ADVERTISEMENT

ಗಾನಸುಧೆ ಹರಿಸಿದ ಕೂಡಲಸಂಗಮದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 12:25 IST
Last Updated 24 ಜನವರಿ 2011, 12:25 IST

ಕೂಡಲಸಂಗಮ: ಗಾಯನದ ಮೂಲಕ ನಾಡು ಕಟ್ಟುವ ಸದಾಶಯದ ಮಹಾನ್ ಗಾಯಕ ದಿವಂಗತ ಸಿ.ಅಶ್ವತ್ಥ್. ಕವಿತೆ ಗೀತೆಯಾಗಿ ಧ್ವನಿ ಸುರುಳಿಯಾಗುವುದು ಮಹತ್ವದಲ್ಲ,  ಕರ್ನಾಟಕದ ಸಕಲ ಯುವ ಗಾಯಕ, ಗಾಯಕಿಯರ ಧ್ವನಿಯಾದಾಗಲೇ ಅದಕ್ಕೆ ಮಹತ್ವ ಎಂದು ನಂಬಿದವರು ಅವರು. ಇಂತಹ ಕನಸೊಂದು ನನಸಾಗುವ ಮೊದಲೇ ಅವರು ಕಾಲವಾದರು.

ಕರ್ನಾಟಕದ ಜನತೆಯಲ್ಲಿ ನಿತ್ಯವು ಹಚ್ಚ ಹಸರಾಗಿರುವ ಗಾಯಕ ಸಿ.ಅಶ್ವತ್ಥ್ ಅವರ ಜನ್ಮಮತ್ತು ಕೊನೆಯ ದಿನವಾದ ಡಿಸೆಂಬರ್ 29ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಮೈದಾನದಲ್ಲಿ  ಆದರ್ಶ ಸುಗಮ ಸಂಗೀತ ಅಕಾಡೆಮಿ, ಅದಮ್ಯ ಚೇತನ ಸಹಯೋಗದಲ್ಲಿ ಕಿಕ್ಕೇರಿ ಕೃಷ್ಣ ಮೂರ್ತಿಯವರ ನೇತೃತ್ವದಲ್ಲಿ  ಕನ್ನಡವೇ ಸತ್ಯ-ಅಶ್ವತ್ಥ್ ನಿತ್ಯ ಎಂಬ ನಾಲ್ಕು ಗಂಟೆ ವಿನೂತನ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು.

 ಈ ಕಾರ್ಯಕ್ರಮಕ್ಕೆ ಸಂಘಟಕರು ಆರು ರಾಜ್ಯದ ಗ್ರಾಮೀಣ ಭಾಗದ ಯುವ ಗಾಯಕರನ್ನು ಆಯ್ಕೆ ಮಾಡಿಕೊಂಡು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮೀಣ ಭಾಗದ ಯುವ ಗಾಯಕರನ್ನು ರಾಜಧಾನಿಯಲ್ಲಿ ಪರಿಚಯಿಸುವಂತಹ ಕಾರ್ಯ ವಿಶಿಷ್ಟವಾಗಿತ್ತು.

ರಾಜ್ಯದ ಗ್ರಾಮೀಣ ಭಾಗದ 3500 ಯುವ ಗಾಯಕರು ಒಂದೇ ವೇದಿಕೆಯಲ್ಲಿ ಹಾಡುವಂತೆ ಮಾಡಿರುವುದು ಮಹತ್ವದಾಗಿದೆ. ಇಂತಹ ವಿನೂತನ ಕಾರ್ಯಕ್ರಮಕ್ಕೆ ಕೂಡಲಸಂಗಮ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರೇಖಾ ಇಜಾರದಾರ, ಅನ್ನಪೂರ್ಣ ಅಂಬಿಗೇರ, ಪೂರ್ಣಿಮಾ ಮನಗೂಳಿ ಹಾಗೂ ಹುನಗುಂದ ಸರಕಾರಿ ಪ್ರೌಢ ಶಾಲೆಯ ಶ್ರುತಿ, ಅಶ್ವಿನಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದರು.

 ಈ ವಿದ್ಯಾರ್ಥಿಗಳಿಗೆ ಹಾಡುವಂತೆ ಸ್ಪೂರ್ತಿ ತುಂಬಿ ಯುವ ಗಾಯಕರನ್ನಾಗಿ ಮಾಡುತ್ತಿರುವ ಶಿಕ್ಷಕರಾದ ವಿಜಯ ಗದ್ದನಕೇರಿ, ನಂದನಗೌಡ ದ್ಯಾಪೂರ ಹಾಗೂ ದಾನೇಶ್ವರಿ ಸಾರಂಗಮಠ ಅವರ ಕಾರ್ಯ ಶ್ಲಾಘನೀಯ.

 ಈಗಾಗಲೇ ರಾಜ್ಯ ಮಟ್ಟದ ಪ್ರತಿಯೊಂದು ಕಾರ್ಯಕ್ರಮದಲ್ಲಿ ರೈತ ಗೀತೆ ನಾಡಗೀತೆ ಹಾಡುವುದರ ಮೂಲಕ ಎಲ್ಲರ ಗಮನ ಸೆಳೆದರಿರುವ ಈ ಮಕ್ಕಳಿಗೆ ಇನ್ನೂ ಅಧಿಕ ಅವಕಾಶಗಳು ದೊರೆತರೆ  ಖಂಡಿತವಾಗಿಯೂ ಇವರು ಉತ್ತಮ ಗಾಯಕರಾಗುವುದರಲ್ಲಿ ಸಂದೇಹವಿಲ್ಲ.
ಶ್ರೀಧರ ಗೌಡರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.