ADVERTISEMENT

ಪ್ರಾರ್ಥನೆ, ಮನೋನಿಗ್ರಹದ ಸಮಯ

ರಮ್ಜಾನ್ ಮಾಸ; ರೋಜಾ ಆಚರಣೆ, ಹಂಚಿ ಉಣ್ಣುವ ಆಶಯ

ವೆಂಕಟೇಶ್ ಜಿ.ಎಚ್
Published 13 ಜೂನ್ 2018, 12:48 IST
Last Updated 13 ಜೂನ್ 2018, 12:48 IST
ಸೆಕ್ಟರ್ ನಂ 38ರ ನಿವಾಸಿ ಬುಡ್ಡೇಸಾಬ್ ಗಲಗಲಿ ನಿವಾಸದಲ್ಲಿ ಮಂಗಳವಾರ ಸಂಜೆ ನಡೆದ ಇಫ್ತಾರ್‌
ಸೆಕ್ಟರ್ ನಂ 38ರ ನಿವಾಸಿ ಬುಡ್ಡೇಸಾಬ್ ಗಲಗಲಿ ನಿವಾಸದಲ್ಲಿ ಮಂಗಳವಾರ ಸಂಜೆ ನಡೆದ ಇಫ್ತಾರ್‌   

ಬಾಗಲಕೋಟೆ: ಮುಂಗಾರು ಸಂಭ್ರಮದ ನಡುವೆಯೇ ಮುಸ್ಲಿಮರಿಗೆ ಅಲ್ಲಾಹುವಿನ ಧ್ಯಾನಕ್ಕೆ ಅತ್ಯಂತ ಪವಿತ್ರ ಸಮಯ ರಮ್ಜಾನ್‌ ಮಾಸ ಆರಂಭವಾಗಿದೆ. ಇತರೆಡೆಯಂತೆ ಬಾಗಲಕೋಟೆ ಜಿಲ್ಲೆಯ ಮುಸ್ಲಿಂ ಸಮುದಾಯದವರು ಮೇ 17ರಿಂದ ರೋಜಾ (ಉಪವಾಸ) ಆರಂಭಿಸಿದ್ದಾರೆ.

‘ನಸುಕಿನಲ್ಲಿ ಏಳುವಾಗಲೇ ದೇವರ ಸ್ಮರಣೆ ಆರಂಭಿಸುತ್ತೇವೆ. ದಿನಕ್ಕೆ ಐದು ಬಾರಿ ಪ್ರಾರ್ಥನೆಯ ಜೊತೆಗೆ ಹನಿ ನೀರು ಕುಡಿಯದೇ ರೋಜಾ (ಉಪವಾಸ) ಆಚರಿಸುತ್ತೇವೆ. ಇದು ದೇಹದ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಮನಸ್ಸಿನ ನಿಗ್ರಹಕ್ಕೂ ಮುಂದಾಗುತ್ತೇವೆ’ ಎಂದು ನವನಗರದ ಸೆಕ್ಟರ್ ನಂ 38ರ ನಿವಾಸಿ ಬುಡ್ಡೇಸಾಬ್ ಗಲಗಲಿ ಹೇಳುತ್ತಾರೆ.

ಬಾಗಲಕೋಟೆಯ ವಲ್ಲಭಬಾಯಿ ಚೌಕದಲ್ಲಿ ನವಭಾರತ ಪ್ರಿಂಟಿಂಗ್‌ ಪ್ರೆಸ್‌ ನಡೆಸುವ ಬುಡ್ಡೇಸಾಬ್‌ ರಮ್ಜಾನ್‌ ಮಾಸದ ಇಫ್ತಿಯಾರ್‌ಗೆ ಮಂಗಳವಾರ ‘ಪ್ರಜಾವಾಣಿ’ಯನ್ನು ಮನೆಗೆ ಆಹ್ವಾನಿಸಿದ್ದರು.

ADVERTISEMENT

ಗಲಗಲಿ ಕುಟುಂಬದೊಂದಗೆ ಸ್ನೇಹಿತ ಮೆಹಬೂಬ್‌ಸಾಬ್ ಸಂದಿಮನಿ ಕೂಡ ಇಫ್ತಿಯಾರ್‌ಗೆ ಸಾಥ್ ನೀಡಿದ್ದರು. ಎಲ್ಲರೂ ಆಗಷ್ಟೇ ತರಾಪಿಯಾ ನಮಾಜ್‌ (ರಮ್ಜಾನ್‌ ಮಾಸದಲ್ಲಿ ಮಾಡುವ ವಿಶೇಷ ಪ್ರಾರ್ಥನೆ) ಮುಗಿಸಿ ರಾತ್ರಿಯ ಔತಣಕ್ಕೆ ಸಿದ್ಧವಾಗಿದ್ದರು. ಹೆಣ್ಣು ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮುಗಿಸಿದ್ದರು. ಎಲ್ಲರೂ ಒಟ್ಟಾಗಿ ಇಫ್ತಿಯಾರ್‌ನಲ್ಲಿ ಪಾಲ್ಗೊಂಡಾಗ ಹಂಚಿ ಉಣ್ಣುವ ಆಶಯ ಕಾಣಿಸಿತು.

