ADVERTISEMENT

ಮೆರವಣಿಗೆಗೆ ತಡೆ: ಕಾರ್ಯಕರ್ತರ ಪ್ರತಿಭಟನೆ

ರಬಕವಿ- ಬನಹಟ್ಟಿಯಲ್ಲಿ ಜೆಡಿಎಸ್, ಕಾಂಗ್ರೆಸ್‌ ಮುಖಂಡರ ವಿಜಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 6:04 IST
Last Updated 25 ಮೇ 2018, 6:04 IST
ರಬಕವಿ- ಬನಹಟ್ಟಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ರಬಕವಿ- ಬನಹಟ್ಟಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ರಬಕವಿ–ಬನಹಟ್ಟಿ: ರಬಕವಿ- ಬನಹಟ್ಟಿಯಲ್ಲಿ ವಿಜಯೋತ್ಸವ ಆಚರಣೆಗೆ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರನ್ನು ತಡೆದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಬ್ಲಾಕ್ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಶಂಕರ ಸೋರಗಾಂವಿ ಮಾತನಾಡಿ, ‘ವಿಜಯೋತ್ಸವದಲ್ಲಿ ಧ್ವನಿ ವರ್ಧಕ ಹಾಗೂ ಟ್ರ್ಯಾಕ್ಟರ್‌ ಮಾಲೀಕರ ಮೇಲೆ ಏಕೆ ನೋಟಿಸ್ ಜಾರಿ ಮಾಡಿರುವುದು ಖಂಡನೀಯ’ ಎಂದು ಪ್ರಶ್ನಿಸಿದರು. ಹಿರಿಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆಯನ್ನು ಕಾರ್ಯಕರ್ತರು ಹಿಂಪಡೆಯಲಿಲ್ಲ. ಸಿಪಿಐ ಬಿ.ಎಸ್.ಮಂಟೂರ ಸ್ಥಳಕ್ಕೆ ಬಂದು ಸಮಾಧಾನ ಪಡಿಸಲು ಯತ್ನಿಸಿದರು. ಪ್ರಮುಖರಾದ ಸಂಗಪ್ಪ ಕುಂದಗೋಳ, ರವಿ ಬಾಡಗಿ, ಚಿದಾನಂದ ಮಟ್ಟಿಕಲ್ಲಿ, ಓಂಪ್ರಕಾಶ ಮನಗೂಳಿ, ಮೊಹ್ಮದ್ ಝಾರೆ, ಕುಮಾರ ಬಿಳ್ಳೂರ, ಸಿದ್ದು ಮುಶೆಪ್ಪ ಗೋಳ, ಮಹಾಂತೇಶ ಹೂಗಾರ, ಪುರುಷೋತ್ತಮ ಚಿಂಡಕ  ಇದ್ದರು.

ಮೈತ್ರಿ ಸರ್ಕಾರಕ್ಕೆ ಆಕ್ರೋಶ

ADVERTISEMENT

ರಬಕವಿ- ಬನಹಟ್ಟಿ: ‘ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮೈತ್ರಿ ಜನವಿರೋಧಿಯಾಗಿದೆ’ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.

ಬುಧವಾರ ನಗರದ ಈಶ್ವರ ಲಿಂಗ ಮೈದಾನದಲ್ಲಿ ಜನಮತ ವಿರೋಧಿ ಕರಾಳ ದಿನಾಚರಣೆಯಲ್ಲಿ ಮಾತನಾಡಿದರು.
‘ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿದ ಕಾಂಗ್ರೆಸ್‌ ಮತ್ತು ಜೆಡಿಎಸ್ ಪಕ್ಷ ನೈತಿಕತೆಯನ್ನು ಕಳೆದುಕೊಂಡಿವೆ’ ಎಂದು ಹೇಳಿದರು.

‘ಎಲ್ಲ ಅಧಿಕಾರವನ್ನೂ ಕಡಿಮೆ ಕ್ಷೇತ್ರದಲ್ಲಿ ಜಯಿಸಿದ ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ನೀಡಿ ಶರಣಾಗತಿಯಾಗಿರುವ ಕಾಂಗ್ರೆಸ್ ಜೈಲುವಾಸದ ಭಯದಿಂದ ಬೆಂಬಲ ಸೂಚಿಸಿದೆ’ ಎಂದು ಸವದಿ ತಿಳಿಸಿದರು.

‘ಎಚ್.ಡಿ.ಕುಮಾರಸ್ವಾಮಿ ಪ್ರಣಾಳಿಕೆ ಯಂತೆ ಆಡಳಿತಕ್ಕೆ ಬಂದ 24 ಗಂಟೆಯೊಳಗೆ ರೈತರ ಹಾಗೂ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದರು. ಆದರೆ ಈಗ ಹಿಂದೆ ಸರಿದಿರುವುದು ಅಕ್ಷಮ್ಯ’ ಎಂದರು. ಪ್ರಮುಖರಾದ ಸುರೇಶ ಚಿಂಡಕ, ಸಿದ್ದನಗೌಡ ಪಾಟೀಲ, ರಾಜು ಅಂಬಲಿ, ಬಸವರಾಜ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಯಾದವಾಡ, ಸಿರೇಶ ಅಕ್ಕಿವಾಟ, ರಾವಳ, ಈರಣ್ಣ ಚಿಂಚಖಂಡಿ, ಶಿವಾನಂದ ಸವದಿ ಇದ್ದರು.

ಕರಾಳ ದಿನಾಚರಣೆ

ಜಮಖಂಡಿ: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭವನ್ನು ಬಿಜೆಪಿ ನಾಯಕರು ಬಹಿಷ್ಕರಿಸಿ ರಾಜ್ಯದಾದ್ಯಂತ ಕರಾಳ ದಿನವನ್ನು ಆಚರಿಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ತಿಳಿಸಿದ್ದಾರೆ.

ಬಿಜೆಪಿ ನಾಯಕರು ಆಚರಿಸಿದ ಕರಾಳ ದಿನಾಚರಣೆಯನ್ನು ಯಾರೂ ಮೆಚ್ಚುವಂತಹದ್ದಲ್ಲ. ಈ ಹಿಂದೆ ಯಾವಾಗಲೂ ಈ ರೀತಿ ಆಗಿಲ್ಲ. ಒಂದು ಪಕ್ಷದವರು ಪ್ರಮಾಣ ವಚನ ಸ್ವೀಕರಿಸುವಾಗ ಇತರ ಪಕ್ಷದವರು ಭಾಗವಹಿಸುವುದು ನಡೆದು ಬಂದ ಪರಂಪರೆಯಾಗಿದೆ. ಮುಂಬರುವ ದಿನಗಳಲ್ಲಿ ಬೇರೆ ಪಕ್ಷದವರು ಬಿಜೆಪಿ ನಡೆಯನ್ನು ಅನುಸರಿಸುವ ಅಪಾಯವಿದೆ ಎಂದಿದ್ದಾರೆ.

ಕರಾಳ ದಿನಾಚರಣೆ ಆಚರಿಸಲು ಇನ್ನೂ ಅನೇಕ ಸಂದರ್ಭಗಳು ಇರುತ್ತವೆ. ಅದನ್ನು ಬಿಟ್ಟು ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಹಿಷ್ಕರಿಸಿರುವುದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.