ADVERTISEMENT

ಬರಿದಾದ ಬ್ಯಾರೇಜ್; ಪರದಾಟ

​ಪ್ರಜಾವಾಣಿ ವಾರ್ತೆ
Published 26 ಮೇ 2012, 9:35 IST
Last Updated 26 ಮೇ 2012, 9:35 IST

ಬಾಗಲಕೋಟೆ: ಬಾಗಲಕೋಟೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬನ್ನಿದಿನ್ನಿ ಬ್ಯಾರೇಜ್ ಸಂಪೂರ್ಣ ಬರಿದಾಗಿದೆ. ಪರಿಣಾಮ ನವನಗರ, ವಿದ್ಯಾಗಿರಿ ಮತ್ತು ಹಳೆ ಬಾಗಲಕೋಟೆಯ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಹಿಡಕಲ್ ಜಲಾಶಯದಿಂದ ಬಿಡಲಾಗಿರುವ ನೀರು ಬನ್ನಿದಿನ್ನಿ ಬ್ಯಾರೇಜ್‌ಗೆ  ತಲುಪದ ಕಾರಣ ನಗರಕ್ಕೆ ನೀರು ಪೂರೈಕೆ ಮಾಡುವ ಬ್ಯಾರೇಜ್ ಸಂಪೂರ್ಣ ಬರಿ ದಾಗಿದೆ, ಈ ಕಾರಣವಾಗಿ  ಬಿಟಿಡಿಎ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನಗವಾಡಿ ಸೇತುವೆ ಬಳಿ ಇರುವ ಹೊಂಡಗಳಲ್ಲಿನ ಹಿನ್ನೀರು ಸಂಗ್ರಹಣೆ ಬಳಸಿಕೊಳ್ಳಲು ಮುಂದಾಗಿದೆ.

ನಗರದ ಜನತೆಯ ನೀರಿನ ಬರವನ್ನು ತಾತ್ಕಾಲಿಕ ವಾಗಿ ಪರಿಹರಿಸುವ ನಿಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಈ ಹರಸಾಹಸಕ್ಕೆ ಮುಂದಾಗಿದೆ. ಇದೀಗ ಬಿಟಿಡಿಎ ಸಿಬ್ಬಂದಿ ದೊಡ್ಡ ದೊಡ್ಡ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ಮೋಟರ್ ಮೂಲಕ ಪಂಪ್ ಮಾಡಿ ಬನ್ನಿದಿನ್ನಿ ಜಾಕ್‌ವೆಲ್‌ಗೆ ಪೂರೈಕೆ ಮಾಡುವ ಮೂಲಕ ನೀರನ್ನು ಸಂಗ್ರಹಿಸಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ನೀರೊದಗಿಸುವ ಸಂಬಂಧ ಬಿಟಿಡಿಎ ಸಿಬ್ಬಂದಿ ಕೈಗೊಂಡಿರುವ ಕಾಮಗಾರಿಯನ್ನು ಶುಕ್ರವಾರ ಶಾಸಕ ವೀರಣ್ಣ ಚರಂತಿಮಠ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಟಿ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಚರಂತಿಮಠ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದು,  ಕುಡಿಯುವ ನೀರಿನ ಸಮಸ್ಯೆ ಇನ್ನೂ ಜನತೆಗೆ ಉದ್ಭವಿಸುವುದಿಲ್ಲ ಎಂದರು.

ದೊಡ್ಡ ದೊಡ್ಡ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ಎರಡು ದೋಣಿಗಳ ಸಹಾಯದಿಂದ 60 ಎಚ್.ಪಿ ಸಾಮಾರ್ಥ್ಯದ ಪಂಪ್‌ನಿಂದ 88 ಎಲ್.ಪಿ.ಎಸ್‌ನಂತೆ ಪ್ರತಿದಿನ ಎತ್ತಿಹಾಕಲಾಗುತ್ತಿದೆ. ಎರಡು ಪಂಪ್‌ಗಳಿಂದ ಪ್ರತಿದಿನ 76 ಲಕ್ಷ ಲೀಟರ ನೀರನ್ನು ಜಾಕವೆಲ್‌ಗೆ ಹರಿಸಲಾಗುತ್ತಿದೆ. ಈ ರೀತಿ ಎರಡು ದಿನಗಳವರೆಗೆ ಪಂಪ್ ಮಾಡಿದ ನೀರನ್ನು ಒಂದು ದಿನಕ್ಕೆ ನವನಗರಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕುಡಿಯುವ ನೀರನ್ನು ಸಂಗ್ರಹಿಸಿ ಹಳೇ ಬಾಗಲ ಕೋಟೆ ಪಟ್ಟಣ, ನವನಗರ ಹಾಗೂ ವಿದ್ಯಾಗಿರಿ ಪ್ರದೇಶಗಳಿಗೆ ಜೂನ್ 15ರವರೆಗೆ ನೀರನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಬಿಟಿಡಿಎ ಸದಸ್ಯ ಯಲ್ಲಪ್ಪ ಜಕಾತಿ, ಕೇಶವ ಭಜಂತ್ರಿ, ಬಿಟಿಡಿಎ ಮುಖ್ಯ ಅಭಿಯಂತರ ಆಡಿನ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.