ADVERTISEMENT

ತವರು ಜಿಲ್ಲೆಗೆ ಅನ್ಯಾಯ: ಸವದಿ ಆರೋಪ

ಅನುದಾನ ಹಂಚಿಕೆಯಲ್ಲಿ ತಾರತಮ್ಯ; ಸಂಪುಟದಿಂದ ಉಮಾಶ್ರೀ ಕೈ ಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 6:58 IST
Last Updated 21 ಮಾರ್ಚ್ 2018, 6:58 IST

ಬಾಗಲಕೋಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಹಂಚಿಕೆಯಲ್ಲಿ ಸಚಿವೆ ಉಮಾಶ್ರೀ ಬಾಗಲಕೋಟೆ ಜಿಲ್ಲೆಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ಕೂಡಲೇ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಮೂಲದ ಸಂಸ್ಥೆಗಳಿಗೆ ಲಕ್ಷ ಲಕ್ಷಗಟ್ಟಲೇ ಅನುದಾನ ಹಂಚಿಕೆ ಮಾಡಿರುವ ಉಮಾಶ್ರೀ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದ್ದಾರೆ. ಈ ವಿಚಾರದಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರ ಸೂಕ್ತ ತನಿಖೆಗೆ ಮುಂದಾಗಲಿ’ ಎಂದು ಆಗ್ರಹಿಸಿದರು.

‘ವಿಶೇಷ ಘಟಕ, ಗಿರಿಜನ ಉಪಯೋಜನೆ, ಸಾಮಾನ್ಯ ವರ್ಗ, ಮೂರು ವಿಭಾಗಗಳಲ್ಲಿ ಪ್ರಾದೇಶಿಕ ಅಸಮಾನತೆ ಮಾಡಲಾಗಿದೆ, ಸಾಮಾನ್ಯ ವರ್ಗದ 589 ಸಂಸ್ಥೆಗಳಿಗೆ ₹ 8,41,50,000 ಧನಸಹಾಯ ಮಂಜೂರು ಮಾಡಲಾಗಿದೆ. ಅದರಲ್ಲಿ ಶೇ. 36 ರಷ್ಟು ಧನಸಹಾಯ ಬೆಂಗಳೂರು ಪಾಲಾಗಿದೆ. ಅಲ್ಲಿನ 195 ಸಂಸ್ಥೆಗಳಿಗೆ ₹ 3.10 ಕೋಟಿ ಅನುದಾನ ಹಂಚಿಕೆಯಾಗಿದೆ. ಉಳಿದ 28 ಜಿಲ್ಲೆಗಳ ₹ 3.94 ಕೋಟಿ ಹಾಗೂ ಹೊರನಾಡಿನ 15 ಸಂಸ್ಥೆಗಳಿಗೆ ₹ 5,31 ಕೋಟಿ ಹಣ ಬಿಡುಗಡೆಯಾಗಿದೆ. ಜಿಲ್ಲೆಯ 23 ಸಂಸ್ಥೆಗಳಿಗೆ ಕೇವಲ ₹ 28 ಲಕ್ಷ ಅನುದಾನ ನೀಡಲಾಗಿದೆ. ಇದು ಮತ ನೀಡಿದ ಕ್ಷೇತ್ರಕ್ಕೆ, ತವರು ಜಿಲ್ಲೆಗೆ ಮಾಡಿರುವ ಅನ್ಯಾಯ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಎಸ್‌ಸಿಪಿ ಯೋಜನೆಯಲ್ಲಿ 205 ಸಂಸ್ಥೆಗಳಿಗೆ ಧನ ಸಹಾಯ ಮಂಜೂ ರಿಯಾಗಿದೆ. ಅದರಲ್ಲಿ ಬೆಂಗಳೂರು ನಗರದ 58 ಸಂಸ್ಥೆಗಳಿಗೆ ₹ 1.2 ಕೋಟಿ ಅನುದಾನ ಬಿಡುಗಡೆಯಾಗಿದೆ. ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಕೈಗಾರಿಕೆ, ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೂ ಅನುದಾನ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕೋಲಕಾರ, ರಾಜು ರೇವಣಕರ, ತೇರದಾಳ ಕ್ಷೇತ್ರದ ಮುಖಂಡರಾದ ಸುರೇಶ ಮಂಜರಗಿ, ಸುರೇಶ ಅಕ್ಕಿವಾಟ ಇದ್ದರು.

ಟೆಂಡರ್ ಆಗದೇ ಭೂಮಿಪೂಜೆ!..

ಬೀಳಗಿ ಕ್ಷೇತ್ರದ ಗಲಗಲಿ ಹಾಗೂ ಕೊರ್ತಿ ಸೇತುವೆ ಎತ್ತರಿಸುವ ಬಗ್ಗೆ ಇನ್ನೂ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ, ಅದು ಇತ್ಯರ್ಥಗೊಂಡು ತಾಂತ್ರಿಕ ಅನುಮೋದನೆ ಪಡೆದು ಟೆಂಡರ್ ಆಗಬೇಕಿದೆ. ಆದರೆ ಈಗಾಗಲೇ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿರುವ ಔಚಿತ್ಯವೇನು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕೋಲಕಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಬಜೆಟ್‌ನಲ್ಲಿ ಘೋಷಿಸಿದ್ದು ಆಗಿದೆ. ಸಾಧನೆ ಎಂದು ಬಿಂಬಿಸಿದ್ದು ಆಗಿದೆ. ಆದರೆ ಕಾಲೇಜ್ ಬರಲಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಲೇವಡಿ ಮಾಡಿದರು.

**

ಸಚಿವರು ಬೆಂಗಳೂರಿನ ಜಯನಗರದ ತಮ್ಮ ಮನೆಯಲ್ಲಿ ಪುತ್ರನ ಜೊತೆ ಕುಳಿತು ಅನುದಾನ ಹಂಚಿಕೆ ಮಾಡಿದ್ದಾರೆ
- ಸಿದ್ದು ಸವದಿ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.