ರೋಜಾ ಆಚರಣೆ:

ರಮ್ಜಾನ್‌ ಮಾಸ ಇಸ್ಲಾಂನ ಆಶಯಗಳ ಭಿತ್ತಿಯಾದ ಪವಿತ್ರ ಕುರಾನ್ ರೂಪುಗೊಂಡ ಸಮಯ. ಶಾಂತಿ ಮಂತ್ರದ ಪಠಣದೊಂದಿಗೆ ಜಗತ್ತಿನ ಒಳತಿಗಾಗಿ ಪ್ರಾರ್ಥಿಸುವ ಕ್ಷಣ...ರಮ್ಜಾನ್‌ ಮಾಸದಲ್ಲಿ ಸೂರ್ಯೋದಯದಿಂದ –ಸೂರ್ಯಾಸ್ತದವರೆಗೂ ಪ್ರತಿಯೊಬ್ಬ ಮುಸ್ಲಿಮರು ಆಚರಿಸುವ ‘ರೋಜಾ’ (ಉಪವಾಸ ವ್ರತ) ದೇಹ ಮತ್ತು ಆತ್ಮ ಶುದ್ಧೀಕರಣಕ್ಕೆ ನೆರವಾಗುತ್ತದೆ ಎಂಬ ನಂಬಿಕೆ ಇದೆ. ‘ಉಪವಾಸ ಮನಸ್ಸಿನ ನಿಗ್ರಹದ ದೃಷ್ಟಿಯಿಂದಲೂ ಮಹತ್ವದ್ದು. ವರ್ಷದಲ್ಲಿ ಒಂದು ತಿಂಗಳು ಉಪವಾಸ ಮಾಡಿದಲ್ಲಿ ನೆಮ್ಮದಿ ಹಾಗೂ ಸಂತೋಷಕ್ಕೆ ದಾರಿಯಾಗುತ್ತದೆ. ಇದಕ್ಕೆ ಆಧ್ಯಾತ್ಮದ ಹಿನ್ನೆಲೆಯೂ ಇದೆ’ ಎನ್ನುತ್ತಾರೆ ಮೆಹಬೂಬ್‌ಸಾಬ್ ಸಂದಿಮನಿ.

ರೋಜಾ ಅವಧಿಯೆಂದರೆ ಕೇವಲ ಉಪವಾಸವಿರುವುದು ಅಲ್ಲ. ದೇವರ ಸ್ಮರಣೆಯ ಜೊತೆಗೆ ಕೆಟ್ಟ ಕಾರ್ಯಗಳಿಂದ ದೂರವಿರುವ ಪ್ರಯತ್ನ ಮಾಡಲಾಗುತ್ತದೆ. ವ್ಯವಹಾರದಲ್ಲಿ ನ್ಯಾಯ ಪಾಲನೆ, ಸತ್ಯ ಹೇಳುವುದು, ಜನರಿಗೆ ಒಳಿತು ಮಾಡುವುದಾಗಿದೆ’ ಎಂದು ಹೇಳುತ್ತಾರೆ.
‘ಜಗತ್ತಿನಲ್ಲಿ ಹಸಿವು ಹಾಗೂ ಬಡತನ ಎದ್ದು ತೋರುವಂತಹ ವಿಚಾರಗಳು. ಅವುಗಳ ಮಹತ್ವ ಎಲ್ಲರಿಗೂ
ತಿಳಿದು ಮನುಷ್ಯನಲ್ಲಿಯ ಅಹಂ ಕಳೆಯಬೇಕು. ದೇವರ ಎದುರು ಬಡವ–ಶ್ರೀಮಂತ ಎಂಬ ಬೇಧವಿಲ್ಲದೇ ಎಲ್ಲರೂ ಸಮಾನರು’ ಎಂಬ ಆಧ್ಯಾತ್ಮದ ಸಂಗತಿ ರೋಜಾ ಆಚರಣೆಯಲ್ಲಿದೆ’ ಎನ್ನುತ್ತಾರೆ.

ದೈನಂದಿನ ಕೆಲಸಗಳ ಒತ್ತಡದ ನಡುವೆಯೂ ಇಡೀ ದಿನ ಪ್ರಾರ್ಥನೆ, ಜಪ, ಕುರಾನ್ ಪಠಣ, ಧರ್ಮ ಪ್ರವಚನ ಕಾರ್ಯಕ್ರಮಗಳಲ್ಲಿ ತೊಡಗಿರುತ್ತಾರೆ. ಇಸ್ಲಾಂ ತತ್ವ, ವಿಚಾರಗಳಿಗೆ ಸಂಬಂಧಿಸಿದ ಲೇಖನ, ಪುಸ್ತಕ ಓದುತ್ತಾರೆ. ಕೋಪ, ತಾಪ ಬಿಟ್ಟು, ಪರಸ್ಪರರು ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ.

