ADVERTISEMENT

ಡಿಎಸ್‌ಎಸ್ ಅಧ್ಯಯನ ಶಿಬಿರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 10:15 IST
Last Updated 17 ಫೆಬ್ರುವರಿ 2012, 10:15 IST

ಬೀಳಗಿ: ತಾಲ್ಲೂಕಿನ ಕೃಷ್ಣಾ ಘಟಪ್ರಭಾ ನದಿಗಳ ಸಂಗಮ ಕ್ಷೇತ್ರ ಚಿಕ್ಕಸಂಗಮದ ನಿಸರ್ಗದ ಮಡಿಲಲ್ಲಿ ಇದೇ 17ರಿಂದ 19ರವರೆಗೆ ಮೂರು ದಿನಗಳ ಕಾಲ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಶಿಬಿರಕ್ಕಾಗಿ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ 17ರಂದು ಮಧ್ಯಾಹ್ನ ಗದುಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸುವರು. ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸುವರು.

ಹನುಮಂತ ಹಾಲಗೇರಿ ಅವರ “ಕೆಂಗುಲಾಬಿ” ಕಾದಂಬರಿ ಬಿಡುಗಡೆಗೊಳ್ಳಲಿದೆ. ಮಹಿಳಾ ಜನವಾದಿ ಸಂಘಟನೆಯ ಕೆ. ನೀಲಾ ಕಾದಂಬರಿ ಕುರಿತು ಮಾತನಾಡುವರು. ಪತ್ರಕರ್ತರಾದ ರಾಮ ಮನಗೂಳಿ, ಸುಭಾಷ ಹೊದ್ಲೂರ, ದಲಿತ ಮುಖಂಡರಾದ ಅಯ್ಯಪ್ಪ ಆರೋಲಿ, ಶೋಭಾ ಕಟ್ಟೀಮನಿ, ಬಸವರಾಜ ಮುಧೋಳ, ಸದಾಶಿವ ಚಲವಾದಿ ಭಾಗವಹಿಸುವರು ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮಹಾದೇವ ಹಾದಿಮನಿ ತಿಳಿಸಿದರು.

ನಂತರ ನಡೆಯುವ ಗೋಷ್ಠಿಯಲ್ಲಿ “ಡಾ.ಬಿ.ಆರ್. ಅಂಬೇಡ್ಕರ್ ದೃಷ್ಟಿಯಲ್ಲಿ ಭಾರತದ ಭವಿಷ್ಯ” ಕುರಿತು ಪ್ರೊ. ಸಿದ್ಧರಾಜ ಪೂಜಾರಿ ಮಾತನಾಡುವರು. ಅನಸೂಯಾ ಕಾಂಬಳೆ ಅಧ್ಯಕ್ಷತೆ ವಹಿಸುವರು. ಸಂಜೆ “ಬೌದ್ಧ ಧರ್ಮ ನಮಗೇಕೆ ಬೇಕು?” ಕುರಿತು ಸಿ.ಎಚ್. ರಾಜಶೇಖರ ಮಾತನಾಡಲಿದ್ದು, ಶಿವಾಜಿ ಬನವಾಸಿ ಅಧ್ಯಕ್ಷತೆ ವಹಿಸುವರು.

18ರಂದು ಬೆಳಿಗ್ಗೆ “ಸಂವಿಧಾನ ಅನುಷ್ಠಾನ ಮತ್ತು ಪ್ರಜಾ ಪ್ರಭುತ್ವದ ಮಹತ್ವ” ಕುರಿತು ನಿವೃತ್ತ ಪ್ರಾಚಾರ್ಯ ಎಚ್.ಬಿ. ಧರ್ಮಣ್ಣವರ ಮಾತನಾಡುವರು.  ಪತ್ರಕರ್ತ ಅನಿಲ ಹೊಸಮನಿ ಅಧ್ಯಕ್ಷತೆ ವಹಿಸುವರು.

“ಕೋಮುವಾದ ಮತ್ತು ಜಾಗತೀಕರಣ” ಕುರಿತು ಅಲ್ಲಮಪ್ರಭು ಬೆಟ್ಟದೂರ ಮಾತನಾಡಲಿದ್ದು, ಬಿ.ಎಸ್. ನಾಗರಾಜ ಅಧ್ಯಕ್ಷತೆ ವಹಿಸುವರು. “ಜಾತಿ ಪದ್ಧತಿ ವಿರುದ್ಧ ಹೋರಾಡಿದ ಮಹನೀಯರು” ಕುರಿತು ಪತ್ರಕರ್ತ ಸನತ್ ಕುಮಾರ ಬೆಳಗಲಿ ಮಾತನಾಡಲಿದ್ದಾರೆ. ಮಹೇಶ ತಿಪ್ಪಶೆಟ್ಟಿ ಅಧ್ಯಕ್ಷತೆ ವಹಿಸುವರು. “ದಲಿತ ಚಳವಳಿಯ ಮುಂದಿನ ಸವಾಲುಗಳು” ಕುರಿತು ಲೇಖಕ ಮಂಗಳೂರು ವಿಜಯ ಮಾತನಾಡಿದರೆ, ಜಿ.ವಿ. ಸುಂದರ ಅಧ್ಯಕ್ಷತೆ ವಹಿಸುತ್ತಾರೆ. ಸಂಜೆ ಶಿಬಿರಾರ್ಥಿಗಳ ಗುಂಪು ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

19ರಂದು ನಡೆಯುವ ಗೋಷ್ಠಿಯಲ್ಲಿ “ರಾಜಕಾರಣದಲ್ಲಿ ಮಹಿಳೆಯರ ಪಾತ್ರ ಮತ್ತು ಮಹತ್ವ” ಕುರಿತು ಡಾ. ಅನುಪಮಾ ಕವಲಕ್ಕಿ ಮಾತನಾಡುವರು ದಾನೇಶ್ವರಿ ಸಾರಂಗಮಠ ಅಧ್ಯಕ್ಷತೆ ವಹಿಸಲಿದ್ದಾರೆ. “ಅಹಿಂದ ವರ್ಗಗಳ ಐಕ್ಯತೆ ಹಾಗೂ ರಾಜಕಾರಣ” ಕುರಿತು ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮಾತನಾಡುವರು.
 

ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಧ್ಯಕ್ಷತೆಯಲ್ಲಿ ವಿಚಾರವಾದಿ ಪ್ರೊ. ಜಿ.ಕೆ. ಗೋವಿಂದರಾವ್ ಸಮಾರೋಪ ಭಾಷಣ ಮಾಡುತ್ತಾರೆ. ಡಿ.ವೈ.ಎಸ್.ಪಿ. ಗಿರೀಶ ಕಾಂಬಳೆ, ಅಶೋಕ ಬರಗುಂಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈಶ್ವರ ಶೆಟ್ಟರ, ಈಶ್ವರಪ್ಪ ಬಳ್ಳಾರಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT