ADVERTISEMENT

‘ಮಹಾಂತ ಶ್ರೀಗಳ ಸ್ಮರಣೆಯೇ ಬೆಳಗು’

ಸ್ಮರಣೋತ್ಸವದಲ್ಲಿಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 9:56 IST
Last Updated 12 ಜೂನ್ 2018, 9:56 IST

ಇಳಕಲ್: 'ಮಹಾತ್ಮರನ್ನು ನೆನೆಯುವುದೇ ಬೆಳಗು. ಮರೆಯುವುದೇ ಅಸ್ತಮಾನ. ಮಹಾಂತ ಶ್ರೀಗಳು ಈ ದಿನಮಾನದ ಬಹು ದೊಡ್ಡ ಬೆಳಗು. ಅವರು ಪ್ರಾಚೀನ ಮೌಲ್ಯಗಳ ಕೊಂಡಿಯಾಗಿದ್ದರು' ಎಂದು ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ಸ್ಮರಿಸಿದರು.

ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ ಗದ್ದುಗೆಯಲ್ಲಿ ಸೋಮವಾರ ನಡೆದ ಡಾ. ಮಹಾಂತ ಶ್ರೀಗಳ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

‘ಬಸವ ಬೆಳಗು' ತ್ರೈಮಾಸಿಕ ಪತ್ರಿಕೆಯ ಮೂಲಕ ಶ್ರೀಗಳು ಬಸವತತ್ವ ಪ್ರಚಾರ ಹಾಗೂ ವೈಚಾರಿಕತೆಗೆ, ಮಹಾಂತ ಜೋಳಿಗೆಯ ಮೂಲಕ ವ್ಯಸನ ಮುಕ್ತ ಸಮಾಜಕ್ಕೆ ಹಂಬಲಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ, ಬುದ್ಧ, ತೆರೆಸಾ, ಯೇಸು ಮುಂತಾದವರು ಯಾವ ಕಾರ್ಯಕ್ಕೆ ಬಂದಿದ್ದರೋ ಅದೇ ಕಾರ್ಯಕ್ಕೆ ಮಹಾಂತಪ್ಪ ಬಂದಿದ್ದರು’ ಎಂದು ಹೇಳಿದರು.

ADVERTISEMENT

‘ಶ್ರೀಗಳು ಲಂಡನ್‌ನ ಪ್ರವಾಸ ಕೈಗೊಂಡಿದ್ದಾಗ ಇಂಗ್ಲಿಷ್ ಮಹಿಳೆಯೊಬ್ಬರು ಜೋಳಿಗೆಗೆ ಡಾಲರ್ ಹಾಕಲು ಮುಂದಾದರು. ಆಗ ಶ್ರೀಗಳು, ‘ಹಣ ಬೇಡ. ಚಟಗಳಿದ್ದರೇ ಈ ಜೋಳಿಗೆಗೆ ಹಾಕಿ ವ್ಯಸನ ಮುಕ್ತಳಾಗು ತಾಯಿ’ ಎಂದು ವಿನಂತಿಸಿದರು. ಆಗ ಆಕೆ, ‘ನೀವು ಯೇಸು, ನೀವು ಯೇಸು' ಎಂದು ಉದ್ಗರಿಸಿದ್ದಳು’ ಎಂದು ನೆನೆದರು.

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ‘ಮಹಾಂತರ ಗುರುಭಕ್ತಿ, ವಿನಯ ಹೋಲಿಕೆಗೂ ನಿಲುಕದ್ದು. ಹಲವು ದಶಕಗಳ ಕಾಲ ಈ ಸಮಾಜಕ್ಕೆ ಪವಿತ್ರ ಭಾವ ಕಟ್ಟಿಕೊಟ್ಟ ಮಹಾಂತ ಶ್ರೀಗಳ ಸ್ಮರಣೆ ಹಾಗೂ ಅವರ ತತ್ವಾದರ್ಶಗಳ ಆಚರಣೆ ನಿರಂತರವಾಗಿ ಮುಂದುವರೆಲಿ' ಎಂದು ಹೇಳಿದರು.

ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ, ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯರು, ಬೇಲಿಮಠದ ಶಿವರುದ್ರ ಸ್ವಾಮೀಜಿ, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಕೋಡಿಮಠದ ಶಿವಾನಂದ ಸ್ವಾಮೀಜಿ, ಕೂಡಲಸಂಗಮದ ಜಯ ಬಸವಮೃತ್ಯುಂಜಯ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ ಹಾಗೂ ಬೆಲ್ದಾಳ ಶರಣರು ನುಡಿನಮನ ಸಲ್ಲಿಸಿದರು.

