ADVERTISEMENT

ಮರ, ಪಕ್ಷಿ ಪೋಷಕ ಚನ್ನಪ್ಪಗೌಡ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 11:52 IST
Last Updated 10 ಜೂನ್ 2018, 11:52 IST

ರಬಕವಿ ಬನಹಟ್ಟಿ: ದಶಕದ ಹಿಂದೆ ಇಲ್ಲಿನ ನ್ಯಾಯಾಲಯದ ಆವರಣ ನೋಡಿದವರು ಈಗ ನೋಡಿದರೆ ಖಂಡಿತ ಅಚ್ಚರಿಪಡುತ್ತಾರೆ. ಇದಕ್ಕೆ ಕಾರಣ ಹಿಂದೆ ಇದ್ದ ಖಾಲಿ ಜಾಗದಲ್ಲಿ ಹಚ್ಚು ಹಸಿರಿದೆ.  ಅರಣ್ಯದ ಮಧ್ಯದಲ್ಲಿ ತಿರುಗಾಡಿದ ಹೊಸ ಅನುಭವ ಉಂಟಾಗುತ್ತದೆ.

ಬನಹಟ್ಟಿ ನ್ಯಾಯಾಲಯ ನಗರದ ಬೆಟ್ಟ ಪ್ರದೇಶದಲ್ಲಿ ಸ್ಥಾಪನೆ ಆಯಿತು. 2003ರಲ್ಲಿ ಕಟ್ಟಡ ಆರಂಭಗೊಂಡಿತು. 2006ರಲ್ಲಿ ನೂತನ ಕಟ್ಟಡದಲ್ಲಿ ನ್ಯಾಯಾಲಯ ತನ್ನ ಕಾರ್ಯವನ್ನು ಆರಂಭಿಸಿತು. ಈಗ ನ್ಯಾಯಾಲಯದ ಸುತ್ತಲೂ ಸುಂದರ ಬೇಲಿಯನ್ನು ನಿರ್ಮಿಸಲಾಗಿದೆ. ನ್ಯಾಯಾಲಯದ ಆವರಣ ಇಷ್ಟೊಂದು ಹಚ್ಚ ಹಸಿರಿನಿಂದ ಕಾಣಲು ಕಾರಣ ನ್ಯಾಯಾಲಯದಲ್ಲಿ ಪ್ರೊಸೆಸ್‌ ಸರ್ವರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿವ ಚನ್ನಪ್ಪಗೌಡ ಪಾಟೀಲರು ಕಾರಣ.

2002ರಲ್ಲಿ ನ್ಯಾಯಾಂಗ ಇಲಾಖೆಗೆ ನೇಮಕಗೊಂಡ ಚನ್ನಪ್ಪಗೌಡ  ಜಮಖಂಡಿಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ನಂತರ ಅವರು 2005ರಲ್ಲಿ ಬನಹಟ್ಟಿ ನ್ಯಾಯಾಲಯಕ್ಕೆ ವರ್ಗಾವಣೆಯಾದರು. 2006ರಲ್ಲಿ ಬನಹಟ್ಟಿಯಲ್ಲಿ ನೂತನ ನ್ಯಾಯಾಲಯ ಆರಂಭವಾಗುತ್ತಿದ್ದಂತೆ ಪಾಟೀಲರು ನ್ಯಾಯಾಲಯದ ಆವರಣ ಸುತ್ತಲೂ ಸಸಿಗಳನ್ನು ಹಚ್ಚಲು ಆರಂಭಿಸಲು ಪ್ರಾರಂಭಿಸಿದರು. ವನಮಹೋತ್ಸವ ಮತ್ತು ಬೇರೆ ಬೇರೆ ಸಂದರ್ಭದಲ್ಲಿ ಗಣ್ಯರು ಹಚ್ಚಿದ ಗಿಡಗಳಿಗೆ ನೀರನ್ನು ಹಾಕುವ ಕಾಯಕವನ್ನು ಆರಂಭಿಸಿದರು.

ADVERTISEMENT

ನ್ಯಾಯಾಲಯದ ಕಾರ್ಯ ಮುಗಿಸುತ್ತಿದ್ದಂತೆ ಗಿಡಗಳಿಗೆ ನೀರು ಹಾಕುತ್ತಿದ್ದರು. ಸದ್ಯ ನ್ಯಾಯಾಲಯದ ಸುತ್ತ ಮುತ್ತ ಅಂದಾಜು 150 ಬೃಹತ್‌ ಮರಗಳು ಕಂಡು ಬರುತ್ತಿವೆ. ಈ ಎಲ್ಲ ಮರಗಳ ಹಿಂದೆ ಪಾಟೀಲರ ಪರಿಶ್ರಮವಿದೆ. ಅಷ್ಟೇ ಅಲ್ಲ ತಮ್ಮ ಸ್ವಂತ ಹಣದಿಂದ ಸಸಿಗಳನ್ನು ತಂದು ನ್ಯಾಯಾಲಯದ ಆವರಣದಲ್ಲಿ ನೆಟ್ಟಿದ್ದಾರೆ.  ಇದಲ್ಲದೇ ನ್ಯಾಯಲಯದ ಮುಂಭಾಗದಲ್ಲಿ ಬೇಲಿ ನಿರ್ಮಾಣ ಮಾಡಿದ್ದಾರೆ.

ಪ್ರೊಸೆಸ್‌ ಸರ್ವರ್‌ ಆಗಿ ಪದೋನ್ನತಿ ಹೊಂದಿದ್ದರೂ ಕೂಡಾ ನ್ಯಾಯಾಲಯ ಗಿಡ ಮರಗಳಿಗೆ ನೀರು ಹಾಕುವ ಕಾರ್ಯ ಮುಂದುವರೆಸಿದ್ದಾರೆ. ಬೇಸಿಗೆಯಲ್ಲಿ ಪಕ್ಷಿಗಳಿಗೆ ಅನುಕೂಲವಾಗಲು ಕೆಲ ಮರಗಳಲ್ಲಿ ಪಕ್ಷಿಗಳು ನೀರು ಕುಡಿಯುವುದರ ಸಲುವಾಗಿ ಅವರು ಕಾಳು ಮತ್ತು ನೀರಿನ ವ್ಯವಸ್ಥೆ ಕೂಡಾ ಮಾಡಿದ್ದಾರೆ.

ಪಾಟೀಲರಂತ ಒಬ್ಬ ಪರಿಸರ ಪ್ರೇಮಿ ಪ್ರತಿಯೊಂದು ಇಲಾಖೆಯಲ್ಲಿ ಇದ್ದರೆ ಈ ನಾಡು ಮತ್ತಷ್ಟು ಹಸಿರಾಗಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್‌.ಫಕೀರಪುರ ಹೇಳಿದರು.

‘ನ್ಯಾಯಾಲಯದ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ನೆರಳಿನಲ್ಲಿ ಕುಳಿತು ಕೊಳ್ಳುತ್ತಿದ್ದಾರೆ. ಮರಗಳಿಂದ ನ್ಯಾಯಾಲಯದ ಆವರಣಕ್ಕೆ ವಿಶೇಷ ಕಳೆ ಬಂದಂತಾಗಿದೆ’ ಎಂದು ವಕೀಲ ವಿಜಯ ಹೂಗಾರ ತಿಳಿಸಿದರು.

ವಿಶ್ವಜ ಕಾಡದೇವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.