ADVERTISEMENT

ಜಿಲ್ಲಾಧಿಕಾರಿ ಆದೇಶಕ್ಕೆ ಒಪ್ಪಿಗೆ ಮುದ್ರೆ

ನವನಗರ ಯುನಿಟ್‌ 1 ಹಸ್ತಾಂತರಕ್ಕೆ ನಗರಸಭೆ ಆಡಳಿತದ ವಿರೋಧ

ವೆಂಕಟೇಶ್ ಜಿ.ಎಚ್
Published 28 ಡಿಸೆಂಬರ್ 2017, 5:38 IST
Last Updated 28 ಡಿಸೆಂಬರ್ 2017, 5:38 IST
ಜಿಲ್ಲಾಧಿಕಾರಿ ಆದೇಶಕ್ಕೆ ಒಪ್ಪಿಗೆ ಮುದ್ರೆ
ಜಿಲ್ಲಾಧಿಕಾರಿ ಆದೇಶಕ್ಕೆ ಒಪ್ಪಿಗೆ ಮುದ್ರೆ   

ಬಾಗಲಕೋಟೆ: ನವನಗರ ಯುನಿಟ್–1ರ ಹಸ್ತಾಂತರ ವಿರೋಧಿಸಿ ಇಲ್ಲಿನ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯದ ಠರಾವು ಬೆಳಗಾವಿಯ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ಬಿದ್ದು ಹೋಗಿದೆ.

ವಿಶೇಷ ಸಾಮಾನ್ಯ ಸಭೆಯ ನಿರ್ಣಯವನ್ನು ಅಮಾನತುಗೊಳಿಸಿ ಅಕ್ಟೋಬರ್ 9ರಂದು ಅಂದಿನ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಕೈಗೊಂಡಿದ್ದ ಆದೇಶವನ್ನು ಬುಧವಾರ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಎತ್ತಿ ಹಿಡಿದಿದ್ದಾರೆ. ಅದಕ್ಕೆ ಸ್ಥಿರೀಕರಣದ ಮುದ್ರೆ ಒತ್ತಿದ್ದಾರೆ. ಇದರಿಂದ ನವನಗರ ಯುನಿಟ್–1 ಪ್ರದೇಶವನ್ನು ನಗರಸಭೆ ವ್ಯಾಪ್ತಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಹಾದಿ ಸುಗಮಗೊಂಡಂತಾಗಿದೆ.

ಹಸ್ತಾಂತರ ಆದೇಶ: ನವನಗರ ಯುನಿಟ್ 1ನ್ನು ನಗರಸಭೆ ವ್ಯಾಪ್ತಿಗೆ ಹಸ್ತಾಂತರಗೊಳಿಸಿ 2017ರ ಜನವರಿ 24ರಂದು ಸರ್ಕಾರ ಆದೇಶ ಹೊರಡಿಸಿತ್ತು. ಹಸ್ತಾಂತರದ ನಂತರ ರಸ್ತೆ, ಗಟಾರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ₹133 ಕೋಟಿ ಇಡುಗಂಟು ಕೂಡ ಪರಿಹಾರ ರೂಪದಲ್ಲಿ ನೀಡಲು ಮುಂದಾಗಿತ್ತು. ಆದರೆ ಇದಕ್ಕೆ ನಗರಸಭೆಯ ಆಡಳಿತಾರೂಢ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

ADVERTISEMENT

‘ಹಸ್ತಾಂತರ ವಿಚಾರದಲ್ಲಿ ಸ್ಥಳೀಯ ಸಂಸ್ಥೆಯ ಅಳಲು ಆಲಿಸಿಲ್ಲ. ಸದಸ್ಯರ ಅಭಿಪ್ರಾಯ ಆಲಿಸಿಲ್ಲ. ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ’ ಎಂದು ಆರೋಪಿಸಿದ್ದರು.

