ಮಹಾಲಿಂಗಪುರ: ಪಟ್ಟಣದ ಅನೇಕ ಪಾನ್ ಬೀಡಾ ಹಾಗೂ ಕಿರಾಣಿ ಅಂಗಡಿಗಳ ಮೇಲೆ ಹಠಾತ್ ದಾಳಿ ನಡೆಸಿದ ಪೊಲೀಸರು ರೂ 26,507 ಮೌಲ್ಯದ ವಿವಿಧ ಕಂಪೆನಿಗಳ ಗುಟ್ಕಾ ಚೀಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಲಧಿಕಾರಿಗಳ ಸೂಚನೆಯ ಮೇರೆಗೆ `ಗುಟ್ಕಾ ನಿಷೇಧ'ಕ್ಕೆ ಅನುಗುಣವಾಗಿ ಸ್ಥಳೀಯ ಠಾಣಾಧಿಕಾರಿ ಶಕೀಲ್ ಅಂಗಡಿ ಈ ದಾಳಿ ನಡೆಸಿದರು.
ಪೊಲೀಸ್ ಠಾಣೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಿಷೇಧಿತ ವಸ್ತುಗಳ ಮಾರಾಟದ ಸುಳಿವು ಬೆನ್ನತ್ತಿದ ಪೇದೆಗಳಾದ ಬಿ. ಆರ್. ಜಗಲಿ, ಕೆ.ಎನ್. ಬುದ್ನಿ, ಸಿ. ಎಮ್. ಬಡೇಗಾರ್, ಎ.ಎಸ್. ಮದರಖಂಡಿ, ಅಜ್ಜಪ್ಪಗೋಳ, ದಾದಾಪೀರ್ ಮುರಡಿ ದಾಳಿಯಲ್ಲಿದ್ದರು.
ಇಳಕಲ್ ವರದಿ: ಭಾನುವಾರ ಬೆಳಿಗ್ಗೆ ಹುನಗುಂದ ತಹಶೀಲ್ದಾರ್ ಪಂಪನಗೌಡ ಮೇಲ್ಸೀಮೆ, ಪಿಎಸ್‌ಐ ಬಿ.ಆರ್. ಗಡ್ಡೇಕರ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಅಶೋಕ ಕಿರಗಿ ಹಾಗೂ ನಗರಸಭೆ ಸಿಬ್ಬಂದಿಯು ನಗರದ ಅನೇಕ ಪಾನ್‌ಶಾಪ್, ಕಿರಾಣಿ ಅಂಗಡಿ ಹಾಗೂ ಗುಟ್ಕಾ ಹೋಲ್‌ಸೇಲ್ ವ್ಯಾಪಾರಸ್ಥರ ಗೋದಾಮುಗಳ ಮೇಲೆ ದಾಳಿ ನಡೆಸಿ ಸುಮಾರು ರೂ 10 ಸಾವಿರ ಮೌಲ್ಯದ ಗುಟ್ಕಾ ಪಾಕೆಟುಗಳನ್ನು ವಶಪಡಿಸಿಕೊಂಡರು.
ಇದಕ್ಕೂ ಮೊದಲು ಡಾ.ಮಹಾಂತ ಸ್ವಾಮೀಜಿ ಹಾಗೂ ಗುರು ಮಹಾಂತ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸರಕಾರದ ಗುಟ್ಕಾ ನಿಷೇಧದ ಆದೇಶವನ್ನು ತಹಶೀಲ್ದಾರ್ ಪಂಪನಗೌಡ ಓದಿ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸರಕಾರದ ಆದೇಶವನ್ನು ಪಾಲಿಸಿ, ಆರೋಗ್ಯವಂತರಾಗಿ ಬಾಳಲು ವಿನಂತಿಸಿದರು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಸರಕಾರದ ಗುಟ್ಕಾ ವಿರೋಧಿ ಅಭಿಯಾನವನ್ನು ಡಾ.ಮಹಾಂತ ಶ್ರೀಗಳ ಸಮ್ಮುಖದಲ್ಲಿ ಆರಂಭ ಮಾಡಲು ಮುಖ್ಯ ಕಾರಣ ಕಾನೂನಿನ ನೆರವಿಲ್ಲದೇ 40 ವರ್ಷಗಳಿಂದ ಮಹಾಂತ ಜೋಳಿಗೆ ಮೂಲಕ ನೈತಿಕ ಮಾರ್ಗದಲ್ಲಿ ಇಂದು ಸರಕಾರ ಮಾಡುವ ಕಾರ್ಯವನ್ನು ಶ್ರೀಗಳು ಮಾಡುತ್ತಾ ಬಂದಿದ್ದಾರೆ. ಹೀಗಾಗಿ ದುಶ್ಚಟಗಳ ವಿರುದ್ಧ ಅಭಿಯಾನಕ್ಕೆ ಶ್ರೀಗಳ ಆಶಿರ್ವಾದ ಅಗತ್ಯವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಗುರು ಮಹಾಂತ ಸ್ವಾಮೀಜಿ, `ಈ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಾಯ ನೀಡಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.