ADVERTISEMENT

ದಿಂಡಿನ ಸ್ಪರ್ಧೆ: ಕನಕಪ್ಪಗೋಳ ಎತ್ತುಗಳು ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:10 IST
Last Updated 3 ಸೆಪ್ಟೆಂಬರ್ 2011, 6:10 IST

ಬೀಳಗಿ: ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ  ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಎತ್ತಿನ ದಿಂಡಿನ ಸ್ಪರ್ಧೆ, ಅಂತರರಾಜ್ಯ ಮಟ್ಟದ ಕಬಡ್ಡಿ ಟೂರ್ನಿ, ರಾಷ್ಛ್ಟ್ರ ಮಟ್ಟದ ಕುಸ್ತಿ ಪಂದ್ಯ,  ಚೀಲ ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆಗಳು ನಡೆದವು.

ಬಸವೇಶ್ವರ ದೇವಾಲಯದ ಎದುರಿನ ಬಯಲಿನಲ್ಲಿ ಸಂಗ್ರಾಣಿ ಕಲ್ಲು ಎತ್ತುವ, ಗುಂಡು ಎತ್ತುವ, ತೆಕ್ಕೆಬಡಿದು ಚೀಲ ಎತ್ತುವ, ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು. ಆಸ್ಪತ್ರೆ ಎದುರಿನ ಮೈದಾನದಲ್ಲಿ ಎತ್ತಿನ ದಿಂಡಿನ ಸ್ಪರ್ಧೆ ಗಮನ ಸೆಳೆದವು.

ಶ್ರೆ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ, ಮಲ್ಲಗಂಬ ಪ್ರದರ್ಶನ. ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ  ಅಂತರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ. ಹೀಗಾಗಿ ನೋಡುಗರಿಗೆ ಎಲ್ಲಿ ಹೋಗಬೇಕು, ಏನನ್ನು ನೋಡಬೇಕು ಎಂಬ ಚಿಂತೆ ಕಾಡಿದ್ದಂತೂ ಸತ್ಯ.

ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ 80ಕೆ.ಜಿ.ತೂಕದಿಂದ 2.20 ಕ್ವಿಂಟಲ್‌ನವರೆಗೆ ಕ್ರಮಾಂಕದ 10 ಗುಂಡುಕಲ್ಲುಗಳನ್ನು ಎತ್ತಿ ಉರುಳಿಸಿದ ಜಮಖಂಡಿ ತಾಲ್ಲೂಕಿನ ನಾವಲಗಿ ಗ್ರಾಮದ ಭೀಮಪ್ಪ ಬಳ್ಳಣ್ಣವರ, 30ಕೆ.ಜಿ.ಯಿಂದ 95ಕೆ.ಜಿ.ವರೆಗಿನ ಕ್ರಮಾಂಕದ 14ಸಂಗ್ರಾಣಿ ಕಲ್ಲುಗಳನ್ನು ಎತ್ತಿದ ಕೊಣ್ಣೂರಿನ ರಾಯಪ್ಪ ಅಬ್ಬಣ್ಣವರ ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡು “ಭಲೇ ಬಾದ್ದೂರಾ” ಎನ್ನಿಸಿಕೊಂಡರು. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಯಲಗೂರಿನ ಗಂಗಾಧರ ಹನುಮಂತ ಶಿರೂರ (ಪ್ರಥಮ), ಬೀರಕಬ್ಬಿಯ ಪರಶುರಾಮ ಕ್ಷತ್ರಿ (ದ್ವಿತೀಯ), ಬೀಳಗಿಯ ಲಕ್ಷ್ಮಣ ಮೇರಾಕಾರ (ತೃತೀಯ) ಸ್ಥಾನ ಪಡೆದುಕೊಂಡರು.

ಎತ್ತಿನ ದಿಂಡಿನ ಸ್ಪರ್ಧೆಯಲ್ಲಿ ಗೋಠೆಯ ಹನುಮಂತ ಕನಕಪ್ಪಗೋಳ (2ನಿ.14.78ಸೆಕೆಂಡ್, ಪ್ರಥಮ), ಚಿಕ್ಕ ಆಸಂಗಿಯ ಶಿವಲಿಂಗಪ್ಪ ಅವರಸಂಗ (2ನಿ.18.63ಸೆಕೆಂಡ್, ದ್ವಿತೀಯ), ಹಲಗಲಿಯ ಸಿದ್ದಪ್ಪ ಖಜ್ಜಿಡೋಣಿ (2ನಿ.23.50ಸೆಕೆಂಡ್, ತೃತೀಯ) ಸ್ಥಾನ ಪಡೆದುಕೊಂಡರು.

ತೆಕ್ಕೆ ಬಡಿದು ಚೀಲ ಎತ್ತುವ ಸ್ಪರ್ಧೆಯಲ್ಲಿ ಬೇನಾಳದ ರಾಜು ಬಿರಾದಾರ, ಯಲಗೂರಿನ ಗಂಗಾಧರ ಶಿರೂರ, ಬೀಳಗಿಯ ಲಕ್ಷ್ಮಣ ಮೇರಾಕಾರ, ಸುರಕೋಡದ ಶಿವಾನಂದ ಮೂರಗನೂರ, ಕಲ್ಲೋಳಿಯ ಮಹಾವೀರ ಅಜ್ಜಪ್ಪಗೋಳ, ಕೋಳಿಗುಡ್ಡದ ಮಲೆಪ್ಪ ಮಂಟೂರ ಬಹುಮಾನ ಪಡೆದರು.

ಅಂತರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರದಿಂದ ಸುಮಾರು 38ತಂಡಗಳು ಭಾಗವಹಿಸಿದ್ದವು. ವಿಶ್ವ ವಿದ್ಯಾಲಯದ “ಬ್ಲೂ”ಗಳಾದ ಚಂದ್ರು ಬೆಕ್ಕೇರಿ, ಪ್ರಕಾಶ ಹಾಗೂ ನ್ಯಾಶನಲ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ಆಡಿ ಉತ್ತಮ ದಾಳಿಕಾರನೆಂಬ ಖ್ಯಾತಿಯ ಪಾಟೀಲ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಈ ಪಂದ್ಯಾವಳಿಯ ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.