ADVERTISEMENT

ಗೊಣ್ಣೆ ಹುಳು ಬಾಧೆ: ಒಣಗಿದ ಕಬ್ಬು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 7:30 IST
Last Updated 24 ಆಗಸ್ಟ್ 2011, 7:30 IST
ಗೊಣ್ಣೆ ಹುಳು ಬಾಧೆ: ಒಣಗಿದ ಕಬ್ಬು
ಗೊಣ್ಣೆ ಹುಳು ಬಾಧೆ: ಒಣಗಿದ ಕಬ್ಬು   

ಬಾಗಲಕೋಟೆ: ಪ್ರಸಕ್ತ ವರ್ಷ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಬೀಳಗಿ ತಾಲ್ಲೂಕಿನ ಕಬ್ಬು ಬೆಳೆಗಾರರು ಗೊಣ್ಣೆಹುಳು ಬಾಧೆಯಿಂದ ತತ್ತರಿಸಿದ್ದಾರೆ. ಗೊಣ್ಣೆಹುಳು ಬಾಧೆ ಯಿಂದ ನೂರಾರು ಎಕರೆ ಕಬ್ಬು ಒಣಗಿ ನಿಂತಿದ್ದು  ಬೆಳೆಗಾರರು ಆತಂಕ ಕ್ಕೊಳಗಾಗಿದ್ದಾರೆ.

ಗೊಣ್ಣೆಹುಳುಗಳು ಕಬ್ಬಿನ ಬೇರನ್ನು ತಿಂದು ಹಾಕಿರುವ ಪರಿಣಾಮ ತಾಲ್ಲೂಕಿನ ಸುನಗಾ, ಬೂದಿಹಾಳ, ತೋಳಮಟ್ಟಿ, ಮನ್ನಿಕೆರೆ, ತುಂಬರ ಮಟ್ಟಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಯಲ್ಲಿ ಬೆಳೆಯಲಾಗಿದ್ದ ಕಬ್ಬಿನಲ್ಲಿ ಒಂದು ಸಾವಿರಕ್ಕೂ ಅಧಿಕ ಎಕರೆ ಹೊಲದಲ್ಲಿ ಕಬ್ಬು ಒಣಗಿನಿಂತಿದೆ.

ಈ ಭಾಗದ ಹಳ್ಳಿಯ ಒಬ್ಬೊಬ್ಬ ರೈತರ ಮೂರು, ನಾಲ್ಕು, ಐದು ಎಕರೆ ಕಬ್ಬಿನ ಹೊಲ ಸಂಪೂರ್ಣವಾಗಿ ಒಣಗಿ ನಿಂತಿದೆ. ಈಗಾಗಲೇ ಬೆಲೆ ಕುಸಿತದಿಂದ ಆತಂಕಕ್ಕೊಳಗಾಗಿರುವ ಕಬ್ಬು ಬೆಳೆಗಾರರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸುನಗಾ ಗ್ರಾಮದ ಕಬ್ಬುಬೆಳೆಗಾರ ವಿಕ್ರಮ ಪಾಟೀಲ, `ನಾವು ನಾಲ್ಕು ಎಕರೆ ಹೊಲದಲ್ಲಿ ಬೆಳೆದ ಕಬ್ಬಿನಲ್ಲಿ ಸುಮಾರು ಮೂರು ಎಕರೆ ಕಬ್ಬು ಗೊಣ್ಣೆಹುಳು ಬಾಧೆ ಯಿಂದ ಸಂಪೂರ್ಣ ಒಣಗಿ ನಿಂತಿದೆ~ ಎಂದು ತಿಳಿಸಿದರು.

`ಎಕರೆಗೆ 60 ಟನ್ ಸಿಗಬಹುದಾಗಿದ್ದ ಹೊಲದಲ್ಲಿ ಈ ಹುಳುಬಾಧೆಯಿಂದ 10 ಟನ್ ಸಿಕ್ಕುವುದು ಕಷ್ಟವಿದೆ. ಹೀಗಾಗಿ ಕಬ್ಬು ಕಟಾವು ಮಾಡದೇ ಹಾಗೆ ಬಿಡುವುದೇ ಉತ್ತಮ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ~ ಎಂದರು.

ಕಬ್ಬು ಬೆಳೆಗಾರ ಶ್ರೀಶೈಲಪ್ಪ ಮೇಟಿ ಮಾತನಾಡಿ, `ಕಬ್ಬಿಗೆ ಹುಳುಬಾಧೆ ಆರಂಭವಾದ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ, ಸೂಕ್ತ ಸಲಹೆಗೆ ಮನವಿ ಮಾಡಿದರೂ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದೇ ನಮ್ಮ ಬೆಳೆ ಹುಳುಗಳ ಹಾವಳಿಗೆ ತುತ್ತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬಾರದೆ ಮಧ್ಯಂತರವೇ ನಾಶವಾಗಿರುವುದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡಲಾರಂಬಿಸಿದೆ ಎಂದರು.

