ಬಾಗಲಕೋಟೆ: ನಗರದಲ್ಲಿ ಚಿಲ್ಲರೆ ಅಭಾವ ತೀವ್ರ ತಲೆಒಅರಿದೆ, ಇದರಿಂದ ಸಣ್ಣ ವ್ಯಾಪಾರಸ್ಥರಿಗೆ ದಿನನಿತ್ಯದ ವ್ಯಾಪಾರ-ವಹಿವಾಟಿಗೆ ತೀವ್ರ ಅಡಚಣೆ ಉಂಟಾಗಿದೆ. ಈ ಚಿಲ್ಲರೆ ವಿಷಯಕ್ಕೆ ತಲೆಬಿಸಿ ಮಾಡಿಕೊಳ್ಳದ ವ್ಯಾಪಾರಸ್ಥರು ಸ್ವಂತ ಪರಿಹಾರವನ್ನು ಕಂಡುಕೊಂಡಿ ರುವುದು ವಿಶೇಷ.
ಹೌದು, ಇತ್ತೀಚಿನ ದಿನದಲ್ಲಿ ಚಿಲ್ಲರೆ (ಕಾಯನ್) ಸಮಸ್ಯೆ ವ್ಯಾಪಾರಸ್ಥರನ್ನು ಅದರಲ್ಲೂ ಸಣ್ಣ ವ್ಯಾಪಾರಸ್ಥರನ್ನು ಬಹುವಾಗಿ ಕಾಡಿಸುತ್ತಿದೆ. ಒಂದು, ಎರಡು, ಐದು ರೂಪಾಯಿ ಚಿಲ್ಲರೆಗಾಗಿ ಗ್ರಾಹಕರು-ವ್ಯಾಪರಸ್ಥರು ಅದರಲ್ಲೂ ಬಸ್, ಟಂಟಂ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಬಿರುಸಿನ ಮಾತುಗಳಿಗೆ ಕಾರಣವಾಗಿದೆ. ಒಮ್ಮಮ್ಮೆ ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿರುವ ಉದಾಹರಣೆ ಇದೆ.
ಚಿಲ್ಲರೆ ವಿಷಯವಾದರೂ ಒಮೊಮ್ಮೆ ಒಂದು, ಎರಡು, ಐದು ರೂಪಾಯಿ ಸೃಷ್ಠಿಸುವ ಅನಾಹುತ ದೊಡ್ಡದು. ಇದನ್ನು ಮನಗಂಡ ಬಾಗಲಕೋಟೆಯ ಕೆಲ ಸಮಾನ ಮನಸ್ಕ ವರ್ತಕರು ತಮ್ಮದೇ ಆದ ಸುಲಭೋಪಾಯ ಕಂಡು ಕೊಂಡಿದ್ದಾರೆ.
ಬ್ಯಾಂಕುಗಳಲ್ಲಿ ಇರುವಂತೆ `ಟೋಕನ್~ ವ್ಯವಸ್ಥೆಯನ್ನು ಅಳವಡಿಸಿ ಕೊಂಡಿದ್ದಾರೆ. ತಮ್ಮ ತಮ್ಮ ಅಂಗಡಿಯ ಚಿನ್ಹೆ ಅಥವಾ ಗುರುತು ಅಥವಾ ಪ್ರತ್ಯೇಕ ಬಣ್ಣ ಇರುವ ಪ್ಲಾಸ್ಟಿಕ್‌ನ ಟೋಕನ್‌ಗಳನ್ನು ನಾಣ್ಯಗಳ ಬದಲಿಗೆ ಬಳಸುತ್ತಿದ್ದಾರೆ.
ಒಬ್ಬ ಗ್ರಾಹಕ ಕೆಲ ಮೊತ್ತದ ವ್ಯಾಪಾರವನ್ನು ಮಾಡಿದ ಮೇಲೆ ಆತನು ನೀಡುವ ಹಣವನ್ನು ಮುರಿದುಕೊಂಡು ಉಳಿದ ಎರಡೊ, ಐದೊ ರೂಪಾಯಿ ಮರಳಿ ಕೊಡುವಾಗ ಚಿಲ್ಲರೆ ಇಲ್ಲದಿದ್ದ ಸಂದರ್ಭದಲ್ಲಿ ಆ ಮೌಲ್ಯಕ್ಕೆ ಅನುಗುಣವಾದ ಟೋಕನ್‌ಗಳನ್ನು ಕೊಡುತ್ತಾರೆ. ಆ ಟೋಕನ್ ಅನ್ನು ಇತರೆ ಅಂಗಡಿಗೆ ನೀಡಿ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳ ಬಹುದಾಗಿದೆ.
