ADVERTISEMENT

ಧರ್ಮದ ಸುಂಟರಗಾಳಿ ಮೋದಿ ಮೂಲಕ ಶಮನ: ಕೇದಾರ ಶ್ರೀ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 8:35 IST
Last Updated 13 ಏಪ್ರಿಲ್ 2018, 8:35 IST

ಇಳಕಲ್ (ಬಾಗಲಕೋಟೆ ಜಿಲ್ಲೆ): ‘ರಾಜಕಾರಣಿಗಳು ಗಾಳಿ ಹಾಕಿದ್ದಕ್ಕಾಗಿ ಈಚೆಗೆ ಕರ್ನಾಟಕದಲ್ಲಿ ಧರ್ಮದ ಸುಂಟರಗಾಳಿ ಎದ್ದಿದೆ. ಅದು ಹಾಗೆಯೇ ಮುಂದುವರಿದರೆ ಕೇಂದ್ರ ಸರ್ಕಾರದ ಮೂಲಕ ಅದನ್ನು ಶಮನ ಮಾಡಲಾಗುವುದು’ ಎಂದು ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯರು ಹೇಳಿದರು.

ತಾಲ್ಲೂಕು ವೀರಮಹೇಶ್ವರ (ಜಂಗಮ) ಕ್ಷೇಮಾಭಿವೃದ್ಧಿ ಸಂಘ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ವೀರಶೈವ– ಲಿಂಗಾಯತ ವಿವಾದ ಕುರಿತು ಅವರು ಪ್ರಸ್ತಾಪಿಸಿದರು.

‘ಸುಂಟರಗಾಳಿ ಬಂದಾಗ ಕಣ್ಣು ಮುಚ್ಚಿಕೊಳ್ಳಬೇಕು. ಕೆಲ ಹೊತ್ತಿನಲ್ಲಿಯೇ ಅದು ಮಾಯವಾಗುತ್ತದೆ. ಧಾರ್ಮಿಕ ವಿಚಾರದಲ್ಲಿ ರಾಜಕಾರಣಿಗಳು ಕೈ ಹಾಕಬಾರದು. ಹಾಕಿದವರಿಗೆ ಪ್ರಾಯಶ್ಚಿತ ಕಟ್ಟಿಟ್ಟ ಬುತ್ತಿ. ಧರ್ಮ ಪರಂಪರೆ ಎಂದೂ ಮುಳುಗುವುದಿಲ್ಲ. ಈ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಮೂಲಕ ರಕ್ಷಿಸುವ ನಿರ್ಣಯ ಆಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ವೀರಶೈವ ಧರ್ಮ ಆದಿ, ಅನಾದಿ ಕಾಲದಿಂದ ಬಂದಿದೆ. ಬಸವಣ್ಣನವರು ಈ ಧರ್ಮವನ್ನು ಸ್ವೀಕರಿಸಿ, ಸುಧಾರಣೆ ತಂದರು. ಶೈವನಾಗಿದ್ದವನು ವೀರಶೈವನಾದೆ ಎಂದು ಅವರೇ ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ. ವೀರಶೈವ ಧರ್ಮಕ್ಕೆ 5 ಸಾವಿರ ವರ್ಷಗಳ ಇತಿಹಾಸ ಇರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ’ ಎಂದು ಪ್ರತಿಪಾದಿಸಿದರು.

‘ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಹಿಂದುಳಿದ ವರ್ಗದ ಸ್ಥಾನಮಾನ ನೀಡುವಂತೆ ಅಲ್ಲಿಯ ಸರ್ಕಾರಕ್ಕೆ ನಾವು ಕೋರಿಕೆ ಸಲ್ಲಿಸಿದ್ದು, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ’ ಎಂದು ಹೇಳಿದರು.

ಸಭೆಯಲ್ಲಿದ್ದ ಜನರಿಂದ ಕೈ ಮೇಲಕ್ಕೆತ್ತಿಸಿ ‘ಜೀವ ಕೊಟ್ಟಾದರೂ ಸರಿ ವೀರಶೈವ ಧರ್ಮದ ಪರಂಪರೆಯನ್ನು ಕಾಪಾಡುತ್ತೇವೆ’ ಎಂದು ಪ್ರಮಾಣ ಮಾಡಿಸಿದರು. ನಂತರ ಸಂಗೀತಯುಕ್ತ ಇಷ್ಟಲಿಂಗ ಪೂಜೆಯನ್ನು ಶ್ರೀಗಳು ನೆರವೇರಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.