ADVERTISEMENT

ಮುಂಗಾರಿಗೆ ಮೊದಲ ಮಳೆ ಮುನ್ನುಡಿ

ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲಿನ ಆರ್ಭಟ: ಬಿಸಿಲ ಬೇಗೆ ತಣಿಸಿದ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 8:10 IST
Last Updated 12 ಮೇ 2018, 8:10 IST
ಬಾಗಲಕೋಟೆಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯ ನಡುವೆ ಹೊರಟ ಕಾರು
ಬಾಗಲಕೋಟೆಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯ ನಡುವೆ ಹೊರಟ ಕಾರು   

ಬಾಗಲಕೋಟೆ: ಬಿಸಿಲ ಬೇಗೆ ಹಾಗೂ ಚುನಾವಣೆಯ ಕಾವು ಸಮ್ಮಿಳಿತಗೊಂಡು ಅಸಹನೀಯ ಧಗೆಯಿಂದ ಕಂಗಟ್ಟಿದ್ದ ನಗರದ ಜನತೆಗೆ ಶುಕ್ರವಾರ ಸಂಜೆ ಒಂದು ತಾಸು ಸುರಿದ ಭರ್ಜರಿ ಮಳೆ ತಂಪು ತಂದಿತು. ಮಳೆಯ ಹನಿ ಇಳೆಯ ಸ್ಪರ್ಶಿಸುತ್ತಿದ್ದಂತೆಯೇ ಮಣ್ಣ ಕಂಪು ಎಲ್ಲೆಡೆ ಪಸರಿಸಿ ವಾತಾವರಣಕ್ಕೆ ಜೀವ ತಂದಿತು.

ಗುಡುಗು–ಮಿಂಚು, ಸಿಡಿಲಿನ ಜುಗಲ್‌ಬಂದಿಯ ನಡುವೆ ಮುಂಗಾರಿಗೆ ಮುನ್ನುಡಿ ಬರೆದ ಮಳೆಗೆ ಆರ್ಭಟಿಸಿದ ಜೋರು ಗಾಳಿ ಸಾಥ್ ನೀಡಿತು. ಬಾಗಲಕೋಟೆ ನಗರವಲ್ಲದೇ ತಾಲ್ಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿನ ಬಿತ್ತನೆಗೆ ಗಳೆ ಹೊಡೆಯಲು ನೆಲ ಹದಗೊಂಡಿತು.

ಮಳೆ, ಗಾಳಿಯ ಹೊಡೆತಕ್ಕೆ ನವನಗರದ ಹಲವು ಸೆಕ್ಟರ್‌ಗಳಲ್ಲಿ ಮರದ ಟೊಂಗೆಗಳು ಮುರಿದುಬಿದ್ದವು. ಕೆಲವೆಡೆ ವಿದ್ಯುತ್ ತಂತಿ ಹರಿದುಬಿದ್ದವು. ನವನಗರ ಬಸ್ ನಿಲ್ದಾಣದ ಎದುರು ಬೃಹತ್ ಮರ ಉರುಳಿಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮರ ತೆರವುಗೊಳಿಸುವ ನಿಟ್ಟಿನಲ್ಲಿ ಸಂಚಾರದ ಪಥವನ್ನು ಬದಲಾಯಿಸಲಾಯಿತು.

ADVERTISEMENT

ಬಿರು ಮಳೆಯ ಪರಿಣಾಮ ಮನೆ, ಕಚೇರಿಗಳ ಕಟ್ಟಡಗಳ ಒಳಗೆ ನೀರು ನುಗ್ಗಿತು. ಸಿಡಿಲ ಆರ್ಭಟಕ್ಕೆ ಜನ ಬೆಚ್ಚಿಬಿದ್ದರು. ನಗರದ ರಸ್ತೆ, ಚರಂಡಿಗಳು ತುಂಬಿ ಹರಿದವು. ವಾಂಬೆ ಕಾಲೊನಿ, ಹಳೆ ಬಾಗಲಕೋಟೆಯಲ್ಲಿ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆಗೀಡಾದರು. ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ನವನಗರದ ಸಾಯಿ ಸೂಪರ್ ಮಾರ್ಕೆಟ್ ಬಳಿ ಗಾಳಿಯಿಂದ ವಿದ್ಯುತ್ ತಂತಿ ಮರಕ್ಕೆ ಸ್ಪರ್ಶಿಸಿ ಭಾರಿ ಶಬ್ದ ಹಾಗೂ ಬೆಂಕಿಯ ಕಿಡಿ ಉಂಟಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

ಮತಗಟ್ಟೆ ಸಿಬ್ಬಂದಿಗೆ ತೊಂದರೆ: ಮಳೆ–ಗಾಳಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಮತಗಟ್ಟೆ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸಿದರು. ಮೊಬೈಲ್‌ ಫೋನ್‌ನ ಬ್ಯಾಟರಿಯ ಬೆಳಕು ಹಾಗೂ ಮೇಣದ ಬತ್ತಿ ಹಚ್ಚಿಕೊಂಡು ಬೆಳಕು ಕಂಡುಕೊಂಡರು. ಚುನಾವಣಾ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ಜಯಾ ಹಾಗೂ ತಹಶೀಲ್ದಾರ್ ವಿನಯ ಕಲಕರ್ಣಿ ಮತಗಟ್ಟೆಗಳಿಗೆ ತೆರಳಿ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದ್ದಲ್ಲದೇ ನೆರವು ನೀಡಿದರು.

ಜಮಖಂಡಿ: ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯ ಮುನ್ನಾ ದಿನವಾಶದ ಶುಕ್ರವಾರ ನಗರದಲ್ಲಿ ಗುಡುಗು–ಮಿಂಚಿನಿಂದ ಕೂಡಿದ ಅಬ್ಬರದ ಮಳೆ ಸುರಿದು ಇಡೀ ವಾತಾವರಣವನ್ನು ತಂಪಾಗಿಸಿತು.

ಬೆಳಿಗ್ಗೆಯಿಂದಲೇ ಚುರುಗುಡುವ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆ ಸಂಜೆ ಸುರಿದ ಮಳೆಯಿಂದ ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳರಾಗಿದ್ದರು. ಸಂಜೆ 5 ಗಂಟೆಗೆ ಆರಂಭವಾದ ಮಳೆ ಅರ್ಧ ಗಂಟೆಯವರೆಗೆ ಸುರಿಯಿತು.

ಚುನಾವಣೆಯ ಮತದಾನದ ಮುನ್ನಾದಿನ ಸೇರಿದಂತೆ ಮತದಾನದ ದಿನದಂದು ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಸತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.