ADVERTISEMENT

ಜನಸಂಖ್ಯೆ ಹೆಚ್ಚಳದಿಂದ ವಿಶ್ವದ ಸ್ಫೋಟ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:40 IST
Last Updated 13 ಜುಲೈ 2012, 9:40 IST

ಜಮಖಂಡಿ: 1810ರಲ್ಲಿ 100 ಕೋಟಿ ಇದ್ದ ವಿಶ್ವದ ಜನಸಂಖ್ಯೆ 2012 ರಲ್ಲಿ 700 ಕೋಟಿಗೆ ಹೆಚ್ಚಿದೆ. 1950 ರಲ್ಲಿ 1000ಕ್ಕೆ 25 ರಷ್ಟಿದ್ದ ಮರಣ ಪ್ರಮಾಣ 2012ರಲ್ಲಿ 7ಕ್ಕೆ ಇಳಿದಿದೆ. ಹೀಗೆಯೇ ಜನಸಂಖ್ಯೆ ಸ್ಫೋಟಗೊಳ್ಳುತ್ತ ಹೋದಲ್ಲಿ ಮುಂದೊಂದು ದಿನ ವಿಶ್ವವೇ ಸ್ಫೋಟಗೊಳ್ಳಲಿದೆ ಎಂದು ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ ಬಸವರಾಜ ಕಡ್ಡಿ ಹೇಳಿದರು.

ಸ್ಥಳೀಯ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗ ಬುಧವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮನುಷ್ಯನ ಜೀವಿತಾವಧಿ 67ಕ್ಕೆ ತಲುಪಿದೆ. ಜಗತ್ತಿನ ಒಟ್ಟು ಭೂಮಿಯ ಕ್ಷೇತ್ರ 135.49 ಮಿಲಿಯನ್ ಚದರ ಕಿ.ಮೀ. ಇದ್ದು, ಜನಸಾಂದ್ರತೆ ಪ್ರತಿ ಚದರ ಕಿ.ಮೀ.ಗೆ 380 ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆಹಾರ, ವಸತಿ, ನಿರುದ್ಯೋಗ, ಆರ್ಥಿಕ ಸಮಸ್ಯೆಗಳು ಉಲ್ಬಣಗೊಂಡು ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸಂಖ್ಯೆ ಸ್ಫೋಟಕ್ಕೆ ಮೂಢನಂಬಿಕೆ ಕೂಡ ಕಾರಣವಾಗಿದೆ ಎಂದರು. ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎ.ಬಿ. ಖೋತ, ಪ್ರೊ.ಎಚ್.ಎಸ್. ಗಿಡ್ಡನವರ, ಪಿ.ಸಿ. ಸುರಪುರ, ಯಶೋದ ಪಾಟೀಲ, ಪ್ರಕಾಶ ಚನವೀರ ವೇದಿಕೆಯಲ್ಲಿದ್ದರು.

ಶೀಲಾ ಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿನಿ ಎಸ್.ಎಸ್. ಬಾರಿಕಾಯಿ ಸ್ವಾಗತಿಸಿದರು. ಪ್ರೊ.ವಿ.ಎಸ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಡಂಗಿ ವಂದಿಸಿದರು.

ಹುನ್ನೂರ ವಾರ್ಡ್‌ಗಳ    ಸಂಖ್ಯೆ ಹೆಚ್ಚಿಸಿ
ಜಮಖಂಡಿ: ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಈಗಿರುವ 7 ವಾರ್ಡ್‌ಗಳನ್ನು ಪುನರ್ ವಿಂಗಡಿಸಿ 12 ವಾರ್ಡ್‌ಗಳನ್ನು ನಿರ್ಮಿಸಬೇಕು ಎಂದು ಹುನ್ನೂರ ಗ್ರಾಮಾಭಿವೃದ್ಧಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪ್ರಕಾಶ ಹಳೇಮನಿ ಒತ್ತಾಯಿಸಿದ್ದಾರೆ.
ಗ್ರಾಮದ ಜನಸಂಖ್ಯೆ ಸುಮಾರು 12 ಸಾವಿರ ಇದೆ. ಒಂಬತ್ತು ನೂರರಿಂದ ಒಂದು ಸಾವಿರ ಜನಸಂಖ್ಯೆಗೆ ಒಂದರಂತೆ ವಾರ್ಡ್‌ಗಳನ್ನು ರಚಿಸಿದರೆ ಒಟ್ಟು 12 ವಾರ್ಡ್‌ಗಳನ್ನು ರಚಿಸಬೇಕಾಗುತ್ತದೆ.
6ನೇ ಮತ್ತು 7ನೇ ವಾರ್ಡ್‌ಗಳು ಬಹಳ ದೊಡ್ಡದಾಗಿವೆ. ಅದರಲ್ಲೂ ವಿಶೇಷವಾಗಿ 7ನೇ ವಾರ್ಡ್ ಇನ್ನೂ ಬಹಳ ದೊಡ್ಡದಿದೆ.  ಗ್ರಾಮದ ಒಟ್ಟು ಜಮೀನಿನ ವಿಸ್ತೀರ್ಣದ ಪೈಕಿ ನಾಲ್ಕನೆಯ ಮೂರರಷ್ಟು 7ನೇ ವಾರ್ಡ್‌ನಲ್ಲಿ ಬರುತ್ತವೆ. ಹುನ್ನೂರ ಗ್ರಾಮದ ವಾರ್ಡ್‌ಗಳ ವಿಸ್ತೀರ್ಣ ಮತ್ತು ಹದ್ದು ತೋರಿಸುವ ನಕಾಶೆ ಉಪಲಬ್ದವಿಲ್ಲ. ಅದನ್ನು ಬೇಡಿದರೂ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ನೋಟಿಸ್ ಬೋರ್ಡಿಗೆ ಸಹ ನಕಾಶೆಯನ್ನು ಹಾಕಿಲ್ಲ. ನಕಾಶೆಯನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ವೇಳೆಗೆ ಗ್ರಾಮದ ವಾರ್ಡ್‌ಗಳನ್ನು ಪುನರ್ ರಚಿಸಿ ವಾರ್ಡ್‌ಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲು ಕ್ರಮ ಜರುಗಿಸಬೇಕು ಮತ್ತು ವಾರ್ಡ್‌ಗಳ ಹದ್ದು ಗುರುತು ತೋರಿಸುವ ನಕಾಶೆಯನ್ನು ಸಿದ್ಧಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.