ADVERTISEMENT

ಕೃಷಿ ಪ್ರಗತಿಗೆ ರೈತಕೂಟ ಪೂರಕ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 9:05 IST
Last Updated 21 ಮಾರ್ಚ್ 2011, 9:05 IST

ಬಾಗಲಕೋಟೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಹಾಗೂ ಸನ್ಮತಿ ಎಜ್ಯುಕೇಶನಲ್ ಆ್ಯಂಡ್ ವೆಲ್‌ಫೇರ್ ಅಸೋಸಿಯೇಷನ್(ಸೇವಾ) ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಜಮಖಂಡಿ ತಾಲ್ಲೂಕಿನ ತುಂಗಳ ಗ್ರಾಮದಲ್ಲಿ ಮಹಿಳಾ ರೈತಕೂಟ ಹಾಗೂ ರೈತಕೂಟಗಳನ್ನು ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎನ್.ರವಿಕುಮಾರ, ‘ಇಪ್ಪತ್ತೈದು ವರ್ಷಗಳ ಹಿಂದೆ ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಸಾಲ ದೊರಕುವುದು ದುರ್ಲಭವಾಗಿತ್ತು. ಆದರೆ 1990ರಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಲ ನೀಡಬೇಕು ಎಂಬುದನ್ನು ನಬಾರ್ಡ್ ಕಡ್ಡಾಯಗೊಳಿಸುವ ಮೂಲಕ ದಿಟ್ಟ ಹೆಜ್ಜೆಯನ್ನಿಟಿತು’ ಎಂದು ತಿಳಿಸಿದರು.

ಕೃಷಿ ಅಭಿವೃದ್ಧಿ, ವೈಜ್ಞಾನಿಕ ಪದ್ಧತಿ ಅಳವಡಿಕೆ ಸೇರಿದಂತೆ ಸಮಗ್ರ ಕೃಷಿ ಅರಿವು ಮೂಡಿಸುವುದಕ್ಕಾಗಿ  ರೈತಕೂಟ ಸ್ಥಾಪಿಸಲಾಗುತ್ತಿದ್ದು, ಬ್ಯಾಂಕಿಂಗ್ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಪ್ರಯೋಜನ ಪಡೆಯುವುದು ಇದರ ಪ್ರಮುಖ ಉದ್ದೇಶ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ಕಾರ್ಯನಿರ್ವಾಹಕ ಬಿ.ಆರ್.ಹಿರೇಮಠ, ಕೃಷಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ರೈತಕೂಟಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು. ಮಹಿಳಾ ರೈತಕೂಟ ಹಾಗೂ ರೈತಕೂಟಗಳನ್ನು ಉದ್ಘಾಟಿಸಿದ ಆಶಾ ರವಿಕುಮಾರ ಅವರನ್ನು ಕೂಟಗಳ ಸದಸ್ಯರ ವತಿಯಿಂದ ಸನ್ಮಾನಿಸಲಾಯಿತು.

ತುಂಗಳ ಗ್ರಾಮದ ಲಕ್ಷ್ಮೀವೆಂಕಟೇಶ್ವರ ರೈತಕೂಟದ ಸಂಯೋಜಕ ಗೌಡಪ್ಪ ಹೊಸೂರ, ಭೂದೇವಿ ಮಹಿಳಾ ರೈತಕೂಟದ ಇಂದ್ರವ್ವ ಗಿರಡ್ಡಿ, ಗದ್ಯಾಳ ಗ್ರಾಮದ ಬಸವೇಶ್ವರ ರೈತಕೂಟದ ಶಿವಾನಂದ ಪಾಟೀಲ, ಶ್ರೀದೇವಿ ಮಹಿಳಾ ರೈತಕೂಟದ ಶಾಂತಾ ಹರನಾಳ, ಕುರಗೋಡದ ರೇವಣಸಿದ್ಧೇಶ್ವರ ರೈತಕೂಟದ ಮಹಾದೇವ ವಜ್ರವಾಡ, ಕನ್ನೊಳ್ಳಿಯ ಗಜಾನನ ರೈತಕೂಟದ ಕೇಶವ ನಿಂಬಾಳಕರ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಂಸ್ಥೆಯ ಅಶೋಕ ಎಂ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತ ಗಿರಡ್ಡಿ ನಿರೂಪಿಸಿದರು. ಸೇವಾ ಸಂಸ್ಥೆಯ ಮಹಾದೇವಿ ಎಸ್.ಎಚ್.ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.