ADVERTISEMENT

`ಬಜೆಟ್‌ನಲ್ಲಿ ರೈತರಿಗೆ ಆಶಾಕಿರಣ ಮೂಡಲಿಲ್ಲ'

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 9:51 IST
Last Updated 20 ಜುಲೈ 2013, 9:51 IST

ಮಹಾಲಿಂಗಪುರ: `ಎರಡು ದಶಕಗಳ ಹಿಂದೆ ರೈತರ ಪರವಾಗಿ ಹೋರಾಟ ಮಾಡಿದ್ದ ಸಧ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್ ಮಂಡನೆಯಲ್ಲಿ ರೈತರಿಗೆ ಯಾವುದೇ ಅಶಾಕಿರಣ ಮೂಡಿಸಲಿಲ್ಲ, ಪ್ರತಿಶತ 65 ರಷ್ಟು ಜನಸಂಖ್ಯೆಯ ರೈತರಿಗಾಗಿ ಇನ್ನೂ ಅಧಿಕ ಹಣವನ್ನು ಮೀಸಲಾಗಿಡಬೇಕಿತ್ತು, ರೈತರಿಗೆ ವರದಾನವಾಗಬಲ್ಲ ಮಲಪ್ರಭಾ ಹಾಗೂ ಕಳಸಾಬಂಡೂರಿ ಯೋಜನೆಗಳ ಕಾಯಕಲ್ಪಕ್ಕೆ ಮುಖ್ಯ ಮಂತ್ರಿಗಳು ಒತ್ತು ನೀಡಬೇಕಿತ್ತು' ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.

ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆದ ನರಗುಂದದಲ್ಲಿ ನಡೆಯುವ ಹುತಾತ್ಮ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. `ಕಳೆದ 64 ವರ್ಷಗಳೂ ರೈತರ ರಕ್ತ ಹೀರುವ ಪದ್ಧತಿ ಜಾರಿಯಲ್ಲಿದ್ದು ಸಕ್ಕರೆ ಕಾರ್ಖಾನೆಯ ಮಾಲೀಕರಿಂದ ಕಬ್ಬಿನ ಬಿಲ್ ಪಾವತಿಸುವಲ್ಲಿಯೂ ಶೋಷಣೆ ನಡೆಯುತ್ತಿದೆ, ಸರಕಾರ ಒಂದು ರೂಪಾಯಿಗೆ ಅಕ್ಕಿ ನೀಡುವ ಯೋಜನೆಯಂತವುಗಳನ್ನು ಬಿಟ್ಟು ಗ್ರಾಮಗಳಿಗೆ ಹಾಗೂ ರೈತರ ಅಭ್ಯುದಯಕ್ಕೆ ಬಜೆಟ್‌ನಲ್ಲಿ ಶೇ 65ರಷ್ಟು ಹಣವನ್ನು ಮೀಸಲಿರಿಸಬೇಕಿದೆ' ಎಂದು ಅವರು ಅಭಿಪ್ರಾಯ ಪಟ್ಟರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನರಗುಂದ ಗೋಲಿಬಾರ್‌ನಲ್ಲಿ ಹುತಾತ್ಮರಾದ 153 ಜನ ರೈತರ ಆತ್ಮಶಾಂತಿಗಾಗಿ ಹಾಗೂ ಅವರ ಋಣ ತೀರಿಸಲು ಇದೇ 21ರಂದು ಬೃಹತ್ ರೈತರ ಸಮಾವೇಶವನ್ನು ನಡೆಸಲಾಗುತ್ತಿದ್ದು ರಾಜ್ಯದೆಲ್ಲೆಡೆಯಿಂದ ರೈತರು ನರಗುಂದದಲ್ಲಿ ಸಮಾವೇಶಗೊಳ್ಳಲಿದ್ದಾರೆ ಎಂದು ಹೇಳಿದರು. ತಾಲ್ಲೂಕು ಮುಖಂಡರಾದ ಮುತ್ತಪ್ಪ ಕೋಮಾರ, ಸುಭಾಸ ಶಿರಬೂರ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಳಲಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸದಾಶಿವ ಸಂಕ್ರಟ್ಟಿ, ಮೀನಾಕ್ಷಿ ಕೋಡಿಹಳ್ಳಿ ವೇದಿಕೆಯಲ್ಲಿದ್ದರು.

ರೈತ ಮುಖಂಡರಾದ ವೀರಪ್ಪ ಹಂಚಿನಾಳ, ಬಸವರಾಜ ಕಾಂಬಳೆ, ಸಂಗಪ್ಪ ನಾಗರಡ್ಡಿ, ತುಳಜಪ್ಪ ವಾಲಿಮರದ, ಗೋವಿಂದಪ್ಪ ಮೆಟಗುಡ್ಡ, ಸಂಜು ಮಾಣಿಕಶೆಟ್ಟಿ, ಗಂಗಾಧರ ಮೇಟಿ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು. ನಾಗರಾಜ ಪೂಜಾರ ಸ್ವಾಗತಿಸಿದರು. ಮುತ್ತಪ್ಪ ಕೋಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.