ಬಾದಾಮಿ: ಮಣ್ಣೆತ್ತಿನ ಅಮಾವಾಸ್ಯೆಯ ಅಂಗವಾಗಿ ಕೃಷಿಕರು ಮಣ್ಣಿನ ಎತ್ತುಗಳನ್ನು ಪೂಜಿಸಲು ಮಾರುಕಟ್ಟೆಯಲ್ಲಿ ಸೋಮವಾರ ಖರೀದಿಸಿದರು.
ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗಿ ಉಳುಮೆ ಮಾಡಿ ಹೊಲವನ್ನು ಬಿತ್ತಿದ ನಂತರ ಎತ್ತುಗಳಿಗೆ ವಿಶ್ರಾಂತಿ. ಮಣ್ಣೆತ್ತಿನ ಅಮಾವಾಸ್ಯೆ ದಿನ ಕೃಷಿಕರು ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ಅನೇಕ ದಶಕಗಳಿಂದ ಬಂದಿದೆ.
ಮನೆಯಲ್ಲಿ ಕೃಷಿಕರು ಸಿಹಿ ಹೋಳಿಗೆ, ಕರಿದ ಕಡಬು ಅಡುಗೆ ಮಾಡಿ ಎತ್ತುಗಳಿಗೆ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ನೈವೇದ್ಯ ಮಾಡಿದರು.
ಮೊದಲು ಕೃಷಿಕರು ಹೊಲದಿಂದ ಕಪ್ಪು ಮಣ್ಣನ್ನು ಮನೆಗೆ ತಂದು ಭಕ್ತಿಯಿಂದ ಮಣ್ಣಿನ ಎತ್ತುಗಳನ್ನು ತಾವೇ ತಮ್ಮ ಎತ್ತುಗಳಂತೆ ಮಾಡುತ್ತಿದ್ದರು.ಈಗ ಮಾರುಕಟ್ಟೆಯಲ್ಲಿ ಎತ್ತುಗಳು ದೊರೆಯುವುದರಿಂದ ಮನೆಯಲ್ಲಿ ರೈತ ಯಜಮಾನ, ಮಹಿಳೆಯರು ಮತ್ತು ಮಕ್ಕಳು ಎತ್ತುಗಳನ್ನು ಮಾಡುವುದು ಕಡಿಮೆಯಾಗಿದೆ. ಈಗ ತಯಾರಿಸಿದ ಎತ್ತುಗಳನ್ನೇ ಖರೀದಿಸುವರು.
ಗುಳೇದಗುಡ್ಡ ನಗರದ ಭಾರತಿ ಹೊಸಕೇರಿ, ಸಂಗಮ್ಮ ಮಸ್ಕಿ (ತೋಳಮಟ್ಟಿ) ಪ್ರತಿವರ್ಷ ಮಣ್ಣಿನ ಎತ್ತುಗಳ ಮಾರಾಟಕ್ಕೆ ಬರುವರು. `ಒಂದು ಜೋಡು ಎತ್ತನ್ನು ರೂ 20ರಿಂದ 30ರವರೆಗೆ ಮಾರಾಟ ಮಾಡುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.