ADVERTISEMENT

ನೇರ ತೆರಿಗೆ ಪದ್ಧತಿ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 10:25 IST
Last Updated 27 ಜೂನ್ 2012, 10:25 IST

ಇಳಕಲ್: ಕೇಂದ್ರ ಸರ್ಕಾರವು ಅರ್ಬನ್ ಬ್ಯಾಂಕ್‌ಗಳು ಗಳಿಸುವ ಲಾಭಕ್ಕೆ ಆದಾಯ ಕರ ವಿಧಿಸಿದೆ. ಎಟಿಪಿ ನಿಯಮದ ಪ್ರಕಾರ ಪತ್ತಿನ ಸಹಕಾರಿ ಸಂಘಗಳು ಆದಾಯ ಕರದಿಂದ ವಿನಾಯ್ತಿ ಪಡೆದಿರುವದರಿಂದ ಕರ ಕಟ್ಟಬೇಕಿಲ್ಲ. ಆದರೆ ಅಧಿಕಾರಿಗಳು ಆದಾಯ ಕರ ಕಟ್ಟುವಂತೆ ನೋಟಿಸ್ ಕೊಟ್ಟರೆ  ಅವರ ವಿರುದ್ಧ ಕೋರ್ಟನಲ್ಲಿ ಪ್ರಕರಣ ದಾಖಲಿಸಿ ಎಂದು ಸಹಕಾರಿ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.

ನಗರದ ರಾಣಿ ಚೆನ್ನಮ್ಮ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆದ ಸಹಕಾರ ಭಾರತಿ ಉತ್ತರ ಕರ್ನಾಟಕ ಪ್ರಾಂತದ ಸಹಕಾರಿಗಳ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಹಕಾರಿ ರಂಗದ ಬೆಳವಣಿಗೆಗೆ ಅಡಚಣೆಯನ್ನುಂಟು ಮಾಡುವವರ ಹುಳುಕುಗಳನ್ನು ಬಯಲಿಗೆ ಎಳೆಯುವ ಕೆಲಸವನ್ನು ಸಹಕಾರ ಭಾರತಿ ಸಮರ್ಥವಾಗಿ ಮಾಡುತ್ತಿದೆ. ನೇರ ತೆರಿಗೆ ಪದ್ಧತಿ (ಡಿಟಿಸಿ) ಜಾರಿಗೆ ತಂದು ಚಿಕ್ಕ ಆರ್ಥಿಕ ಸಂಸ್ಥೆಗಳಿಗೆ ನಿಧಾನವಾಗಿ ವಿಷ ಕೊಟ್ಟು ಮುಚ್ಚುವ ಷಡ್ಯಂತ್ರ ನಡೆದಿದೆ.

ಯಾವುದೇ ಕಾರಣಕ್ಕೂ ಸದ್ಯದ ಸ್ವರೂಪದಲ್ಲಿಯೇ ಡಿಟಿಸಿ ಜಾರಿಗೆ ಬರಲು  ಬಿಡುವದಿಲ್ಲ. ಸಹಕಾರಿ ಸಂಘಗಳ ವಿಷಯದಲ್ಲಿ ನಮಗೆ ಸರ್ಕಾರದ ದಯೆ ಬೇಡ, ಸಂವಿಧಾನದತ್ತ ಹಕ್ಕು ನೀಡಿದರೆ ಸಾಕು ಎಂದು ಹೇಳಿದರು.
ಉತ್ತರ ಕರ್ನಾಟಕದ ಸಹಕಾರ ಭಾರತಿ ಪ್ರಾಂತ ಪ್ರಮುಖ ರಮೇಶ ವೈದ್ಯ ಮಾತನಾಡಿ, ಕೃಷಿಯೇ ದೇಶದ ಬಹುಸಂಖ್ಯಾತ ಜನರಿಗೆ ಆಧಾರ. ಸಹಕಾರ ಕೇತ್ರದ ಮೂಲಕ ಕೃಷಿಯನ್ನು ಬಲಪಡಿಸಿ, ಬಹುಸಂಖ್ಯೆಯಲ್ಲಿ ಜನರನ್ನು ಅಭಿವೃದ್ಧಿಯತ್ತ ಕರೆದೊಯ್ಯುವುದು ಸಹಕಾರ ಭಾರತಿಯ ಉದ್ದೇಶ.

ಸಹಕಾರ ಭಾರತಿ 23 ರಾಜ್ಯಗಳಲ್ಲಿ 65 ಸಾವಿರ ಸದಸ್ಯರನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಸದಸ್ಯತ್ವವನ್ನು 2 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.  ಸಹಕಾರ ಭಾರತದ 4 ನೇ ರಾಷ್ಟ್ರೀಯ ಅಧಿವೇಶನ ಮುಂದಿನ ವರ್ಷದ ಜನವರಿ 18, 19 ಹಾಗೂ 20 ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯಲಿದೆ.

ಉತ್ತರ ಪ್ರಾಂತದ ವತಿಯಿಂದ ಮುಂಬರುವ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಮಾವೇಶವು ಕೂಡಲಸಂಗಮದಲ್ಲಿ ಆಯೋಜಿಸುವ ಆಲೋಚನೆ ಇದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ,  ಸಹಕಾರಿ ಸಂಘದ ಕಾನೂನುಗಳನ್ನು  ತಿಳಿದುಕೊಂಡು, ಗ್ರಾಹಕರು ಇಟ್ಟಿರುವ ನಂಬಿಕೆಗೆ ದ್ರೋಹವಾಗದಂತೆ ಆರ್ಥಿಕ ಸಂಸ್ಥೆಗಳನ್ನು ಅಭಿವೃದ್ಧಿಯತ್ತ ಮುನ್ನೆಡೆಸಿ ಎಂದು ಕರೆ ನೀಡಿದರು.   ಸಹಕಾರ ಭಾರತಿ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಕ ಚೊಕ್ಕ ಬಸನಗೌಡ,  ಮಹಿಳಾ ಪ್ರಮುಖರಾದ ಡಾ.ಅರುಣಾ ಅಕ್ಕಿ, ಸಹಕಾರ ಭಾರತಿ  ಬಾಗಲಕೋಟ ಜಿಲ್ಲಾ ಅಧ್ಯಕ್ಷ ಅರವಿಂದ ಮಂಗಳೂರ ಉಪಸ್ಥಿತರಿದ್ದರು.   ಡಾ.ಅರುಣಾ ಅಕ್ಕಿ ಪ್ರಾರ್ಥನೆ ಹಾಡಿದರು. ಅರವಿಂದ ಮಂಗಳೂರ ಸ್ವಾಗತಿಸಿದರು. ರಾಘವೇಂದ್ರಜಮಖಂಡಿನಿರೂಪಿಸಿದರು.                                                                                                        
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.