ADVERTISEMENT

ದಶಕದ ಬಳಿಕ ಸ್ವಾಮೀಜಿ- ಭಕ್ತರ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 6:26 IST
Last Updated 24 ಜೂನ್ 2013, 6:26 IST

ಇಳಕಲ್ಲ: ಸಮೀಪದ ಹೆರೂರು ಗ್ರಾಮದಲ್ಲಿ ಶನಿವಾರ ಸಂಜೆ ಸಂಭ್ರಮ ಕಂಡು ಬಂದಿತು. ಕಳೆದ 10 ವರ್ಷಗಳಿಂದ ಗ್ರಾಮದ ವಿಜಯ ಮಹಾಂತೇಶ್ವರ ಶಾಖಾಮಠದ ಜಾತ್ರೆ ಹಾಗೂ ಅಡ್ಡಪಲ್ಲಕ್ಕಿಯಲ್ಲಿ ಪಾಲ್ಗೊಳ್ಳದ ಡಾ.ಮಹಾಂತ ಸ್ವಾಮೀಜಿ ಹಾಗೂ ಗುರು ಮಹಾಂತ ಸ್ವಾಮೀಜಿ ಈ ಬಾರಿ ಆಗಮಿಸಿದರು.  ಸ್ವಾಮೀಜಿ ಹಾಗೂ ಭಕ್ತರ ನಡುವಿನ ಆ ಭಾವನಾತ್ಮಕ ಕ್ಷಣವು ಅಗಲಿದ್ದ ತಾಯಿ- ಮಗುವಿನ ಸಮಾಗಮದಂತೆ ಗೋಚರಿಸಿತು.

ಪಟ್ಟಾಧಿಕಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಹೊಂದಿದ್ದ ಗ್ರಾಮಸ್ಥರು, ಡಾ.ಮಹಾಂತ ಸ್ವಾಮೀಜಿ ಹಾಗೂ ಗುರು ಮಹಾಂತ ಸ್ವಾಮೀಜಿ ಅವರ ಅನುಪಸ್ಥಿತಿಯಲ್ಲಿಯೇ ಜಾತ್ರೆಯನ್ನು ನಡೆಸಿಕೊಂಡು ಬಂದಿದ್ದರು. ಹಿರಿಯ ಶ್ರೀಗಳ ಮಾತೃ ಹೃದಯ, ಕಿರಿಯ ಶ್ರೀಗಳ ಕರುಣೆ ಮತ್ತು ಸೇವೆ ಗ್ರಾಮಸ್ಥರನ್ನು ಕರಗಿಸಿತ್ತು.

ಉಭಯ ಶ್ರೀಗಳನ್ನು ಮಠದ ಜಾತ್ರೆಗೆ ಕರೆಯಲು 50 ಕ್ಕೂ ಹೆಚ್ಚು ಗ್ರಾಮಸ್ಥರು ಇಳಕಲ್‌ನ ಮಠಕ್ಕೆ ಬಂದಿದ್ದರು. ಆದರೆ ಸ್ವಾಮೀಜಿಗಳು ಸವದಿಗೆ ತೆರಳಿದ್ದರು.

ಈ ಸಂದರ್ಭದಲ್ಲಿ ವಿಜಯ ಮಹಾಂತೇಶ ತರುಣ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ ಮತ್ತಿತರರು ಶ್ರೀಗಳನ್ನು ಸಂಪರ್ಕಿಸಿ, ಗ್ರಾಮಸ್ಥರ ಆಶಯವನ್ನು ತಿಳಿಸಿ, ಒಪ್ಪಿಸಿದರು. 

ಮಠಕ್ಕೆ, ಜಾತ್ರೆಗೆ ಸ್ವಾಮೀಜಿಗಳು ಬರುವುದನ್ನು ತಿಳಿದು ಗ್ರಾಮಸ್ಥರು ಬಹಳ ಸಂತಸಗೊಂಡರು. 
ದೂರದ ಅಥಣಿ ತಾಲ್ಲೂಕಿನ ಸವದಿ ಶಾಖಾ ಮಠದಲ್ಲಿದ್ದ ಶ್ರೀಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಹೆರೂರ ಗ್ರಾಮಕ್ಕೆ ಆಗಮಿಸಿದಾಗ ರಾತ್ರಿ 10 ಗಂಟೆಯಾಗಿತ್ತು.

ಉಭಯ ಶ್ರೀಗಳ ಬರುವಿಕೆಗಾಗಿ ಕಾಯ್ದ ಭಕ್ತರು, ಅವರು ಬರುತ್ತಿದ್ದಂತೆ ಗೌರವಾತಿಥ್ಯದಿಂದ ಬರಮಾಡಿಕೊಂಡರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಕಮತಗಿಯ ಹೊಳೆಹುಚ್ಚೇಶ್ವರ ಸ್ವಾಮೀಜಿ ಹಾಗೂ ಅಮರೇಶ್ವರ ದೇವರು ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ, ಬೈಕ್ ಹಾಗೂ ಕಾರು ಸಾಹಸಿ ಈರಣ್ಣ ಕುಂದರಗಿಮಠ ಅವರನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಸಿದ್ದಣ್ಣ ನರಗುಂದ, ಸಂಗನಗೌಡ ಪಾಟೀಲ, ಪರಸಪ್ಪ ಅಂಬಿಗೇರ, ಸಂಗಪ್ಪ ಮಡಿವಾಳರ, ಬಸವರಾಜ ಅಂಗಡಿ, ರಾಮಣ್ಣ ಬೊಮ್ಮಣಗಿ, ಶಿವಶಂಕ್ರಯ್ಯ ಹಿರೇಮಠ, ಸಂಗಪ್ಪ ಕೊಡಗಲಿ, ಸೋಮಶೇಖರ ಕೊಡಗಲಿ, ವೀರಣ್ಣ ಬೆಳವಣಿಕಿ, ಸಂಗಣ್ಣ ಗದ್ದಿ, ಮಹಾಂತೇಶ ಹೊಳಿ, ಶಂಕರ ತೋಟದ, ಶ್ರೀನಿವಾಸ ರಾಜೊಳ್ಳಿ, ಸಾತಪ್ಪ ನರಗುಂದ ಉಪಸ್ಥಿತರಿದ್ದರು. 
ಗುರುಬಸಪ್ಪ ಅಡವಿ ಸ್ವಾಗತಿಸಿದರು. ಎಂ. ಎಸ್. ಬೀಳಗಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.