ADVERTISEMENT

ಮಾರಾಟ ಇಳಿಕೆ, ಹೊರಗಿನಿಂದ ಹರಿವು!

ಚುನಾವಣಾ ಆಯೋಗದ ನಿರ್ದೇಶನ; ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ

ವೆಂಕಟೇಶ್ ಜಿ.ಎಚ್
Published 22 ಮೇ 2018, 10:17 IST
Last Updated 22 ಮೇ 2018, 10:17 IST

ಬಾಗಲಕೋಟೆ: ಈ ಬಾರಿ ಚುನಾವಣೆ ವೇಳೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಪ್ರಮಾಣ ಭಾರಿ ಇಳಿಕೆಯಾಗಿರುವುದನ್ನು ಅಬಕಾರಿ ಇಲಾಖೆ ಅಂಕಿ–ಅಂಶಗಳು ಸಾರಿ ಹೇಳುತ್ತಿವೆ. ಆದರೆ, ಹೊರಗಿನಿಂದ ಮದ್ಯದ ಹರಿವು ಹೆಚ್ಚಳಗೊಂಡ ಚಿತ್ರಣವನ್ನು ಅಧಿಕಾರಿಗಳು ವಶಪಡಿಸಿಕೊಂಡು ಅಕ್ರಮ ಮದ್ಯದ ಪ್ರಮಾಣವೇ ನೀಡುತ್ತಿದೆ.

‘ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಇಲಾಖೆಯಿಂದ ತುಸು ಹೆಚ್ಚೇ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಅನಧಿಕೃತ ವಹಿವಾಟು ಹಾಗೂ ಅಕ್ರಮ ಸಂಗ್ರಹ ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಹಾಗಾಗಿ ಮದ್ಯ ಮಾರಾಟ ಪ್ರಮಾಣ ಇಳಿಕೆಯಾಗಿದೆ’ ಎಂದು ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತ ಬಿ.ಆರ್.ಹಿರೇಮಠ ಹೇಳುತ್ತಾರೆ.

ಮಾರಾಟದಲ್ಲಿ ಇಳಿಕೆ: ಅಬಕಾರಿ ಇಲಾಖೆ ಮಾಹಿತಿಯಂತೆ ಕಳೆದ ವರ್ಷ ಏಪ್ರಿಲ್ 1ರಿಂದ ಮೇ 15ರವರೆಗೆ ಜಿಲ್ಲೆಯಲ್ಲಿ 1,20,942 ಬಾಕ್ಸ್ ಮದ್ಯ ಮಾರಾಟವಾಗಿದೆ. ಆದರೆ ಚುನಾವಣೆ ಅವಧಿಯಾದರೂ ಈ ಬಾರಿ ಇದೇ ಅವಧಿಯಲ್ಲಿ 1,09,431 ಬಾಕ್ಸ್ ಮದ್ಯ ಬಿಕರಿಗೊಂಡಿದೆ. ಹಿಂದಿನ ವರ್ಷಕ್ಕಿಂತ 11,511 ಬಾಕ್ಸ್ ಮಾರಾಟ ಪ್ರಮಾಣ ಇಳಿಕೆಯಾಗಿದೆ.

ADVERTISEMENT

ಅಲ್ಪ ಏರಿಕೆ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೇ 1ರಿಂದ 15ರವರೆಗೆ 9 ಸಾವಿರ ಬಾಕ್ಸ್‌ನಷ್ಟು ಮಾರಾಟ ಹೆಚ್ಚಳಗೊಂಡಿದೆ. ವಿಶೇಷವೆಂದರೆ ಈ ಅವಧಿಯಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್ ಕೂಡ ಆಗಿತ್ತು!

ವಿಶೇಷ ನಿಗಾ: ‘ಹಿಂದಿನ ವರ್ಷ ಆಯಾ ತಿಂಗಳಲ್ಲಿ ಮಾರಾಟವಾಗಿದ್ದ ಪ್ರಮಾಣದ ಶೇ 30ರಷ್ಟು ಮಾತ್ರ ಈ ಬಾರಿ ಹೆಚ್ಚಿಗೆ ಮಾರಾಟಕ್ಕೆ ಚುನಾವಣಾ ಆಯೋಗ ಅವಕಾಶ ನೀಡಿತ್ತು. ಆದರೆ ನಾವು ಶೇ 5ರಿಂದ 10ರಷ್ಟು ಮಾತ್ರ ಹೆಚ್ಚು ಪೂರೈಕೆ ಮಾಡಿದ್ದೆವು. ಮಾರಾಟ ಪ್ರಮಾಣ ಇಳಿಕೆಯಾಗಲು ಅದೇ ಕಾರಣ’ ಎಂದು ಹಿರೇಮಠ ಹೇಳುತ್ತಾರೆ.

