ADVERTISEMENT

ಜನರಲ್ಲಿ ಮಡುಗಟ್ಟಿದ ಆತಂಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 9:55 IST
Last Updated 9 ಜೂನ್ 2011, 9:55 IST

ಜಮಖಂಡಿ: ಇಲ್ಲಿನ ಮುಧೋಳ ರಸ್ತೆಯ ಹುಲ್ಯಾಳ ಕ್ರಾಸ್ ಹತ್ತಿರದ ಡಾ. ಎಚ್.ಜಿ. ದಡ್ಡಿ ಅವರ ಹೊಲದಲ್ಲಿ ಒಂದು ಹುಲಿಯ ಹೆಜ್ಜೆಗಳು ಕಂಡು ಬಂದಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮಳೆಯಾಗಿದ್ದರಿಂದ ಹೊಲದಲ್ಲಿ ಹುಲಿಯ ಹೆಜ್ಜೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ರಾತ್ರಿ ವೇಳೆಯಲ್ಲಿ ಹುಲಿಯ ಘರ್ಜನೆಯನ್ನು ಕೇಳಿಸಿಕೊಂಡಿರುವ ರೈತ ಯು.ಎ.ಜಮಾದಾರ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಹುಲಿವೊಂದು ಈ ಭಾಗದಲ್ಲಿ ಅಲೆದಾಡುತ್ತಿರುವ ಸುದ್ದಿ ತಿಳಿದ ಸ್ಥಳೀಯ ಅರಣ್ಯ ಅಧಿಕಾರಿಗಳು ಆ ಕುರಿತು ವಿಜಾಪುರ ಅರಣ್ಯಾಧಿಕಾರಿಗಳ ಗಮನ ಸೆಳೆದಿದ್ದರು. ಅಲ್ಲಿಂದ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಯೊಬ್ಬರು ಹುಲ್ಲಿಯ ಹೆಜ್ಜೆಗಳ ಫೋಟೊ ತೆಗೆದುಕೊಂಡು ಹೋಗಿ ತಜ್ಞರೊಂದಿಗೆ ಪರೀಕ್ಷಿಸಿ ಹುಲಿ ಹೆಜ್ಜೆಗಳ ಬಗ್ಗೆ ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.

ಹುಲಿ ಇಟ್ಟಿರುವ ಹೆಜ್ಜೆಗಳ ನಡುವಿನ ಅಂತರವನ್ನು ಗಮನಿಸಿದರೆ ಭಾರೀ ಗಾತ್ರದ ಹುಲಿ ಇದಾಗಿದೆ ಎಂಬುದು ದೃಢಪಡುತ್ತದೆ. ಸುಮಾರು 6.5 ಅಡಿ ಉದ್ದದ ಹುಲಿ ಅದಾಗಿರಬಹುದು ಎಂದು ಅಂದಾಜು ಮಾಡಬಹುದಾಗಿದೆ.

ಗಿಡದ ಅಡಿಯಲ್ಲಿ ಹುಲಿ ಮಲಗಿದ ಗುರುತು ಇತ್ತು ಎಂದು ರೈತ ಜಮಾದಾರ ಹೇಳುತ್ತಾರೆ. ಸುಮಾರು ಒಂದು ತಿಂಗಳ ಹಿಂದೆ ಬುದ್ನಿ ಗ್ರಾಮದ ಹೊಲದ ಸುತ್ತಲೂ ಹಾಕಿದ ವಿದ್ಯುತ್ ತಂತಿಗೆ ಸಿಕ್ಕು ಹುಲಿವೊಂದು ಸಾವನ್ನಪ್ಪಿದೆ ಎಂಬ ವದಂತಿ ಕೂಡ ಈ ಭಾಗದಲ್ಲಿ ಇದೆ.

ಅಂತೂ ಸಾರ್ವಜನಿಕರ ಆತಂಕಕ್ಕೆ ಕಾರಣ ಆಗಿರುವ ಹುಲಿಯ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮೌನ ತಾಳಿರುವುದು ಗ್ರಾಮಸ್ಥರಲ್ಲಿ ಯಕ್ಷ ಪ್ರಶ್ನೆ ಮೂಡಿಸಿದೆ. ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯತತ್ಪರಾಗಿ ಸಾರ್ವಜನಿಕರ ಆತಂಕವನ್ನು ದೂರ ಮಾಡುವರೇ ಎಂದು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.