಾಣಿ ಮಾತನಾಡಿದರು
ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ಕಾರ್ಖಾನೆ ಅಧ್ಯಕ್ಷ ಮುರುಗೇಶ ನಿರಾಣಿ ಮಾತನಾಡಿದರು   

ಜಮಖಂಡಿ: ‘ತಾಲ್ಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ 2016–17ನೇ ಸಾಲಿನಲ್ಲಿ ರೈತರು ಪೂರೈಸಿದ ಪ್ರತಿ ಟನ್‌ ಕಬ್ಬಿಗೆ ₹ 3140 ದರ ನಿಗದಿ ಮಾಡಲಾಗಿದ್ದು, ಈಗಾಗಲೇ ₹2700 ಮೊದಲ ಕಂತಿನ ಹಣ ಪಾವತಿಸಲಾಗಿದೆ’ ಎಂದು ಕಾರ್ಖಾನೆ ಅಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಕರೆದ ರೈತರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ರಾಜ್ಯದ ಯಾವುದೇ ಖಾಸಗಿ ಸಕ್ಕರೆ ಕಾರ್ಖಾನೆ ನೀಡದ ದರ ನಮ್ಮ ಕಾರ್ಖಾನೆ ನೀಡುತ್ತಿದೆ. ಬಾಕಿ ಹಣ ಪ್ರತಿ ಟನ್‌ಗೆ ₹340 ಅನ್ನು ಪಾವತಿಸಲಾಗುವುದು ಎಂದರು.

ಕಾರ್ಖಾನೆಗೆ ಪೂರೈಸಿದ co 671, co 92005, co94012 ಕಬ್ಬು ತಳಿಗಳಿಗೆ ಮಾತ್ರ ಈ ದರ ಅನ್ವಯ ಆಗಲಿದೆ. ಸಮೀರವಾಡಿ ಅಥವಾ ಉಗಾರ ಸಕ್ಕರೆ ಕಾರ್ಖಾನೆಗಳು ಪ್ರಕಟಿಸುತ್ತಿದ್ದ ಕಬ್ಬುದರ ಈವರೆಗೆ ರೈತರ ಬೇಡಿಕೆಗೆ ಆಧಾರವಾಗಿರುತ್ತಿದ್ದವು. ಆದರೆ, ಇನ್ನೂ ಮುಂದೆ ಸಾಯಿಪ್ರಿಯಾ ಕಾರ್ಖಾನೆ ದರ ರೈತರ ಬೇಡಿಕೆಗೆ ಆಧಾರವಾಗಲಿದೆ ಎಂದರು.

ADVERTISEMENT

ಕಬ್ಬಿನ ಬೀಜ, ಗೊಬ್ಬರ ಹಾಗೂ ಕೊಳವೆ ಬಾವಿ ಕೊರೆಯಲು ಮುಂಗಡ ಹಣ ಕೇಳುವ ರೈತರಿಗೆ ಹಣ ಪಾವತಿಸುವ ಬದಲಾಗಿ ನೇರವಾಗಿ ಪೂರೈಸುವುದಾಗಿ ಭರವಸೆ ನೀಡಿದರು. 2017–18ನೇ ಸಾಲಿಗೆ ಕಬ್ಬುದರ ಇನ್ನೂ ನಿಗದಿ ಮಾಡಿಲ್ಲ. ಯೋಗ್ಯ ದರ ನೀಡಲಾಗುತ್ತದೆ ಎಂಬ ವಿಶ್ವಾಸದಿಂದ ರೈತರು ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಎಂದರು.

ಪ್ರಸಕ್ತ ಹಂಗಾಮಿನಲ್ಲಿ ಅಂದಾಜು 10 ಲಕ್ಷ ಟನ್‌ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಬರುವ ಜನವರಿ ತಿಂಗಳ ವರೆಗೆ ಕಬ್ಬು ನುರಿಸುವ ಹಂಗಾಮು ಮುಂದುವರಿಯಲಿದೆ ಎಂದರು. ಮಾಜಿ ಶಾಸಕ ಸಿದ್ದು ಸವದಿ, ಅರುಣಕುಮಾರ ಶಹಾ, ಟಿ.ಎ. ಬಿರಾದಾರ, ಶ್ರೀಶೈಲ ದಳವಾಯಿ, ಡಾ.ಮಹಾವೀರ ದಾನಿಗೊಂಡ, ಡಾ.ಎ.ಆರ್‌. ಬೆಳಗಲಿ, ಬಿ.ಎಸ್‌. ಸಿಂಧೂರ, ಪುಂಡಲೀಕ ಪಾಲಬಾವಿ, ಕಾಡು ಮಾಳಿ, ವಿರೂಪಾಕ್ಷಯ್ಯ ಕಂಬಿ, ಮಾಮೂನ ಪಾರ್ಥನಳ್ಳಿ, ವರ್ಧಮಾನ ಯಲಗುದ್ರಿ, ವಿ.ಆರ್‌. ದೇಸಾಯಿ, ಎ.ಬಿ. ಮನಗೂಳಿ, ಸಿ.ಪಿ. ಜನವಾಡ, ಡಾ.ರಾಕೇಶ ಲಾಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.