ಜಿಲ್ಲಾಡಳಿತದಿಂದಲೂ ಬಿಗಿ ಕ್ರಮ: ಜೊತೆಗೆ ಮದ್ಯ ಮಾರಾಟ ಪ್ರಮಾಣದಲ್ಲಿ ಇಳಿಕೆಯಾಗಲು ಜಿಲ್ಲಾಡಳಿತದ ಬಿಗಿ ಕ್ರಮವೂ ಕಾರಣ ಎಂದು ಅಬಕಾರಿ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಏಪ್ರಿಲ್ 20ರಿಂದ ಮೇ 16ರವರೆಗೆ ಜಿಲ್ಲೆಯಲ್ಲಿ 27 ವೈನ್‌ಶಾಪ್‌ಗಳಿಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಬೀಗ ಹಾಕಿಸಿದ್ದರು. ಅದೂ ಕೂಡ ಮದ್ಯ ಮಾರಾಟ ಇಳಿಕೆಯಾಗಲು ಕಾರಣವಾಯಿತು’ ಎನ್ನುತ್ತಾರೆ.

ಭರ್ಜರಿ ಮುಟ್ಟುಗೋಲು: ಈ ಬಾರಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಒಟ್ಟು ₹ 51.41 ಲಕ್ಷ ಮೌಲ್ಯದ 17,670 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 4,128 ಲೀಟರ್ ಸ್ಥಳೀಯ ಮದ್ಯ, 1391 ಲೀಟರ್ ಗೋವಾ ಮದ್ಯ, 1,610 ಲೀಟರ್ ಬಿಯರ್ ಹಾಗೂ 541 ಲೀಟರ್ ಕಳ್ಳಬಟ್ಟಿ ಸೇರಿದೆ. ಬಾಗಲಕೋಟೆ ತಾಲ್ಲೂಕು ಸೀಮಿಕೇರಿ ಪುನರ್ವಸತಿ ಕೇಂದ್ರದಲ್ಲಿ ಸಂಗ್ರಹಿಸಿ ಇಟ್ಟಿದ್ದ 400 ಲೀಟರ್ ಬಿಯರ್ ಹಾಗೂ ಕೂಡಲಸಂಗಮ ಬಳಿಯ ಬಿಸಿಲದಿನ್ನಿ ಬಳಿ ಮನೆಯೊಂದರಲ್ಲಿ 135 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 74 ಜನರ ವಿರುದ್ಧ ದೂರು ದಾಖ ಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

ಗೋವಾ ಮದ್ಯಕ್ಕೆ ಮೊರೆ

‘ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಮದ್ಯದ ದರ ಅತಿ ಹೆಚ್ಚು ಇದೆ. ರಾಜ್ಯದಲ್ಲಿ ಸಿಗುವ ವಿವಿಧ ಬ್ರ್ಯಾಂಡ್‌ಗಳ ಮದ್ಯ ಅರ್ಧಕ್ಕೂ ಕಡಿಮೆ ಬೆಲೆಗೆ ಗೋವಾದಲ್ಲಿ ಸಿಗುತ್ತದೆ. ಬೇಡಿಕೆಯಷ್ಟು ಪ್ರಮಾಣದ ಮದ್ಯವನ್ನು ಅವರೇ ನಿಗದಿತ ಸ್ಥಳಕ್ಕೆ ತಂದುಕೊಡುತ್ತಾರೆ. ಖರ್ಚು ಉಳಿತಾಯವಾಗುತ್ತದೆ. ಹಾಗಾಗಿ ಈ ಬಾರಿ ಅಭ್ಯರ್ಥಿಗಳಲ್ಲಿ ಕೆಲವರು ಗೋವಾ ಮದ್ಯಕ್ಕೆ ಮೊರೆ ಹೋದರು. ಇನ್ನೂ ಕೆಲವರು ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನವೇ ಮದ್ಯ ಖರೀದಿಸಿ ಇಟ್ಟುಕೊಂಡಿದ್ದರು. ಹಾಗಾಗಿ ಸ್ಥಳೀಯ ಮದ್ಯದ ಮಾರಾಟದಲ್ಲಿ ಇಳಿಕೆಯಾಗಿದೆಯೇ ಹೊರತು ಚುನಾವಣೆ ವೇಳೆಯ ಮದ್ಯದ ಹರಿವು ಎಂದಿನಂತೆಯೇ ಇತ್ತು’ ಎಂದು ರಾಷ್ಟ್ರೀಯ ಪಕ್ಷವೊಂದರ ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಖಂಡರೊಬ್ಬರು ಹೇಳುತ್ತಾರೆ.

**
ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಬಿಗಿ ಕ್ರಮ ಕೈಗೊಂಡಿದೆ. ಯಾರೊಬ್ಬರೂ ಕುಡಿದು ಬಂದು ಮತ ಹಾಕದಂತೆ ನೋಡಿಕೊಂಡಿದ್ದೇವೆ
– ಬಿ.ಆರ್.ಹಿರೇಮಠ, ಅಬಕಾರಿ ಇಲಾಖೆ ಉಪ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.