ADVERTISEMENT

ತೇರದಾಳ: ಸುಧಾರಿಸಬೇಕಿದೆ ಶಾಲೆ ಸ್ಥಿತಿ

ಮೈದಾನದಲ್ಲಿ ತಗ್ಗು ದಿಣ್ಣೆಗಳು: ಆವರಣದಲ್ಲಿ ಅಡ್ಡಾಡಲು ಕಷ್ಟಪಡುತ್ತಿರುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:11 IST
Last Updated 1 ಜೂನ್ 2018, 12:11 IST
ತೇರದಾಳ ಪಟ್ಟಣದ ಕಲೂತಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿಯ ಗಿಲಾವು ಬಿದ್ದಿರುವುದು
ತೇರದಾಳ ಪಟ್ಟಣದ ಕಲೂತಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿಯ ಗಿಲಾವು ಬಿದ್ದಿರುವುದು   

ತೇರದಾಳ (ಬನಹಟ್ಟಿ): ರಾಜ್ಯದಾದ್ಯಂತ ಶಾಲೆಗಳು ಪುನರಾರಂಭವಾಗಿವೆ. ಅದಕ್ಕೂ ಮುನ್ನ ಶಾಲೆಗಳನ್ನು ಸುಸಜ್ಜಿತವಾಗಿ ಮಾಡಬೇಕಾದ ಕರ್ತವ್ಯ ಇಲಾಖೆಯದ್ದು. ಆದರೆ ತೇರದಾಳ ಭಾಗದ ಕೆಲ ಶಾಲೆಗಳ ಸ್ಥಿತಿ ಈಗಲೂ ಶೋಚನೀಯವಾಗಿದೆ.

ಪಟ್ಟಣದ ಕಲೂತಿ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಉತ್ತಮ ಪರಿಸರದಲ್ಲಿದ್ದು ಸುತ್ತಲೂ ಕಾಂಪೌಂಡ್‌ ಹೊಂದಿದೆ. ಆದರೆ ಶಾಲೆಯ ಆವರಣ ತಗ್ಗು ದಿಣ್ಣೆಗಳಿಂದ ಕೂಡಿದೆ. ಮಕ್ಕಳು ಶಾಲೆಯೊಳಗೆ ಹೋಗುವಷ್ಟು ಸ್ಥಳ ಮಾತ್ರ ಸಮತಲವಾಗಿದೆ. ಮೈದಾನ ಕಂದಕಗಳಿಂದ ತುಂಬಿದೆ. ಶಾಲೆಯ ಚಾವಣಿಯ ಗಿಲಾವು ಸಹ ಬೀಳುತ್ತಲಿದೆ.

ಎರಡು ದೊಡ್ಡ ಕಂದಕಗಳಿರುವ ಕಾರಣ ಮಕ್ಕಳಿಗೆ ಆಟವಾಡುವುದು ಸಾಧ್ಯವಾಗುತ್ತಿಲ್ಲ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿ ತಿರುಗಾಡಲು ಕಷ್ಟವಾಗುತ್ತಿದೆ. ಪುಟ್ಟ ಮಕ್ಕಳು ಆಟವಾಡಬೇಕೆಂದರೆ ಕಂದಕಗಳಲ್ಲಿ ಆಡಬೇಕು. ಆಡುವಾಗ ಸ್ವಲ್ಪ ಆಯ ತಪ್ಪಿದರೆ ಅಪಘಾತ ಕಟ್ಟಿಟ್ಟದ್ದು. ಆಟವಾಡುವಾಗ ಕೆಲವು ಮಕ್ಕಳು ಗಾಯಗಳನ್ನೂ ಮಾಡಿಕೊಂಡವೆ.

ADVERTISEMENT

‘ಕಂದಕಗಳನ್ನು ಮುಚ್ಚಲು ಇಲಾಖೆಯಾಗಲಿ, ಎಸ್‌ಡಿಎಂಸಿ ಸದಸ್ಯರಾಗಲಿ ಆಸಕ್ತಿ ತೋರಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಆವರಣದಲ್ಲಿನ ಕಂದಕಗಳನ್ನು ಮುಚ್ಚುವ ಕಾರ್ಯ ಮಾಡಲಿ’ ಎಂಬುದು ಪಾಲಕರ ಒತ್ತಾಯವಾಗಿದೆ.

‘ನಮ್ಮ ಹುಡುಗ ಶಾಲೆಗೆ ಹೋದಾಗ ಕಂದಕದಲ್ಲಿ ಬಿದ್ದು ಮೈತುಂಬ ಗಾಯ ಮಾಡಕೊಂಡ. ಒಂದು ತಿಂಗಳು ಆಸ್ಪತ್ರೆದಾಗ ಇರಬೇಕಾತ್ರಿ. ಆ ಕಂದಕ ಮುಚ್ಚಬೇಕು. ಇಲ್ಲಂದರ ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ’ ಎಂದು ವಿದ್ಯಾರ್ಥಿಯೊಬ್ಬಳ ತಾಯಿ ಶಾಂತವ್ವ ತಿಳಿಸಿದರು.

ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಕಲೂತಿ ನಗರದ ಸರ್ಕಾರಿ ಶಾಲೆಯ ಚಾವಣಿಯನ್ನು ರಿಪೇರಿ ಮಾಡಿಸುವ ಮತ್ತು ಶಾಲಾ ಆವರಣದಲ್ಲಿಯ ಕಂದಕಗಳನ್ನು ತುಂಬಿಸುವ ಕಾರ್ಯವನ್ನು ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.