ADVERTISEMENT

ಮೊಮ್ಮಗನೊಂದಿಗೆ ಆಡುತ್ತಲೇ ಕಾರ್ಯತಂತ್ರ!

ಚುನಾವಣೆ: ಐದು ಗಂಟೆಗೆ ದೊಡ್ಡನಗೌಡ ಪಾಟೀಲರ ದಿನಚರಿ ಆರಂಭ

​ಪ್ರಜಾವಾಣಿ ವಾರ್ತೆ
Published 4 ಮೇ 2018, 5:57 IST
Last Updated 4 ಮೇ 2018, 5:57 IST
ಹುನಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಬಿಸನಾಳಕೊಪ್ಪದಲ್ಲಿ ತಗಡಿನ ಶೆಡ್‌ನಲ್ಲಿ ವಾಸವಿರುವವರ ಸಮಸ್ಯೆ ಆಲಿಸಿದರು
ಹುನಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಬಿಸನಾಳಕೊಪ್ಪದಲ್ಲಿ ತಗಡಿನ ಶೆಡ್‌ನಲ್ಲಿ ವಾಸವಿರುವವರ ಸಮಸ್ಯೆ ಆಲಿಸಿದರು   

ಇಳಕಲ್: ಚುನಾವಣೆಯ ಕಾವು ಏರುತ್ತಿದ್ದಂತೆ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮತದಾರರ ಮನೆಗೆ ಎಡತಾಕುತ್ತಿದ್ದಾರೆ. ಗುರುವಾರ ಹುನಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲರ ಮತಯಾಚನೆ ವೈಖರಿಗೆ ‘ಪ್ರಜಾವಾಣಿ ಸಾಕ್ಷಿಯಾಯಿತು.

ಬೆಳಿಗ್ಗೆ 5 ಗಂಟೆಗೆ ಎದ್ದ ಗೌಡರು, ನಿತ್ಯ–ಕರ್ಮ ಮುಗಿಸಿ 6 ರಿಂದ 8ಗಂಟೆಯವರೆಗೆ ಪಕ್ಷ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರನ್ನು ಕರೆಸಿ ಚರ್ಚಿಸಿದರು. ಪ್ರಚಾರಕ್ಕೆ ತೆರಳುವ ಗ್ರಾಮಗಳ ಪ್ರಮುಖರಿಗೆ ಮಾಹಿತಿ ನೀಡಿ, ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು. ಈ ನಡುವೆ ತೊಡೆ ಏರಿದ ಮೊಮ್ಮಗನೊಂದಿಗೆ ಆಡುತ್ತಲೇ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾದರು. 9 ಗಂಟೆಗೆ ಬೆನಕನಡೋಣಿ, ದಾಸಬಾಳ ಹಾಗೂ ಕೆಸರಪೆಂಟಿ ಗ್ರಾಮದಿಂದ ಬಂದಿದ್ದ ಅನೇಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬೆಳಿಗ್ಗೆ 9.30ಕ್ಕೆ ಮತಗಟ್ಟೆ ಮಟ್ಟದ ಮಾಹಿತಿ ನೀಡಲು ಬಂದಿದ್ದ ಬೆಂಬಲಿಗರೊಂದಿಗೆ ಕುಳಿತು ಉಪಾಹಾರ ಸ್ವೀಕರಿಸಿದರು. ಅವರ ಮಾತು ಆಲಿಸಿದರು.

ADVERTISEMENT

ನಂತರ 10 ನಿಮಿಷ ಮುಖಂಡರೊಂದಿಗೆ ಗೌಪ್ಯ ಸಭೆ ನಡೆಸಿ, 10 ಗಂಟೆಗೆ ಪ್ರಚಾರಕ್ಕೆ ತೆರಳಿದರು. ಮೊದಲು ಧನ್ನೂರು ತಲುಪಿ ಅಲ್ಲಿ ಕಾಯುತ್ತಿದ್ದ ಕಾರ್ಯಕರ್ತರೊಂದಿಗೆ ಧನೇಶ್ವರ ಹಾಗೂ ಗ್ರಾಮ ದೇವತೆ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ಅಲ್ಲಿಯೇ ಬೇವಿನಕಟ್ಟೆಯ ಮೇಲೆ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದರು. ಅಪಘಾತದಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ನಂತರ ಪ್ರಮುಖರೊಬ್ಬರ ಮನೆಯಲ್ಲಿ ಊಟ ಮಾಡಿದರು.

ಇಲ್ಲಿಂದ ಕೂಗಳತೆ ದೂರದ ಎಮ್ಮೆಟ್ಟಿ, ಅಡಿಹಾಳ ಹಾಗೂ ಕಮದತ್ತದಲ್ಲಿ ಗುಡಿಯಲ್ಲಿ ಪೂಜೆ ಸಲ್ಲಿಸಿ ಮತಯಾಚಿಸಿದರು. ಇದ್ದಲಗಿ, ಬಿಸನಾಳ, ಬಿಸನಾಳಕೊಪ್ಪ ಪ್ಲಾಟ್‌ನಲ್ಲಿ ಮತಯಾಚಿಸಲು ಹೋದ ವೇಳೆ ಅಲ್ಲಿನ ಹೆಣ್ಣು ಮಕ್ಕಳು ತಗಡಿನ ತಾತ್ಕಾಲಿಕ ಶೆಡ್‌ಗಳಲ್ಲಿ ಅನುಭವಿಸುತ್ತಿರುವ ಯಾತನೆಯ ದರ್ಶನ ಪಡೆದರು. ಹಿರೇಮಳಗಾವಿ, ಚಿಕ್ಕಮಳಗಾವಿ ಹಾಗೂ ಗಂಜಿಹಾಳದಲ್ಲಿ ಪಾದಯಾತ್ರೆ ನಡೆಸಿ, ಸಾರ್ವಜನಿಕ ಸಭೆ ನಡೆಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ವಿರೇಶ ಉಂಡೋಡಿ, ಡಾ.ಮಹಾಂತೇಶ ಕಡಪಟ್ಟಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಯ್ಯ ಮೂಗನೂರಮಠ, ಸಂಗಣ್ಣ ಕಡಪಟ್ಟಿ ಗೌಡರ ಜತೆಗಿದ್ದರು.

ಗೌಡರ ಪತ್ನಿ, ಪುತ್ರ ಸಾಥ್

ಪತ್ನಿ ದೇವಮ್ಮ ಹಾಗೂ ಮಗ ರಾಜು ಪಾಟೀಲ ಗೌಡರ ಪರ ಬೆವರು ಹರಿಸುತ್ತಿದ್ದಾರೆ. ಕೂಡಲಸಂಗಮ ಭಾಗದ ಹಳ್ಳಿಗಳಲ್ಲಿ ಗುರುವಾರ ದೇವಮ್ಮ ಮನೆ ಮನೆಗೆ ತೆರಳಿ ಮತಯಾಚಿಸಿದರು. ರಾಜುಗೌಡ ಇಳಕಲ್‌ ನಗರದಲ್ಲಿ ಯುವ ಪಡೆಯೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.

ಬಸವರಾಜ ನಾಡಗೌಡರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.