ADVERTISEMENT

ಮಕ್ಕಳ ಸುರಕ್ಷತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 9:55 IST
Last Updated 6 ಜೂನ್ 2018, 9:55 IST

ಬಾಗಲಕೋಟೆ: ಟಂಟಂ ಸೇರಿದಂತೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಎಲ್ಲಾ ವಾಹನಗಳಿಗೂ ಇನ್ನು ಮುಂದೆ ಹಳದಿಬಣ್ಣ ಬಳಿಯುವುದು ಕಡ್ಡಾಯ. ಮತ್ತೆ ಟಂಟಂಗಳಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸುವಂತಿಲ್ಲ. ಶಾಲಾ ವಾಹನಗಳ ವೇಗದ ಮಿತಿ ಗಂಟೆಗೆ 40 ಕಿ.ಮೀ ಮಾತ್ರ, ಜೊತೆಗೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಕಡ್ಡಾಯ..

ನಗರದಲ್ಲಿ ಸೋಮವಾರ ಸಂಜೆ ಬೊಲೆರೊ ವಾಹನ ಹಾಗೂ ಟಂಟಂ ನಡುವಿನ ಅಪಘಾತದಲ್ಲಿ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳು ಗಂಭೀರವಾಗಿ ಗಾಯಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ,
ಶಾಲೆಗೆ ತೆರಳುವ ವೇಳೆ ಮಕ್ಕಳ ಸುರಕ್ಷತೆಯ ಖಾತರಿಗೆ ಮುಂದಾಗಿದೆ. ಆ ನಿಟ್ಟಿನಲ್ಲಿ ಮೇಲಿನ ಷರತ್ತುಗಳನ್ನು ವಿಧಿಸಿದೆ.

ಇಲ್ಲಿಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸುದೀರ್ಘ ಸಭೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಎಸ್‌ಪಿ ವಂಶಿಕೃಷ್ಣ ಹಾಜರಿದ್ದರು.

ADVERTISEMENT

10 ದಿನಗಳ ಕಾಲಾವಕಾಶ:

ಮಕ್ಕಳ ಸುರಕ್ಷತೆಗೆ ರೂಪಿಸಿದ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರಲು ಶಾಲಾ ಆಡಳಿತ ಮಂಡಳಿಗೆ 10 ದಿನಗಳ ಕಾಲಾವಕಾಶ ನೀಡಿದ ಜಿಲ್ಲಾಡಳಿತ, ಪರಿಶೀಲನೆ ಹಾಗೂ ಮೇಲ್ವಿಚಾರಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ರಚಿಸಲು ಮುಂದಾಗಿದೆ.

ಕಠಿಣ ಕ್ರಮದ ಎಚ್ಚರಿಕೆ: ಟಂಟಂಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಹಾಕಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಎಸ್‌ಪಿ ವಂಶಿಕೃಷ್ಣ, ಈ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಿಕಾಸ್ ಸುರಳಕರ್ ಮಾತನಾಡಿ, ಶಾಲಾ ಆಡಳಿತ ಮಂಡಳಿಗಳು ಸರ್ಕಾರದ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲಾ ವಾಹನದಲ್ಲಿ ಇರುವ ಆಸನಗಳ ಸಾಮರ್ಥ್ಯದಷ್ಟೇ ಮಕ್ಕಳನ್ನು ಕೂರಿಸಬೇಕು. ವಾಹನ ವಿಮೆ ಮಾಡಿಸುವುದು ಕಡ್ಡಾಯ. ಚಾಲಕರೊಂದಿಗೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಸೂಚಿಸಿದರು.

