ADVERTISEMENT

ಬೆಂಬಲ ಬೆಲೆಗೆ ಅರಿಸಿನ ಖರೀದಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಬೆಂಬಲ ಬೆಲೆಗೆ  ಅರಿಸಿನ ಖರೀದಿ
ಬೆಂಬಲ ಬೆಲೆಗೆ ಅರಿಸಿನ ಖರೀದಿ   

ಬಾಗಲಕೋಟೆ: ಬೆಲೆ ಕುಸಿತದಿಂದ ಕಂಗಾಲಾಗಿದ್ದ ಅರಿಸಿನ ಬೆಳೆಗಾರರ ನೆರವಿಗೆ ಧಾವಿಸಿರುವ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ರೂ. 3.33 ಕೋಟಿ ಮೌಲ್ಯದ 6,668 ಕ್ವಿಂಟಲ್ ಅರಿಸಿನ ಖರೀದಿಸಿದೆ.

ಜಿಲ್ಲೆಯ ಮಹಾಲಿಂಗಪುರ ಮತ್ತು ತೇರದಾಳ ಉಪ ಮಾರುಕಟ್ಟೆಯಲ್ಲಿ ಪ್ರತ್ಯೇಕ ಕೇಂದ್ರಗಳನ್ನು ತೆರೆದು ಮೇ  5 ರಿಂದ ಜೂನ್ 15ರವರೆಗೆ (ಎರಡು ಹಂತದಲ್ಲಿ) ಕ್ವಿಂಟಲ್‌ಗೆ ರೂ. 5,000 ದರದಲ್ಲಿ ಅರಿಸಿನ ಖರೀದಿಸಲಾಗಿದೆ.

ಜಿಲ್ಲೆಯಲ್ಲಿ  ನಿರೀಕ್ಷೆಗೂ ಮೀರಿ ರೈತರು ಅರಿಸಿನ ಮಾರಾಟ ಮಾಡಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಗೋವಿಂದ ರೆಡ್ಡಿ `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.

ತೇರದಾಳ ಟಿಎಪಿಎಂಸಿ ಖರೀದಿ ಕೇಂದ್ರದಲ್ಲಿ 5,454 ಹಾಗೂ ಮಹಾಲಿಂಗಪುರ ಟಿಎಪಿಎಂಸಿ ಖರೀದಿ ಕೇಂದ್ರದಲ್ಲಿ 1,214 ಕ್ವಿಂಟಲ್ ಅರಿಸಿನ ಖರೀದಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗಿದ್ದ ರೂ. ಎರಡು ಕೋಟಿಯನ್ನು 256 ರೈತರಿಗೆ ಈಗಾಗಲೇ ವಿತರಿಸಲಾಗಿದೆ. ಇನ್ನೂ ರೂ. 1.33 ಕೋಟಿ ಕೊರತೆಯಾಗಿದ್ದು, ಹಣ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಹಿಂದಿನ ವರ್ಷ ಕ್ವಿಂಟಲ್‌ಗೆ ರೂ. 18,000 ಧಾರಣೆ ದೊರೆತಿದ್ದರಿಂದ ಜಿಲ್ಲೆಯಲ್ಲಿ 2011-12ನೇ ಸಾಲಿನಲ್ಲಿ  2,879 ಹೆಕ್ಟೇರ್‌ನಲ್ಲಿ ರೈತರು 15,950 ಮೆಟ್ರಿಕ್ ಟನ್ ಅರಿಸಿನ ಬೆಳೆದಿದ್ದರು.

ಈ ನಡುವೆ, ಬೆಲೆ ಕುಸಿತದಿಂದ ಬೆಳೆಗಾರರು ದಿಕ್ಕೆಟ್ಟಿದ್ದರು. ಅವರ ಸಹಾಯಕ್ಕೆ ಮುಂದಾದ ಕೇಂದ್ರ ಸರ್ಕಾರದಿಂದ ರೂ 4,092 ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದಿಂದ ರೂ 908 ಪ್ರೋತ್ಸಾಹಧನ ಸೇರಿಸಿದ್ದು, ಕ್ವಿಂಟಲ್‌ಗೆ ರೂ. 5,000 ನಿಗದಿಪಡಿಸಿ ಖರೀದಿಸಲಾಗಿದೆ ಎಂದು ಬಾಗಲಕೋಟೆ ಎಪಿಎಂಸಿ ಕಾರ್ಯದರ್ಶಿ ಬಿ.ಆರ್.ಶ್ರೀಹರಿ ತಿಳಿಸಿದರು.ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸುವ ಮುನ್ನವೇ ಸಾಕಷ್ಟು ರೈತರು ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಅರಿಸಿನ ಮಾರಾಟ ಮಾಡಿದ್ದಾರೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.