ADVERTISEMENT

ಕೊಯ್ನಾದಿಂದ ರಾಜ್ಯಕ್ಕೆ ನೀರು: ಶೆಟ್ಟರ್

ಕಾಂಗ್ರೆಸ್ ಟಿಕೆಟ್ ಹಣಕ್ಕೆ ಮಾರಾಟ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:45 IST
Last Updated 5 ಏಪ್ರಿಲ್ 2013, 6:45 IST

ಬಾಗಲಕೋಟೆ: `ಬೆಳಗಾವಿ ಮತ್ತು ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಬೃಹತ್ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಿಯೋಗವೊಂದು ಒಂದೆರಡು ದಿನದಲ್ಲಿ ಮಹಾರಾಷ್ಟ್ರಕ್ಕೆ ತೆರಳಲಿದೆ. ಆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕೊಯ್ನಾದಿಂದ ನೀರು ಬಿಡಿಸಲು ಮನವಿ ಮಾಡಲಿದೆ. ಅಗತ್ಯ ಬಿದ್ದರೆ ನೀರಿಗಾಗಿ ಹಣ ಕೊಡಲು ಸಿದ್ಧರಿದ್ದೇವೆ' ಎಂದರು.

ಹಣಕ್ಕೆ ಮಾರಾಟ: `ಕಾಂಗ್ರೆಸ್ ಹಣಕ್ಕೆ ಟಿಕೆಟ್ ಮಾರಾಟ ಮಾಡಿಕೊಳ್ಳುತ್ತಿದೆ. ಹೀಗೆಂದು ಆ ಪಕ್ಷದ ಟಿಕೆಟ್ ವಂಚಿತರೇ ಆರೋಪ ಮಾಡುತ್ತಿದ್ದಾರೆ. ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಗೊಂದಲ, ಬಡಿದಾಟ ನಡೆಯುತ್ತಿದೆ. ಒಂದು ವೇಳೆ ಅಧಿಕಾರಕ್ಕೆ ಬಂದರೆ ಆಡಳಿತ ಹೇಗೆ ನಡೆಸುತ್ತಾರೆ' ಎಂದು ವ್ಯಂಗ್ಯವಾಡಿದರು.

`ಐದು ವರ್ಷದ ಬಿಜೆಪಿ ಆಡಳಿತದಲ್ಲಿ ರಾಜ್ಯದ ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ್ಙ10 ಸಾವಿರ ಕೋಟಿ ಅನುದಾನ ಖರ್ಚು ಮಾಡಲಾಗಿದೆ. 3300 ಗ್ರಾಮಗಳನ್ನು ಸುವರ್ಣ ಗ್ರಾಮ ಯೊಜನೆಯಡಿ ಆಯ್ಕೆ ಮಾಡಿಕೊಂಡು ಪ್ರತಿ ಗ್ರಾಮಕ್ಕೆ ತಲಾ ್ಙ1 ಕೋಟಿ ವಿಶೇಷ ಅನುದಾನ ನೀಡುವ ಮೂಲಕ ಮೂಲ ಸೌಲಭ್ಯ ಒದಗಿಸಲಾಗಿದೆ' ಎಂದರು.

`ಐದು ವರ್ಷದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡದೇ ಅನ್ಯಾಯ ಮಾಡಿದೆ. 2 ವರ್ಷದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ `ನಮ್ಮ ಗ್ರಾಮ, ನಮ್ಮ ರಸ್ತೆ' ಯೋಜನೆಯಡಿ 50 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ' ಎಂದು ಹೇಳಿದರು.

`ರೂ 3600 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಡಾ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ವಿಶೇಷ ಅನುದಾನ ನೀಡಲಾಗಿದೆ. ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ 50 ಸಾವಿರ ಆಸರೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆಡಳಿತ ಸುಧಾರಣೆಗಾಗಿ ಹೊಸದಾಗಿ 43 ತಾಲ್ಲೂಕು ರಚನೆ ಮಾಡಲಾಗಿದೆ' ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, `ಬಿಜೆಪಿ ಆಡಳಿತಾವಧಿಯ ಆರಂಭದ ಮೂರು ವರ್ಷಗಳಲ್ಲಿ ಗೊಂದಲ ಉಂಟಾಗಿರುವುದು ನಿಜ. ಆದರೆ, ಬಳಿಕ ಎರಡು ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದೇವೆ. ಮುಂಬರುವ ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೊಂದಲ ಮುಕ್ತ ಆಡಳಿತ ನೀಡುತ್ತೇವೆ' ಎಂದರು.

`ಸತ್ತ ನಾಯಕರ ಹೆಸರಲ್ಲಿ...': `ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸುವ ಸಂಸ್ಕೃತಿ ಬೆಳೆಸಿಕೊಂಡಿದೆ. ಆದರೆ, ಕಾಂಗ್ರೆಸ್ ಸತ್ತ ನಾಯಕರ ಹೆಸರಲ್ಲಿ ಅನುಕಂಪದ ಆಧಾರದ ಮೇಲೆ ಮತ ಕೇಳುವ ಪಕ್ಷವಾಗಿದೆ' ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.