ವಿವರ ಇಟ್ಟುಕೊಳ್ಳಲು ಸೂಚನೆ: ಶಾಲೆಗೆ ಕಾಲ್ನಡಿಗೆಯಲ್ಲಿ ಬರುವ ಮಕ್ಕಳ ಸಂಖ್ಯೆ, ಪಾಲಕರು ವಾಹನದಲ್ಲಿ ಕರೆತಂದು ಬಿಡುವವರ ಸಂಖ್ಯೆ, ಶಾಲಾ ವಾಹನದಲ್ಲಿ ಇಲ್ಲವೇ ಬೇರೆ ಬಾಡಿಗೆ ವಾಹನಗಳಲ್ಲಿ ಬರುವ ಮಕ್ಕಳ ವಿವರವನ್ನು ರಿಜಿಸ್ಟ್ರಾರ್‌ನಲ್ಲಿ ನಮೂದಿಸಲು ತಿಳಿಸಿದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಶಾಲಾ ವಾಹನಕ್ಕೆ ಎಲ್‌ಪಿಜಿ ಕಿಟ್ ಅಳವಡಿಸಿದ್ದಲ್ಲಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದಿರಬೇಕು ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣಾಧಿಕಾರಿಗಳು ಹಾಜರಿದ್ದರು.

ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಕಾರಿಹಳ್ಳದ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡು ಕೆರೂಡಿ ಆಸ್ಪತ್ರೆಗೆ ದಾಖಲಾಗಿದ್ದ ಲಯನ್ಸ್ ಶಾಲೆಯ ನಾಲ್ವರು ಮಕ್ಕಳ ಪೈಕಿ ಇಬ್ಬರು ಕೊಂಚ ಚೇತರಿಸಿಕೊಂಡಿದ್ದಾರೆ. ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

ಬಾಲಕಿ ಪ್ರೀತಿ ಗದ್ದನಕೇರಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆದರೆ ಅಮಿತ್ ಅಂಗಡಿ ಹಾಗೂ ಶ್ರವಣ್‌ಕುಮಾರ ಚೌಹಾಣ ಆರೋಗ್ಯದಲ್ಲಿ ಚೇತರಿಕೆ ಕಾಣಬೇಕಿದೆ. ಚಿಕಿತ್ಸೆ ನೀಡಲು ಹುಬ್ಬಳ್ಳಿಯಿಂದ ಡಾ.ಸುರೇಶ ದುಗ್ಹಾಣಿ ಅವರನ್ನು ಕರೆಸುವ ಪ್ರಯತ್ನ ನಡೆದಿತ್ತು.

ಅಪಘಾತದ ವೇಳೆ ಬಾಲಕ ಅಭಿಷೇಕ ಬಬಲಾದಿಯ ತುಂಡಾಗಿದ್ದ ಕೈ ಜೋಡಣೆಗೆ ತಜ್ಞ ವೈದ್ಯರ ಪ್ರಯತ್ನ ಕೈಗೂಡಲಿಲ್ಲ. ಬದಲಿಗೆ ರಕ್ತಸ್ರಾವ ನಿಯಂತ್ರಣಕ್ಕೆ ಬಂದಿತು. ಅಭಿಷೇಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾತ್ರಿಯೇ ಚಾಲಕನ ಬಂಧನ

ಬೊಲೆರೊ ಚಾಲಕ, ಮುಧೋಳ ನಿವಾಸಿ ವಿಠ್ಠಲ ಸದಾಶಿವ ಟೊಣಪೆ ಎಂಬಾತನನ್ನು ನಗರ ಠಾಣೆ ಪೊಲೀಸರು ಸೋಮವಾರ ರಾತ್ರಿಯೇ ಬಂಧಿಸಿದ್ದಾರೆ. ಅಪಘಾತದ ವೇಳೆ ಪಾನಮತ್ತನಾಗಿದ್ದ ವಿಠ್ಠಲ ಸ್ಥಳದಿಂದ ಪರಾರಿಯಾಗಿದ್ದನು.

ಪಾನಮತ್ತನಾಗಿರುವುದೇ ಅಪಘಾತಕ್ಕೆ ಕಾರಣವಾಗಿದ್ದರಿಂದ ಕೂಡಲೇ ಆತನನ್ನು ಬಂಧಿಸುವ ಸವಾಲು ಸ್ವೀಕರಿಸಿದ್ದ ಎಸ್‌ಪಿ ವಂಶಿಕೃಷ್ಣ, ಐದು ಠಾಣೆಗಳ ವ್ಯಾಪ್ತಿಯಲ್ಲಿ ನಾಕಾಬಂದಿ ನಡೆಸಿ, ಆತನ ಬಂಧನಕ್ಕೆ ವಿಶೇಷ ತಂಡವನ್ನೇ ರಚಿಸಿದ್ದರು. ಕೊನೆಗೂ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿ ನಂತರ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.