‘ಯುನಿಟ್–1 ಹಸ್ತಾಂತರ
ಗೊಳಿಸಿದರೆ ಅದರ ನಿರ್ವಹಣೆಗೆ ನಗರಸಭೆಯಲ್ಲಿ ಸಿಬ್ಬಂದಿ ಇಲ್ಲ. ಚುನಾವಣೆ ಹತ್ತಿರ ಇರುವಾಗ ಈ ಬಗ್ಗೆ ತರಾತುರಿಯ ನಿರ್ಧಾರ ಸಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಫೆಬ್ರುವರಿ 3ರಂದು ವಿಶೇಷ ಸಾಮಾನ್ಯಸಭೆ ಕರೆದು ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದರು. ಸಭೆಯಲ್ಲಿ ಸರ್ಕಾರದ ಆದೇಶದ ವಿರುದ್ಧ ನಿರ್ಣಯ ಬಂದಿದ್ದರಿಂದ ಅಂದಿನ ಆಯುಕ್ತ ಎಸ್‌.ಎನ್.ರುದ್ರೇಶ ಆ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ನಗರಸಭೆ ವಿಶೇಷ ಸಾಮಾನ್ಯಸಭೆಯ ನಿರ್ಣಯ ಕಾನೂನು ಬಾಹಿರ ಎಂದು ತೀರ್ಮಾನಿಸಿದ್ದ ಜಿಲ್ಲಾಧಿಕಾರಿ ಠರಾವನ್ನು ಅಮಾನತುಗೊಳಿಸಿದ್ದರು.

ಇದು ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿತ್ತು.

‘ಬಿಟಿಡಿಎ ಡೆವಲಪರ್ ಪಾತ್ರ ಮಾತ್ರ’

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಮೂಲ ಸೌಕರ್ಯ ವ್ಯವಸ್ಥೆ ಮಾಡಿಕೊಡುವ ಕೆಲಸ ಮಾತ್ರ ಮಾಡಬೇಕಿದೆ. ನಿರ್ವಹಣೆ ಏನಿದ್ದರೂ ನಗರಸಭೆ ಆಡಳಿತದ ಜವಾಬ್ದಾರಿ. ವಸತಿ ಪ್ರದೇಶ ಅಭಿವೃದ್ಧಿಪಡಿಸಿ ವಾಸಕ್ಕೆ ಅವಕಾಶ ಕಲ್ಪಿಸಿದ 60 ದಿನಗಳಲ್ಲಿಯೇ ನಗರಸಭೆಗೆ ವಹಿಸಬೇಕಿದೆ. ಕುಡಿಯುವ ನೀರು, ಕಟ್ಟಡ ಪರವಾನಗಿ ಎಲ್ಲವೂ ನಗರಸಭೆ ಆಡಳಿತವೇ ಕೊಡಬೇಕಿದೆ. ಆದರೆ ಡೆವಲಪರ್ ಪಾತ್ರ ಮಾತ್ರ ವಹಿಸಬೇಕಾದ ಬಿಟಿಡಿಎ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಕೆಲಸ ಕೂಡ ಮಾಡುತ್ತಿದೆ. ಯುನಿಟ್–2ರ ವಿಚಾರದಲ್ಲೂ ಅದೇ ಪುನರಾವರ್ತನೆಯಾಗುತ್ತಿದೆ ಎಂದು ನಗರಸಭೆ ಅಧಿಕಾರಿಯೊಬ್ಬರು ಹೇಳುತ್ತಾರೆ.

***

ಈಗಿರುವ ಸಿಬ್ಬಂದಿಯಿಂದ ನಗರಸಭೆ ವ್ಯಾಪ್ತಿಯ ನಿರ್ವ ಹಣೆಯೇ ಕಷ್ಟವಾಗಿದೆ. ಪ್ರಾದೇಶಿಕ ಆಯುಕ್ತರ ಆದೇಶದ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು
ದ್ಯಾವಪ್ಪ ಕಾಕುಂಪಿ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.