ಈರಣ್ಣಗೌಡರ `ಪತ್ರಿಕೆ~ಯೊಂದಿಗೆ ಮಾತನಾಡಿ, `ಹುಳುಬಾಧೆ ತಡೆಯಲು ಎಕರೆಗೆ ಸುಮಾರು 10ರಿಂದ 15 ಸಾವಿರ ವೆಚ್ಚಮಾಡಿ ಕೃಷಿ ಇಲಾಖೆ ಸೂಚಿಸಿದ ಔಷಧಿಯನ್ನು ಸಿಂಪಡಿದ್ದೇವೆ, ಆದರೂ ಹುಳುಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಸಂಪೂರ್ಣ ಒಣಗಿ ಹೋಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬೀಳಗಿ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ ಈ ಸಂಬಂಧ `ಪ್ರಜಾವಾಣಿ~ ಯೊಂದಿಗೆ ಮಾತನಾಡಿ, ತಾಲ್ಲೂಕಿನ ಕೆಂಪು ಮಣ್ಣ ಪ್ರದೇಶದಲ್ಲಿ ಹಾಗೂ ನೀರನ್ನು ಸರಿಯಾಗಿ ಹಾಯಿಸದ ಹೊಲದಲ್ಲಿ ಹೆಚ್ಚಾಗಿ ಗೊಣ್ಣೆಹುಳು ಬಾಧೆ ಕಂಡುಬಂದಿದೆ. ರೈತರು ಕಬ್ಬಿನ ನಾಟಿ ಸಂದರ್ಭದಲ್ಲಿ ಸರಿಯಾದ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಹುಳುಬಾಧೆ ಹೆಚ್ಚಿದೆ ಎಂದರು.

ಹುಳುಬಾಧೆ ಕಂಡು ಬಂದ ಹೊಲದಲ್ಲಿ ನೀರನ್ನು ಸಂಗ್ರಹಿಸಿದೆ, ಇಲ್ಲವೇ ಕ್ಲೋರೊಪೈರಿಪಾಸ್ ಕ್ರಿಮಿ ನಾಶಕವನ್ನು ಲೀಟರ್‌ಗೆ 10ಎಂಎಲ್ ಬೆರಸಿ ಹೊಲದಲ್ಲಿ ಕಬ್ಬಿನ ಬುಡಕ್ಕೆ ಹಾಕಿದರೆ ಹತೋಟಿ ಮಾಡಬಹುದು ಎಂದು ತಿಳಿಸಿದರು.

ಕಬ್ಬಿನ ನಾಟಿ ಸಮಯದಲ್ಲಿ ಹೆಕ್ಟೇರ್‌ಗೆ 25 ಕೆ.ಜಿ.ಪೋರಟ್ ಅಥವಾ ಶೇ. 5ರಷ್ಟು ಫಿನಿಲಾಪಾಸ್ ಇಲ್ಲವೇ ಶೇ. 4ರಷ್ಟು ಕಾರ್ಬರಿನ್ ಪುಡಿಯನ್ನು ಮಣ್ಣಿಗೆ ಬೆರಸಿದ್ದರೂ ಸಹ ಗೊಣ್ಣೆಹುಳು ಬಾಧೆ ಬರುವುದಿಲ್ಲ, ಆದರೆ ರೈತರು ಈ ಯಾವ ಕ್ರಮವನ್ನು ಅನುಸರಿಸದ ಕಾರಣ ಮತ್ತು ತಮ್ಮ ಹೊಲಕ್ಕೆ ತಾವೇ ಹೋಗಿ ಕಾಳಜಿ ವಹಿಸದ ಕಾರಣ ಹುಳುಬಾಧೆ ವ್ಯಾಪಕವಾಗಿದೆ ಎಂದು ಹೇಳಿದರು.

ಈ ವಾರದಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಹುಳುಬಾಧೆ ಹತೋಟಿಗೆ ಬರುವ ಸಾಧ್ಯತೆ ಇದೆ, ರೈತರಿಗೆ ಈಗಾಗಲೇ ಹುಳು ಬಾಧೆ ನಿಯಂತ್ರಣಕ್ಕೆ ತರಬೇತಿ ನೀಡಲಾಗಿದೆ, ಎಲ್ಲ ರೈತರು ಸಾಮೂಹಿಕವಾಗಿ ಔಷಧಿ ಸಿಂಪಡಿಸಿದರೆ ಈ ಹುಳುಬಾಧೆ ನಿಯಂತ್ರಿಸಬಹುದು ಎಂದು ತಿಳಿಸಿದರು.
ಇದೀಗ ರೈತರು ಗೊಣ್ಣೆ ಹುಳುವಿನ ಹಾವಳಿಯಿಂದ ಒಣಗಿನಿಂತಿರುವ ಕಬ್ಬನ್ನು ಕಿತ್ತುಹಾಕುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.