ADVERTISEMENT

ಪಕ್ಷ ವಿರೋಧಿ ಚಟುವಟಿಕೆಗೆ ತಕ್ಕಶಾಸ್ತಿ: ಬಿಎಸ್‌ವೈ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:56 IST
Last Updated 7 ಜುಲೈ 2017, 9:56 IST
ಲೋಕಾಪುರ ಸಮೀಪದ ಕಸಬಾ ಜಂಬಗಿ ಗ್ರಾಮದಲ್ಲಿ ಸಿ. ಸಿ. ರಸ್ತೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಹಿರೇಮಠದ ರುದ್ರಮುನಿ ಶಿವಾಚಾರ್ಯರು , ಶಾಸಕ ಗೋವಿಂದ ಕಾರಜೋಳ, ರನ್ನ ಸಕ್ಕರೆ ಕಾರ್ಖಾನೆ ಅದ್ಯಕ್ಷ ರಾಮಣ್ಣ ತಳೇವಾಡ ಇದ್ದಾರೆ
ಲೋಕಾಪುರ ಸಮೀಪದ ಕಸಬಾ ಜಂಬಗಿ ಗ್ರಾಮದಲ್ಲಿ ಸಿ. ಸಿ. ರಸ್ತೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಹಿರೇಮಠದ ರುದ್ರಮುನಿ ಶಿವಾಚಾರ್ಯರು , ಶಾಸಕ ಗೋವಿಂದ ಕಾರಜೋಳ, ರನ್ನ ಸಕ್ಕರೆ ಕಾರ್ಖಾನೆ ಅದ್ಯಕ್ಷ ರಾಮಣ್ಣ ತಳೇವಾಡ ಇದ್ದಾರೆ   

ಲೋಕಾಪುರ: ‘ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜಿಲ್ಲೆಯ ಬಿಜೆಪಿಯ ಮಾಜಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಪಂಡಿತ ದೀನದಯಾಳ ಅವರ 150ನೇ ಜನ್ಮದಿನ ಮತ್ತು ವಿಸ್ತಾರಕ ಅಭಿಯಾನ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

‘ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಕ್ಷೇತ್ರಗಳ ಸಮೀಕ್ಷೆ ಮಾಡಿದ ಬಳಿಕವಷ್ಟೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಎಲ್ಲರೂ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಪ್ರತಿಯೊಬ್ಬರೂ ಬೂತ್‌ಮಟ್ಟದಲ್ಲಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು’ ಎಂದು ಹೇಳಿದರು.

‘ಜಿ.ಎಸ್.ಟಿ. ಯಿಂದ ದೇಶಕ್ಕೆ ಹೆಚ್ಚು ಆದಾಯ ಬರಲಿದೆ. ತೆರಿಗೆ ತಪ್ಪಿಸಿಕೊಳ್ಳಲು ಯತ್ನಿಸುವವರು ಸಿಕ್ಕಿ ಬೀಳುತ್ತಾರೆ. ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಸಾಕಷ್ಟು ಆರ್ಥಿಕ ನೆರವು ಬರುತ್ತಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳುಹೇಳಿ ರಾಜ್ಯದ ಜನರನ್ನು ವಂಚಿಸುತ್ತಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡುತ್ತಾರೆ. ನೀರಾವರಿ ಇಲಾಖೆಯಲ್ಲಿ ಅಪಾರ ಭ್ರಷ್ಟಾಚಾರ ನಡೆದಿದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನೀರಾವರಿ ಸಚಿವ ಮಾಡಿರುವ ಅವ್ಯವಹಾರದ ಬಗ್ಗೆ ತನಿಖೆ ಮಾಡಲಾಗುವುದು’ ಎಂದು ಹೇಳಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ ‘81 ಕ್ಷೇತ್ರಗಳಲ್ಲಿ ಸಂಚರಿಸಿ ರಾಜ್ಯದ ಜನರ ಕಷ್ಟಗಳನ್ನು ಅರಿಯುತ್ತಿರುವ ಯಡಿಯೂರಪ್ಪ ಅವರಿಂದ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ದಿಯ ವೇಗ ಹೆಚ್ಚಾಗಿತ್ತು. ಈಗ ಬರಗಾಲವಿದ್ದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ’ ಎಂದು ಆರೋಪಿಸಿದರು.

ಸೇರ್ಪಡೆ: ಇದೇ ವೇಳೆ ಅಲ್ಪಸಂಖ್ಯಾತರು, ದಲಿತರು,  ನೂರಾರು ಸಂಖ್ಯೆಯ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.  ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ಶಾಸಕರಾದ ಎಮ್.ಕೆ.ಪಟ್ಟಣಶೆಟ್ಟಿ, ಸಿದ್ದು ಸವದಿ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಸಂಸದ ಪಿ ಸಿ ಗದ್ದಿಗೌಡರ,ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ,  ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ತಾಲ್ಲೂಕು ಅಧ್ಯಕ್ಷ ಕೆ. ಆರ್. ಮಾಚಪ್ಪನವರ, ಲೋಕೇಶಗೌಡ, ಲೋಕಣ್ಣ ಕತ್ತಿ, ಕಲ್ಲಪ್ಪ ಸಬರದ, ಆರ್.ಟಿ. ಪಾಟೀಲ, ರಮೇಶ ಪಂಚಕಟ್ಟಿಮಠ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಎಚ್ ಪಂಚಗಾಂವಿ ಸ್ವಾಗತಿಸಿ, ನಾಗಪ್ಪಅಂಬಿ ನಿರೂಪಿಸಿ, ಸಂಗಮಶ ಪಲ್ಲೇದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.