ADVERTISEMENT

ಮಳೆರಾಜೇಂದ್ರ ಮಠದಲ್ಲಿ ಮಳೆಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 9:15 IST
Last Updated 18 ಮಾರ್ಚ್ 2011, 9:15 IST

ಬಾಗಲಕೋಟೆ: ಪ್ರಸಕ್ತ ವರ್ಷ ರೋಹಿಣಿ, ಮೃಗಶಿರಾ, ಮಗಿ ಮತ್ತು ಹುಬ್ಬಿ ಮಳೆಗಳು ಅತಿ ಹೆಚ್ಚು ಸುರಿಯಲಿವೆ ಎಂಬುದು ಮುರನಾಳ ಮಳೆರಾಜೇಂದ್ರ ಮಠದ ವಾಣಿಯಾಗಿದೆ.ಕೃಷಿಕರ ಮಠವೆಂದು ಖ್ಯಾತವಾಗಿರುವ ಸುಕ್ಷೇತ್ರ ಮುರನಾಳ ಮಳೆರಾಜೇಂದ್ರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಕಡುಬಿನ ಕಾಳಗ(ವರ್ಷದ ಮಳೆ, ಬೆಳೆ ಸೂಚನೆ)ದಲ್ಲಿ ಈ ಸೂಚನೆ ದೊರೆತಿದೆ.

ಈ ವರ್ಷದ ಮುಂಗಾರಿನಲ್ಲಿ ರೋಹಿಣಿ, ಮೃಗಶಿರಾ ಮಳೆಗಳು ಜಾಸ್ತಿಯಾದರೆ ಆರಿದ್ರಾ ಮಳೆ ಉತ್ತಮ; ಪುಷ್ಯ ಮಳೆಗಳು ಸಾಧಾರಣವಾಗಿ ಬೀಳಲಿವೆ.ಹಿಂಗಾರಿನಲ್ಲಿ ಮಗಿ ಮತ್ತು ಹುಬ್ಬಿ ಅತಿ ಹೆಚ್ಚು ಸುರಿದರೆ ಉತ್ತರಿ ಉತ್ತಮವಾಗಲಿದೆ. ಹಸ್ತಾ, ಚಿತ್ತಿ ಮಳೆ ಸಾಧಾರಣವಾಗಲಿವೆ ಎಂದು ಶ್ರೀಮಠದ ವಾಣಿಯಾಗಿದೆ.

ಪ್ರತಿವರ್ಷದಂತೆ ಮುರನಾಳ ಮಳೆರಾಜೇಂದ್ರ ಮಠದ ಜಾತ್ರೆಯು ವಿಜೃಂಭಣೆಯಿಂದ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗ(ಮಳೆ, ಬೆಳೆ ಸೂಚನೆ)ಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಕುತೂಹಲದಿಂದ ಕಾಯ್ದು ನಿಂತಿದ್ದರು.ಮಳೆ-ಬೆಳೆ ಕುರಿತಂತೆ ಮಠದ ವಾಣಿ ಕೇಳಿದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳನ್ನು ತಮ್ಮ ತಮ್ಮಲ್ಲಿಯೇ ಲೆಕ್ಕಹಾಕಿದರು.

ಕಡುಬಿನ ಕಾಳಗದ ವೈಶಿಷ್ಟ್ಯ
ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರ ಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆ ಯೊಂದಿಗೆ ಪಾಲ್ಗೊಂಡಿದ್ದರು.ನದಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆಯನ್ನು ತುಂಬುತ್ತಾರೆ.

ಹೀಗೆ ತುಂಬಲ್ಪಟ್ಟ ಪ್ರತಿ ಬಿಂದಿಯ ಮೇಲೆ ಎರಡೆರಡು ಮಳೆಗಳ ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ನದಿಯಿಂದ ಪುನಃ ಮೆರವಣಿಯಲ್ಲಿ ರಥೋತ್ಸವ ನಡೆಯುವ ಸ್ಥಳಕ್ಕೆ ಬರುತ್ತಾರೆ.ರಥೋತ್ಸವ ನಡೆಯುವ ಜಾಗದಲ್ಲಿ ಪಂಚ ಬಿಂದಿಗೆ ಪೂಜೆ ನಡೆಸಿದ ತರುವಾಯ ಮಳೆ-ಬೆಳೆ ಸೂಚನೆ ನೀಡಲಾಗುತ್ತದೆ.
ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ(ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರಬೀಳುತ್ತದೆ.

ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ ಹಾಗೂ ಯಾವುದು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ.ವಿಶಿಷ್ಟ ಪರಂಪರೆ ಹೊಂದಿರುವುದರಿಂದ ಮಳೆರಾಜೇಂದ್ರ ಮಠದ ಕಡುಬಿನ ಕಾಳಗಕ್ಕೆ ರೈತಸಮುದಾಯ ಕುತೂಹಲದಿಂದ ನೋಡುತ್ತದೆ.

ಮಂಗಳವಾರ ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶ ಮೇಘರಾಜ ಸ್ವಾಮಿ, ಮೌನೇಶ ಸ್ವಾಮಿಗಳು, ಗ್ರಾಮದ ಹಿರಿಯರಾದ ರಾಮಪ್ಪ ಗೊರವರ, ಹುಚ್ಚಪ್ಪ ಶಿರೂರ, ರಾಮಪ್ಪ ಗಣಿ, ಈರಪ್ಪ ದೊಡ್ಡಮನಿ, ಶಂಕ್ರಪ್ಪ ಪತ್ತಾರ, ಮಳಿಯಪ್ಪಗೌಡ ಪಾಟೀಲ, ಬಸಪ್ಪ ದೊಡ್ಡಮನಿ, ಸುಭಾಸ ಸೂಳಿಕೇರಿ, ಸಂಗಣ್ಣ ಗೂಗಿಹಾಳ, ಭೀಮಶಿ ಸೂಳಿಕೇರಿ, ಶೇಖಪ್ಪ ಓಬಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.