‘ನಿತ್ಯದ ಬದುಕಿನಲ್ಲಿ ಅರಿವಿಲ್ಲದೆ ಮಾಡಿದ ತಪ್ಪು–ಒಪ್ಪುಗಳಿಗೆ ‘ಅಲ್ಲಾಹುವಿನ’ ಬಳಿ ಪ್ರಾಯಶ್ಚಿತ್ತ ಬೇಡುವ ಜೊತೆಗೆ ಜಕಾತ್‌ ಹೆಸರಿನಲ್ಲಿ ದುಡಿಮೆಯ ಒಂದಂಶವನ್ನು ಬಡವರಿಗೆ ದಾನ ಮಾಡಿ ಧನ್ಯತಾಭಾವ ಹೊಂದುತ್ತೇವೆ. ಜಕಾತ್‌ನ ಸಂದೇಶ ದುಡಿದದ್ದನ್ನು ಪೂರ್ತಿ ನಾವೇ ಅನುಭವಿಸುವುದು ಸಲ್ಲ. ಅದರಲ್ಲಿ ಬೇರೆಯವರಿಗೂ ಪಾಲು ನೀಡಬೇಕು ಎಂಬುದೂ ಇದೆ. ನಮ್ಮಲ್ಲಿ ₹1 ಲಕ್ಷ ಉಳಿತಾಯದ ಹಣ ಇದ್ದರೆ ಅದರಲ್ಲಿ ₹2.5 ಸಾವಿರ ಬಡವರಿಗೆ ದಾನ ಮಾಡುತ್ತೇವೆ’ ಎನ್ನುತ್ತಾರೆ ಬುಡ್ಡೇಸಾಬ್ ಗಲಗಲಿ.

ಗರಿಗೆದರಿದ ರಮ್ಜಾನ್ ಮಾಸದ ಚಟುವಟಿಕೆ

ಮುಳುಗಡೆ ನಗರಿ ಬಾಗಲಕೋಟೆಯಲ್ಲೂ ರಮ್ಜಾನ್‌ ಮಾಸ ಗರಿಗೆದರಿದೆ. ಮುಸ್ಲಿಂ ಸಮುದಾಯ ನೆಲೆಸಿರುವ ಗಲ್ಲಿಗಳು ನಸುಕಿನ ಮೂರೂವರೆ ಗಂಟೆಗೆ ಜೀವ ಪಡೆಯುತ್ತವೆ. ಮಸೀದಿಗಳಲ್ಲಿನ ಧ್ವನಿವರ್ಧಕಗಳು ಸದ್ದಾಗುವ (ಆಜಾನ್‌) ಮೊದಲೇ ಮನೆಗಳಲ್ಲಿ ಚಟುವಟಿಕೆ ಆರಂಭವಾಗುತ್ತವೆ. ಹಿರಿ–ಕಿರಿಯರು, ಮಹಿಳೆ–ಪುರುಷರು ಎಂಬ ಬೇಧವಿಲ್ಲದೇ ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನರಾಗಿರುತ್ತಾರೆ.

‘ರಮ್ಜಾನ್‌ ವೇಳೆ ಮಕ್ಕಳು, ಕುಟುಂಬ ಉಳಿದ ಸದಸ್ಯರಿಗೆ ಹೊಸ ಬಟ್ಟೆ ಸೇರಿದಂತೆ ಬೇರೆ ಬೇರೆ ಸಾಮಗ್ರಿಗಳ ಖರೀದಿ, ರೋಜಾ ಬಿಟ್ಟ ನಂತರ ವೈವಿಧ್ಯಮಯ ಖಾದ್ಯ, ಹಣ್ಣು–ಹಂಪಲು, ಪಾನೀಯಗಳ ತಯಾರಿಯಲ್ಲಿ ಮಹಿಳೆಯರು ತೊಡಗುತ್ತಾರೆ.

ರಮ್ಜಾನ್‌ ಮಾಸದಲ್ಲಿ ಚಂದ್ರ ಕಂಡ ಮಾರನೇ ದಿನ (26ನೇ ದಿನ) ಈದ್ಗಾಗಳಿಗೆ ತೆರಳಿ ಪ್ರಾರ್ಥನೆ ಮಾಡಲಾಗುತ್ತದೆ. ನಂತರ ನೆರೆಹೊರೆಯವರೊಂದಿಗೆ ಸೇರಿ ಸುಕುರುಮಾ (ವಿಶಿಷ್ಟ ಪಾಯಸ) ಸೇವಿಸುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಮಾಂಸಹಾರ, ಸಸ್ಯಹಾರದ ವಿಶೇಷ ತಿನಿಸುಗಳು, ಹಣ್ಣು–ಹಂಪಲುಗಳನ್ನು ಅಂದು ಸವಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.