ADVERTISEMENT

ಜಮಖಂಡಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 7:55 IST
Last Updated 20 ಜೂನ್ 2012, 7:55 IST
ಜಮಖಂಡಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ
ಜಮಖಂಡಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ   

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಹಿರೇಪಡಸಲಗಿ, ಗೋಟೆ, ಚಿಕ್ಕಲಕಿ, ತೊದಲಬಾಗಿ, ಮೈಗೂರ, ಕುಂಬಾರಹಳ್ಳ, ಆಲಗೂರ, ಕೊಣ್ಣೂರ ಗ್ರಾಮ ವ್ಯಾಪ್ತಿಯಲ್ಲಿ ವ್ಯಾಪಕವಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿ.ಪಂ.ಹಂಗಾಮಿ ಅಧ್ಯಕ್ಷ ಹೂವಪ್ಪ ರಾಠೋಡ ಪಿಡಿಒಗಳಿಗೆ ಸೂಚನೆ ನೀಡಿದರು.

ಜಮಖಂಡಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಬರ ಪರಿಹಾರ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಾಲ್ಲೂಕಿನ  ಹಿರೇಪಡಸಲಗಿ, ಗೋಟೆ, ಚಿಕ್ಕಲಕಿ, ತೊದಲಬಾಗಿ, ಮೈಗೂರ, ಕುಂಬಾರಹಳ್ಳ ಗ್ರಾಮಗಳ ಜನತೆ ಸುಮಾರು 3ರಿಂದ 4 ಕಿ.ಮೀ. ದೂರದಿಂದ ನೀರು ಹೊತ್ತು ತಂದು ಕುಡಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಸುಮಾರು ಎರಡು ಸಾವಿರಕ್ಕೂ ಅಧಿಕ ಜಾನುವಾರುಗಳು ಮೇವಿನ ಸಮಸ್ಯೆ ಎದುರಿಸುತ್ತಿವೆ, ಈ ಗ್ರಾಮಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ  ತುರ್ತಾಗಿ ಸಮಸ್ಯೆ ಬಗೆಹರಿಸಲು ಸೂಚಿಸಲಾಯಿತು.

  ಜಿಲ್ಲಾಧಿಕಾರಿಗಳಿಗೆ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿಯನ್ನು ಸಲ್ಲಿಸಿ ಬಗೆಹರಿಸಲು ಮನವಿ ಮಾಡಲಾಗುವುದು ಎಂದ ಅವರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು  ಸಮಸ್ಯೆ ಇರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತೆರಿಗೆ: ತಾಲ್ಲೂಕಿನಲ್ಲಿ ಸುಮಾರು ಶೇ 60 ರಿಂದ 65 ರಷ್ಟು ತೆರಿಗೆ ಸಂಗ್ರಹವಾಗಿದೆ, ಶೇ 100 ರಷ್ಟು ತೆರಿಗೆ ವಸೂಲಾತಿ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಸಮಾದಾನ: ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯ ವೈಖರಿಯ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಮತ್ತು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಇದ್ದರೆ ಮಾದರಿ ಜಿಲ್ಲೆ, ತಾಲ್ಲೂಕು, ಗ್ರಾಮ ಅನ್ನುವ ಪದ ಶಾಶ್ವತವಾಗಿ ಅಳಿಸಿ ಹೋಗುತ್ತದೆ ಎಂದರು.

ಆಶ್ರಯ ಮನೆ: ಇಡೀ ತಾಲ್ಲೂಕಿನ ಆಶ್ರಯ ಮನೆಗಳ ಪಟ್ಟಿಯನ್ನು ಪರಿಶೀಲಿಸಿದರೆ ಶೇ 50 ರಷ್ಟು ಮಾತ್ರ ಪ್ರಗತಿಯಾಗಿರುತ್ತದೆ, ಪ್ರಗತಿಯ ಹಿನ್ನಡೆಗೆ ಕಾರಣ ಗ್ರಾಮ ಮಟ್ಟದಲ್ಲಿ ಫಲಾನುಭವಿಗಳಿಗೆ ನೋಟಿಸ್ ನೀಡದೇ ಇರುವುದು ಮತ್ತು ಜಾಗ್ರತಾ ಸಭೆಯನ್ನು ಏರ್ಪಡಿಸದೇ ಇರುವುದು ಹಾಗೂ ಕಟ್ಟುನಿಟ್ಟಿನ ಆದೇಶಗಳನ್ನು ನೀಡದೇ ಇರುವುದರಿಂದ ಆಶ್ರಯ ಮನೆಗಳ ಪ್ರಗತಿ ಕುಂಠಿತವಾಗಿರುತ್ತದೆ ಎಂದು ಹೇಳಿದರು.

ವಿದ್ಯುತ್ ಸಮಸ್ಯೆ: ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಉಂಟಾದಾಗ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಸುಟ್ಟುಹೋದ ಟಿ.ಸಿ.ಗಳನ್ನು 24 ಗಂಟೆಗಳಲ್ಲಿ ದುರಸ್ತಿ ಮಾಡಬೇಕು. ಸಾರ್ವಜನಿಕರ ಮನೆಗಳ ಮೇಲೆ ಮತ್ತು ಶಾಲೆಗಳ ಮೇಲೆ ವಿದ್ಯುತ್ ಲೈನುಗಳು ಅಪಾಯದ ಅಂಚಿನಲ್ಲಿದ್ದರೆ ಅದನ್ನು ತಕ್ಷಣವೇ ಬದಲಾವಣೆ ಮಾಡಲು ಸೂಚಿಸಿದರು. ವಿದ್ಯುತ್ ಸಮಸ್ಯೆಯಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುತ್ತದೆ ಎಂಬ ವಿಷಯ ತಮ್ಮ ಗಮನಕ್ಕೆ ಬಂದಿರುತ್ತದೆ. ಅಂತಹ ಸಮಸ್ಯೆಗಳನ್ನು ತಕ್ಷಣವೇ ನಿವಾರಿಸಬೇಕು.
ಸಾರ್ವಜನಿಕ ಕೊಳವೆಬಾವಿ ಹಾಕಿದಾಗ ತಕ್ಷಣವೇ ಸಂಪರ್ಕ ಕಲ್ಪಿಸಬೇಕು ಎಂದರು.

ಆರೋಗ್ಯ: ಮಳೆಗಾಲ ಆರಂಭವಾಗುತ್ತಿರುವುದರಿಂದ ಗ್ರಾಮಗಳಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಬೇಕು. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ತಿಪ್ಪೆ ಗುಂಡಿಗಳನ್ನು ಸ್ವಚ್ಛತೆ ಮಾಡಬೇಕು, ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳಿಗೆ ಆಶ್ರಯತಾಣ ನಾವೇ ನೀಡಿದಂತಾಗುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು. 

 ಪಿಡಿಒಗಳಿಗೆ ಸೂಚನೆ: ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಅನಗತ್ಯವಾಗಿ ಗೈರಾಗುತ್ತಾರೆ ಎಂಬ ಗಂಭೀರ ಆರೋಪ ಮತ್ತು ದೂರುಗಳು ಬಂದಿರುತ್ತವೆ. ಅಂತಹ ಗ್ರಾಮ ಪಂಚಾಯಿತಿಗಳು ಯಾವುವು ಎಂಬುದು ನಮ್ಮ ಗಮನಕ್ಕೆ ಬಂದಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.