ADVERTISEMENT

ಮಧ್ಯಂತರ ಪರಿಹಾರಕ್ಕೆ ನೌಕರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 4:49 IST
Last Updated 26 ಅಕ್ಟೋಬರ್ 2017, 4:49 IST

ಜಮಖಂಡಿ: ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ವೇತನ ಶ್ರೇಣಿ ಜಾರಿಗೆ ಮುನ್ನ ಶೇ 30 ರಷ್ಟು ಮಧ್ಯಂತರ ಪರಿಹಾರವನ್ನು 2017 ರ ಏಪ್ರಿಲ್‌ 1 ರಿಂದಲೇ ಪೂರ್ವಾನ್ವಯ ಆಗುವಂತೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಮನವಿ ಸಲ್ಲಿಸಿದರು.

ಬುಧವಾರದ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ಜಮಾಯಿಸಿದ್ದ ರಾಜ್ಯ ಸರ್ಕಾರಿ ನೌಕರರು 6ನೇ ವೇತನ ಆಯೋಗ ಆದಷ್ಟು ಬೇಗ ತನ್ನ ವರದಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ನೌಕರರ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಯೋಗದ ವರದಿ ಸಲ್ಲಿಕೆವರೆಗೆ ದಾರಿ ಕಾಯದೆ ತಕ್ಷಣದಿಂದ ಮಧ್ಯಂತರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ. ಅಜ್ಜನ್ನವರ, ಉಮೇಶ ಜೋಶಿ, ಪ್ರಕಾಶ ದಾಸರ, ಉಮೇಶ ಸಾವಳಗಿ, ಮಹೇಶ ಬಾಗಲಕೋಟ, ಟಿ.ಎಸ್‌. ಉಗಾರ, ಕವಿತಾ ರಾಮದುರ್ಗ, ಎನ್‌.ಎಂ. ಮಿರ್ಜಿ ಮಾತನಾಡಿದರು. ಕೊನೆಯಲ್ಲಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.