ADVERTISEMENT

ನವಿಲುತೀರ್ಥ, ಹಿಡಕಲ್ ಡ್ಯಾಮಿನಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಮೇ 2012, 8:20 IST
Last Updated 1 ಮೇ 2012, 8:20 IST

ಬೆಳಗಾವಿ: ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ನದಿ ತೀರದ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಮೇ 3ರಂದು ಬೆಳಿಗ್ಗೆ 8 ಗಂಟೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 0.60 ಟಿ.ಎಂ.ಸಿ. ನೀರು ಬಿಡಲು ನಿರ್ಧರಿಸಲಾಗಿದೆ.

ನವಿಲುತೀರ್ಥ ಜಲಾಶಯದ ಅಧೀಕ್ಷಕ ಎಂಜಿನಿಯರ್ ಅವರು ಮಲಪ್ರಭಾ ನದಿಯಲ್ಲಿ ಬರುವಂತಹ ಬ್ಯಾರೇಜ್‌ಗಳ ಗೇಟ್ ತೆರೆದು ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಮತ್ತು ಕೂಡಲಸಂಗಮ ಮೇಲ್ಭಾಗದಲ್ಲಿರುವ ಹಡಗಲಿ ಬ್ಯಾರೇಜ್ ತುಂಬುವವರೆಗೆ ನೀರು ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಗಂಗಾರಾಮ್ ಬಡೇರಿಯಾ ಆದೇಶಿಸಿದ್ದಾರೆ.

ಬೆಳಗಾವಿ, ಗದಗ ಮತ್ತು ಬಾಗಲಕೋಟೆಯ ಜಿಲ್ಲಾಧಿಕಾರಿಗಳು ಅಧೀಕ್ಷಕ ಎಂಜಿನಿಯರನ್ನು ಸಂಪರ್ಕಿಸಿ ಬ್ಯಾರೇಜುಗಳ ಗೇಟ್ ತೆರೆಯಲು ವ್ಯವಸ್ಥೆ ಮಾಡಬೇಕು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನಿರ್ದೇಶನ ನೀಡಿ ಮೇ 3ರಂದು ನದಿಯ ದಂಡೆಯಲ್ಲಿರುವ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳಿಸಿ ಪಂಪ್‌ಸೆಟ್‌ಗಳನ್ನು ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ನದಿಗೆ ಬಿಡಲಾಗುವ ನೀರನ್ನು ಕೃಷಿ ಚಟುವಟಿಕೆಗೆ ಬಳಸುವಂತಿಲ್ಲ. ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬ್ಯಾರೇಜ್‌ಗಳ ಗೇಟ್‌ಗಳನ್ನು ತೆರೆದು ಕೂಡಲಸಂಗಮ ಮೇಲ್ಭಾಗದಲ್ಲಿರುವ ಹಡಗಲಿ ಬ್ಯಾರೇಜ್‌ವರೆಗೆ ನೀರು ತಲುಪುವಂತೆ ನೋಡಿಕೊಳ್ಳಬೇಕು. ಮಾರ್ಚ್ 14ರ ಸಲಹಾ ಸಮಿತಿ ಸಭೆ ನಡುವಳಿಕೆಗಳಲ್ಲಿ ತಿಳಿಸಿದಂತೆ ನೀರನ್ನು ಕೇವಲ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.

ಹಿಡಕಲ್ ಜಲಾಶಯದಿಂದ ನೀರು: ಬಾಗಲಕೋಟೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ನದಿ ತೀರದ ಜನ- ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಮೇ 1ರಂದು ಬೆಳಿಗ್ಗೆ 8 ಗಂಟೆಗೆ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 1.50 ಟಿ.ಎಂ.ಸಿ. ನೀರು ಬಿಡಲು ನಿರ್ಧರಿಸಲಾಗಿದೆ.

ಚಿಕ್ಕ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಅವರು ಘಟಪ್ರಭಾ ನದಿಯಲ್ಲಿ ಬರುವಂತಹ ಬ್ಯಾರೇಜುಗಳ ಗೇಟ್‌ಗಳನ್ನು ತೆರೆದು ಬಾಗಲಕೋಟೆ ನಗರಕ್ಕೆ ನೀರು ತಲುಪುವಂತೆ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಿದರು.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳು ಹೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ಗೆ ಮೇ 1ರಂದು ನದಿಯ ದಂಡೆಯಲ್ಲಿರುವ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳಿಸಿ ಪಂಪ್‌ಸೆಟ್‌ಗಳನ್ನು ತೆಗೆಸಲು ವ್ಯವಸ್ಥೆಯನ್ನು ಮಾಡುವಂತೆ ಆದೇಶಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.