ADVERTISEMENT

ಮತದಾನ ಜಾಗೃತಿ ಅಭಿಯಾನ 2ನೇ ಹಂತಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 8:03 IST
Last Updated 25 ಏಪ್ರಿಲ್ 2013, 8:03 IST

ಬಾಗಲಕೋಟೆ: ವಾರ್ತಾ ಇಲಾಖೆಯು ಸ್ವೀಪ್ ಅಡಿಯಲ್ಲಿ ಹಮ್ಮಿಕೊಂಡ ಮತದಾರರ ಜಾಗೃತಿ ಅಭಿಯಾನದ ಎರಡನೇ ಹಂತದ ಪ್ರಚಾರಾಂದೋಲನಕ್ಕೆ ಬುಧವಾರ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ ಚಾಲನೆ ನೀಡಿದರು.

ನವನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. `ಈಗಾಗಲೇ ಮೊದಲ ಹಂತದಲ್ಲಿ ಬಾದಾಮಿ, ಹುನಗುಂದ ಹಾಗೂ ಬಾಗಲಕೋಟೆ ತಾಲ್ಲೂಕಿನ ತಲಾ ಇಪ್ಪತ್ತು ಹಳ್ಳಿಗಳಂತೆ 60 ಹಳ್ಳಿಗಳಲ್ಲಿ ಬೀದಿನಾಟಕ, ಕರಪತ್ರ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು' ಎಂದರು.

`ಎರಡನೇ ಹಂತವಾಗಿ ಜಿಲ್ಲೆಯ ಬೀಳಗಿ, ಜಮಖಂಡಿ ತಾಲ್ಲೂಕಿನ ಆಯ್ದ ಹಳ್ಳಿಗಳಲ್ಲಿ ಮತದಾನದ ಮಹತ್ವ ಸಾರುವ ಬೀದಿನಾಟಕಗಳನ್ನು ಎರಡು ಪ್ರತ್ಯೇಕ ತಂಡಗಳಲ್ಲಿ ಸಂಚರಿಸಿ ಪ್ರದರ್ಶನ ನೀಡಲಿವೆ' ಎಂದರು.

`27ರಿಂದ ಮುಧೋಳ ತಾಲ್ಲೂಕಿನ ಆಯ್ದ 20 ಗ್ರಾಮಗಳಲ್ಲಿ ಇನ್ನೊಂದು ತಂಡವು ಬೀದಿನಾಟಕ ಪ್ರದರ್ಶನ ನೀಡಲಿದೆ' ಎಂದರು.
ಇದೇ ಸಂದರ್ಭದಲ್ಲಿ ಸಿ.ಇ.ಒ ಅವರು ಜಿಲ್ಲಾ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಕರ ಪತ್ರ ವಿತರಿಸುವ ಮೂಲಕ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಕೋರಿದರು. ಆಸ್ಪತ್ರೆಯ ಆವರಣದಲ್ಲಿ ನೆರೆದಿದ್ದ ನೂರಾರು ಸಾರ್ವಜನಿಕರಿಗೆ ಕರಪತ್ರ ನೀಡಿ ಕಡ್ಡಾಯವಾಗಿ ಮತ ನೀಡಲು ತಿಳಿಸಿದರು. 

ಕೆರೂರಿನ ಮಹಿಳಾ ಕಲಾ ತಂಡ, ಬಾದಾಮಿ ಹಾಗೂ ಗೋವಿನಕೊಪ್ಪ ಕಲಾ ತಂಡಗಳು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬೀದಿನಾಟಕ ಹಾಗೂ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಮತದಾನದ ಮಹತ್ವ, ಮತ ಯಂತ್ರದ ಬಳಕೆ, ವೃದ್ಧರು, ಆಸಕ್ತರು, ಅಂಗವಿಕಲರು ಮತದಾನ ಮಾಡಲು ಸಹಾಯಕರ ನೆರವು ಕುರಿತು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ನರಟ್ಟಿ, ಡಾ. ದೇಸಾಯಿ, ಡಾ. ಎಸ್.ಬಿ. ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ. ಎಚ್. ಇಲಾಳ, ಡಾ. ಪ್ರಕಾಶ ಖಾಡೆ, ಸಂಗಮೇಶ ಛಬ್ಬಿ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.