ಮುಂಡರಗಿಯ ನಿಜಗುಣ ತೋಂಟದಾರ್ಯ ಪ್ರಭು ಸ್ವಾಮೀಜಿ, ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ, ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ, ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ, ಸೈಯ್ಯದ್ ಮುರ್ತುಜಾ ದರ್ಗಾದ ಸಜ್ಜಾದ ನಸೀನ್ ಆದ ಫೈಸಲ್ ಪಾಷಾ, ಮುದಗಲ್ ಮಹಾಂತ ಶ್ರೀಗಳು ಸೇರಿದಂತೆ, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಶಾಸಕ ದೊಡ್ಡನಗೌಡ ಪಾಟೀಲ, ಮುಖಂಡ ಕೆ. ಶರಣಪ್ಪ ಇದ್ದರು. ನಿವೃತ್ತ ಪ್ರಾಚಾರ್ಯ ಡಾ. ಶಂಭು ಬಳಿಗಾರ ಸ್ವಾಗತಿಸಿದರು. ಸಂಗಣ್ಣ ಗದ್ದಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ತೋಟದ ವಂದಿಸಿದರು.

‘ಬಸವತತ್ವಕ್ಕಾಗಿ ಮಾತು ಬಿಟ್ಟಿದ್ದರು’

‘ಮಹಾಂತ ಶ್ರೀಗಳಿಗೆ ಬಸವತತ್ವಕ್ಕಿಂತ ಮಿಗಿಲಾದುದು ಯಾವುದೂ ಇರಲಿಲ್ಲ. ನಮ್ಮ ಗುರುಗಳಾದ ಮೂರುಸಾವಿರಮಠದ ಗಂಗಾಧರ ಜಗದ್ಗುರುಗಳು ಹಾಗೂ ಮಹಾಂತಪ್ಪಗಳು ಬಾಲ್ಯ ಸ್ನೇಹಿತರು. ನಮ್ಮ ಗುರುಗಳು ಚಿತ್ತರಗಿ ಇಳಕಲ್ ಮಠಕ್ಕೆ, ಮಹಾಂತ ಶ್ರೀಗಳು ಸವದಿ ಮಠಕ್ಕೆ ಉತ್ತರಾಧಿಕಾರಿಯಾಗಿದ್ದರು. ಶಿವಯೋಗಮಂದಿರ, ಕಲ್ಕತ್ತಾ ಹಾಗೂ ಕಾಶಿಯಲ್ಲಿ ಒಟ್ಟಾಗಿಯೇ ಅಧ್ಯಯನ ಮಾಡಿದ್ದರು’ ಎಂದು ಹುಬ್ಬಳ್ಳಿಯ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

‘ನಮ್ಮ ಗುರುಗಳು ಇಳಕಲ್ ಮಠದ ಬಳಿಕ, ಮೂರುಸಾವಿರಮಠಕ್ಕೆ ಮಠಾಧಿಪತಿಯಾಗಿ ನೇಮಕಗೊಂಡರು. ಇಲ್ಲಿ ತೆರವಾದ ಸ್ಥಾನಕ್ಕೆ ಸವದಿಯ ಮಹಾಂತ ಶ್ರೀಗಳನ್ನು ಭಕ್ತರ ಮನವೊಲಿಸಿ, ನಮ್ಮ ಗುರುಗಳೇ ಕರೆ ತಂದರು. ವಿಚಿತ್ರ ಅಂದರೆ, ಗಾಢವಾಗಿದ್ದ ಸ್ನೇಹ ಸಡಿಲವಾಗುವ ಸಂದರ್ಭ ಬರುತ್ತದೆ. ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರಾಗಿದ್ದ ನಮ್ಮ ಗುರುಗಳು ಹಾಗೂ ಮಹಾಂತ ಶ್ರೀಗಳ ನಡುವೆ 35 ವರ್ಷಗಳ ಕಾಲ ಮಾತುಕತೆ ನಿಂತು ಹೋಗುತ್ತದೆ. ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಬರುತ್ತವೆ. ಇದಕ್ಕೆ ಇದ್ದ ಏಕೈಕ ಕಾರಣ ಮಹಾಂತ ಶ್ರೀಗಳ ಬಸವತತ್ವ ನಿಷ್ಠೆಯಾಗಿತ್ತು’ ಎಂದು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.