ADVERTISEMENT

ದುರ್ಗಾದೇವಿ ಮೆರವಣಿಗೆ: ಜನಸಾಗರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 3:57 IST
Last Updated 22 ಅಕ್ಟೋಬರ್ 2017, 3:57 IST

ಬಾಗಲಕೋಟೆ: ನಗರ ಸಮೀಪದ ಗದ್ದನಕೇರಿ ಹಾಗೂ ಮುಚಖಂಡಿ ತಾಂಡಾಗಳಲ್ಲಿನ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ನಗರದಲ್ಲಿ ಶನಿವಾರ ಎರಡು ಪ್ರತ್ಯೇಕ ಬೃಹತ್‌ ಮೆರವಣಿಗೆಗಳು ಜರುಗಿದವು. ದುರ್ಗಾದೇವಿ ಮೂರ್ತಿಗಳನ್ನು ಹೊತ್ತ ಎರಡೂ ಮೆರವಣಿಗಳಲ್ಲಿ ಸಾವಿರಾರು ಮಂದಿ ಸಂಭ್ರಮದಿಂದ ಭಾಗಿಯಾದರು.

ನಗರದ ವಲ್ಲಭಬಾಯಿ ಚೌಕದಿಂದ ಆರಂಭವಾದ ಎರಡೂ ಮೆರವಣಿಗೆಗಳಲ್ಲಿ ಒಂದು ಹಳೇ ಪೋಸ್ಟ್ ಆಫೀಸ್‌ ರಸ್ತೆ ಮೂಲಕ ಗದ್ದನಕೇರಿ ತಾಂಡಾಗೆ ಸಾಗಿತು. ಇನ್ನೊಂದು ಎಂ.ಜಿ ರಸ್ತೆ ಮುಖಾಂತರ ಮುಚಖಂಡಿ ತಾಂಡಾಗೆ ಹೊರಟಿತು. ಮುಚಖಂಡಿ ಮತ್ತು ಗದ್ದನಕೇರಿ ತಾಂಡಾಗಳ ಜನತೆ ಹಾಗೂ ಅವರ ಸಂಬಂಧಿಕರು, ಸುತ್ತಮುತ್ತಲಿನ ಗ್ರಾಮಗಳು ಹಾಗೂ ನಗರದ ಜನತೆ ಭಾಗಿಯಾಗಿದ್ದು, ಏಕಕಾಲಕ್ಕೆ ಜಾತ್ರೆಯ ಸಂಭ್ರಮ ನಗರಕ್ಕೆ ವಿಸ್ತರಣೆಗೊಂಡಿತ್ತು. ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

ಮೆರವಣಿಗೆಯಲ್ಲಿ ಜಾಂಜ್‌ ಪತಾಕ್, ಲೇಜಿಮ್, ಡಿಜೆ ಸೌಂಡ್‌ಗಳ ನಾದಕ್ಕೆ ಸಾವಿರಾರು ಜನ ಕುಣಿದು ಕಪ್ಪಳಿಸಿದರು. ಗುಲಾಲ ಎರಚಿ ಸಂಭ್ರಮಿಸಿದರು. ಜೈ ಜೈ ಮಾತಾ..ದುರ್ಗಾ ಮಾತಾ, ವೀರ ಶಿವಾಜಿ...ಅಂಬಾಭವಾನಿ ಘೋಷಣೆಗಳು ಮೊಳಗಿದವು. ಹಿಂದಿ, ಕನ್ನಡ ಚಿತ್ರಗೀತೆಗಳ ನಿನಾದಕ್ಕೆ ಯುವಕರು ಹೆಜ್ಜೆ ಹಾಕಿದ ದೃಶ್ಯ ಕಂಡು ಬಂದಿತು. ವಿಶೇಷ ಅಲಂಕಾರದಲ್ಲಿ ದುರ್ಗಾದೇವಿ ಮೂರ್ತಿ ಕಂಗೂಳಿಸಿದವು. ಹೂ ಮಳೆಗೈದು ಮೂರ್ತಿಗಳನ್ನು ಸ್ವಾಗತಿಸಲಾಯಿತು.

ADVERTISEMENT

ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಎರಡು ಮೆರವಣಿಗೆ ಸಂಜೆವರೆಗೂ ನಡೆಯಿತು. ರಾತ್ರಿ ವೇಳೆ ಸ್ವ ಸ್ಥಾನ ತಲುಪಿದವು. ಮೂರು ವರ್ಷಕ್ಕೆ ಒಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಎರಡು ಗ್ರಾಮಗಳ ಜಾತ್ರೆಗೆ ಸಾವಿರಾರು ಮಂದಿ ಬಂಜಾರ ಸಮುದಾಯದವರು ಸೇರುತ್ತಾರೆ. ಗೋವಾ, ಮಹಾರಾಷ್ಟ್ರ, ಬೆಂಗಳೂರು, ಮಂಗಳೂರು ಸೇರಿದಂತೆ ನಾನಾ ಭಾಗದಲ್ಲಿ ನೆಲೆಸಿರುವ ದೇವಿ ಭಕ್ತರು ಬಂದು ಒಂದು ವಾರಗಳ ಕಾಲ ಜಾತಾ ಮಹೋತ್ಸವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ಇಷ್ಟಾರ್ಥ ಸಿದ್ದಿಗಾಗಿ ವಿವಿಧ ಸೇವೆ ಮಾಡುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಬಂಜಾರ ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಸಮುದಾಯದ ಸಂತ ಸೇವಾಲಾಲ ಮಹಾರಾಜರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.