ಬಾಗಲಕೋಟೆ ನಗರದ ಹೊಳೆ ಆಂಜನೇಯದೇವಸ್ಥಾನದ ಬಳಿ ಇರುವ ಸಂಗಮ ಕೋಲ್ಡ್‌ಡ್ರಿಂಗ್ಸ್, ಭಜಂತ್ರಿ ಬೀಡಾ, ನವಭಾರತ ಬೇಕರಿ, ಸುತ್ತಮುತ್ತಲಿನ ನಾಲ್ಕೈದು ಮಾವಾ ಅಂಗಡಿ, ಶಾಂತಿಸಾಗರ ಮತ್ತು ಶಿವಪ್ರಸಾದ ಹೋಟೆಲ್ ಸೇರಿದಂತೆ ಒಟ್ಟು 9 ಮಂದಿ ಸಮಾನಮನಸ್ಕ ವ್ಯಾಪಾರಸ್ಥರು ತಮ್ಮದೇ ಆದ ಟೋಕನ್‌ಗಳನ್ನು ವ್ಯಾಪಾರ- ವಹಿವಾಟಿನಲ್ಲಿ ಕಳೆದ ಏಳೆಂದು ವರ್ಷದಿಂದ ಯಶಸ್ವಿಯಾಗಿ ಬಳಿಸುತ್ತಿದ್ದಾರೆ.
ಚಿಲ್ಲರೆ ಬದಲು ನೀಡುವ ಟೋಕನ್‌ಗಳನ್ನು ಪರಸ್ಪರ ಅಂಗಡಿಗಳಲ್ಲಿ ತೆಗೆದುಕೊಳ್ಳುತ್ತಾರೆ. ಸಂಜೆ ವ್ಯಾಪಾರ ಮುಗಿದ ಬಳಿಕ ತಮ್ಮ ಬಳಿಗೆ ಬಂದಿರುವ ಬೇರೆ ಅಂಗಡಿಯ ಟೋಕನ್‌ಗಳನ್ನು ಅವರ ಅಂಗಡಿಗೆ ಮರಳಿಸಿ ಹಣವನ್ನು ಪಡೆದು ಕೊಳ್ಳುತ್ತಾರೆ. ಹೀಗೆ ಪ್ರತಿಯೊಬ್ಬರು ಪರಸ್ಪರ ಟೋಕನ್‌ಗಳನ್ನು ವ್ಯವಹಾರಕ್ಕೆ ಬಳಸಿಕೊಂಡು ಗ್ರಾಹಕರೊಂದಿಗೂ ಸೌಹಾರ್ದಯುತ ವ್ಯಾಪರ-ವಹಿವಾಟು ನಡೆಸುತ್ತಿದ್ದಾರೆ.
ಟೋಕನ್ ಚಲಾವಣೆ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸಂಗಮ ಕೋಲ್ಡ್ ಡ್ರಿಂಗ್ಸ್‌ನ ಮಾಲೀಕ ಸದಾನಂದ ಗದಿಗೆಪ್ಪ ತುರಮಂದಿ, ಕಳೆದ ಏಳೆಂಟು ವರ್ಷದಿಂದ ಚಿಲ್ಲರೆ ಅಭಾವದಿಂದ ಪಾರಾಗಲು ಮತ್ತು ವ್ಯಾಪಾರ ವಹಿವಾಟು ಸುಲಲಿತ ಮಾಡಿಕೊಳ್ಳುವ ಉದ್ದೇಶದಿಂದ 9 ಅಂಗಡಿ ಮಾಲೀಕರು ಚಿಲ್ಲರೆ ಬದಲಿಗೆ ಈ ಟೋಕನ್ ಬಳಸುತ್ತಿದ್ದೇವೆ, ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಈ ಮೂಲಕ ಉತ್ತಮ ಸೇವೆ ನೀಡುತ್ತಿದ್ದೇವೆ ಎಂದರು.
ಚಿಲ್ಲರೆ ಇಲ್ಲದ ಸಮಯದಲ್ಲಿ ಕೆಲವೊಮ್ಮೆ ಒಂದು ರೂಪಾಯಿಗೆ ಟೋಕನ್ ನೀಡಲು ಬರುವುದಿಲ್ಲ ಅಂತಹ ಸಂದರ್ಭದಲ್ಲಿ ಒಂದು ರೂಪಾಯಿಗೆ ಚಾಕಲೇಟ್ ನೀಡುತ್ತೇವೆ ಎಂದು ತಿಳಿಸಿದರು.ಅಲ್ಲದೇ ಯಾರಾದರು 100 ರೂಪಾಯಿ ಚಿಲ್ಲರೆಯನ್ನು ನಮ್ಮ ಅಂಗಡಿಗೆ ತಂದು ಕೊಟ್ಟರೆ ಅವರಿಗೆ ಐದು ರೂಪಾಯಿ ಕಮಿಷನ್ ನೀಡುತ್ತೇವೆ ಎಂದರು.
ಚಿಲ್ಲರೆ ಅಭಾವ ಬಹಳ ಇದೆ, ಸರ್ಕಾರ ಇತ್ತ ಗಮನಹರಿಸಿ ಹೆಚ್ಚಿನ ಪ್ರಮಾಣದಲ್ಲಿ ಚಿಲ್ಲರೆಯನ್ನು ವ್ಯಾಪಾರ-ವಹಿವಾಟಿಗೆ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.ಚಿಲ್ಲರೆ ವಿಷಯಕ್ಕೆ ನಗರದ ವ್ಯಾಪಾರಸ್ಥರು-ಗ್ರಾಹಕರು ಪರಸ್ಪರ ಸಹಕಾರದಿಂದ ಟೋಕನ್ ಬಳಸಿ ಸಮಸ್ಯೆಗೆ ತತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಇದರ ದುರುಪಯೋಗ ವಾಗದಂತೆ ಪರಸ್ಪರ ವಿಶ್ವಾಸ ಉಳಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.