ADVERTISEMENT

ಪಿಂಚಣಿ ಅದಾಲತ್: ರಾವಣನ ಹೊಟ್ಟೆಗೆ ಅರೆಕಾಸು ಮಜ್ಜಿಗೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 11:34 IST
Last Updated 22 ಜೂನ್ 2013, 11:34 IST

ಬೀಳಗಿ: ತಾಲ್ಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದಲ್ಲಿ ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪಿಂಚಣಿ ಅದಾಲತ್‌ನಲ್ಲಿ 6 ಅಂಗವಿಕಲರಿಗೆ ಹಾಗೂ 12 ವೃದ್ಧರಿಗೆ ವೃದ್ಧಾಪ್ಯ, ಗುರುವಾರ ಅನಗವಾಡಿಯಲ್ಲಿ 1ಅಂಗವಿಕಲ, 2 ವಿಧವಾ, 3 ವೃದ್ಧಾಪ್ಯ ವೇತನ ಮಂಜೂರು ಮಾಡಲಾಯಿತು. ಆದರೆ ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕುಡಿಸಿದಂತಾಗಿದೆ ಎಂದು ಇನ್ನೂ ಪಿಂಚಣಿ ದೊರೆಯದ ಹಾಗೂ ಪಿಂಚಣಿ ರದ್ದಾದ ಅರ್ಜಿದಾರರು ಗೋಳಿಡುತ್ತಿದ್ದಾರೆ.

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗ ವಿಕಲರ ವೇತನ ಹಾಗೂ ನಿರ್ಗತಿಕ ವಿಧವಾ ವೇತನಕ್ಕಾಗಿ 2010-11ನೇ ಸಾಲಿನಲ್ಲಿ ಬಂದಿದ್ದ ಅರ್ಜಿಗಳನ್ನು ಪರಿಶೀಲಿಸಿ 16,995 ಜನರನ್ನು ಅರ್ಹರೆಂದು ಗುರುತಿಸಿ ವಿವಿಧ ಯೋಜನೆಗಳಡಿ ಮಂಜೂರಾತಿ ಕೊಡಲಾಗಿತ್ತು. ಆದರೆ 2011-12ನೇ ಸಾಲಿನಲ್ಲಿ ಫಲಾನುಭವಿಗಳನ್ನು ಭೌತಿಕವಾಗಿ ಪರಿಶೀಲಿಸಿ 7727 ಜನರು ಅನರ್ಹರೆಂದು ಘೋಷಿಸಿ ಅವರ ಪಿಂಚಣಿಯನ್ನು ರದ್ದುಪಡಿಸಲಾಗಿದೆ.

ಆದರೆ ಈ ಭೌತಿಕ ಪರಿಶೀಲನೆ ಅವೈಜ್ಞಾನಿಕವಾದುದು ಎಂದು ಪಿಂಚಣಿ ರದ್ದಾದ ಬಹಳಷ್ಟು ಫಲಾನುಭವಿಗಳು ಗೋಳಾಡುತ್ತಿದ್ದಾರೆ.  ಈ ಕ್ರಮದಿಂದಾಗಿ ಸುಮಾರು ತಿಂಗಳುಗಳಿಂದ  ಮಾಸಾಶನ ಬರದೇ ಇರುವುದರಿಂದ ಸಾವಿರಾರು ಸಂಖ್ಯೆಯ ಫಲಾನುಭವಿಗಳು ಈ ಹಿಂದೆ ಮಾಸಾಶನಕ್ಕೆ ಮಂಜೂರಿ ನೀಡಿದ ಆದೇಶದ ಪ್ರತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ದಿನ ನಿತ್ಯವೂ ತಹಶೀಲ್ದಾರ್ ಕಚೇರಿಯ  ಬಾಗಿಲು ತಟ್ಟುತ್ತಿದ್ದಾರೆ. ಸಂಬಂಧಿಸಿದವರ ಮುಂದೆ ಕುಳಿತು ಕಣ್ಣೀರು ಹಾಕುತ್ತಾ `ಹೆಂಗಾರಾ ಮಾಡಿ ನಮಗ ರೊಕ್ಕ ಬರೂವಂಗ ಮಾಡ್ರೀ' ಎಂದು ಅಂಗಲಾಚುತ್ತಿದ್ದಾರೆ.

ಈ ಕುರಿತು ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿ, `ಮಹತ್ತರವಾದ ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಕ್ಕಾಗಿಯೇ ಪ್ರತಿ ತಿಂಗಳು 1ರಿಂದ 15ರೊಳಗಾಗಿ ಪ್ರತಿ ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಿ ಇಂಥವುಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಈಗ ಅನರ್ಹಗೊಂಡ ಪಿಂಚಣಿದಾರರು ಹೊಸ ಅರ್ಜಿಗಳನ್ನು ಕೊಟ್ಟಲ್ಲಿ ಪರಿಶೀಲಿಸಿ ಅರ್ಹರಿದ್ದಲ್ಲಿ ಪಿಂಚಣಿ ಮಂಜೂರಿ ನೀಡಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರರ ಕೊಠಡಿಯಲ್ಲಿ ಅವರು ಕುಳಿತಿರುವಾಗಲೇ ಮುಂಡಗನೂರಿನ ಅಮೋಘ ಬಸಪ್ಪ ತಿಪರೆಡ್ಡಿ ಎಂಬ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಬಾಲಕನನ್ನು ಅಲ್ಲಿಗೆ ಕರೆತಂದರು. ಆಗ ಆತನ ನಿಜಸ್ಥಿತಿ ಗಮನಿಸಿ, ಅರ್ಜಿ ಕೊಟ್ಟ ತಕ್ಷಣವೇ ಮಂಜೂರಿ ಕೊಡಿ ಎಂದು ಅವರು ತಹಶೀಲ್ದಾರರಿಗೆ ಸೂಚಿಸಿದರು. 

ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ, ಗ್ರೇಡ್2 ತಹಶೀಲ್ದಾರ್ ಢವಳಗಿ, ಕಂದಾಯ ನಿರೀಕ್ಷಕ ಎಸ್.ಪಿ. ಖಾತೇದಾರ ಪಿಂಚಣಿ ಅದಾಲತ್‌ನಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.