ADVERTISEMENT

ಮೊರಾರ್ಜಿ ವಸತಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 8:38 IST
Last Updated 6 ಡಿಸೆಂಬರ್ 2012, 8:38 IST

ಬಾಗಲಕೋಟೆ: ನವನಗರದ 54ನೇ ಸೆಕ್ಟರ್‌ನಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ (ವಿಜ್ಞಾನ) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿಯಾಗದಿರುವುದರಿಂದ ಪಾಠ-ಪ್ರವಚನಕ್ಕೆ ತೊಂದರೆಯಾಗಿದ್ದು, ತಕ್ಷಣ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾಲೇಜು ಆರಂಭವಾಗಿ ಮೂರು ವರ್ಷವಾದರೂ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳದೇ, ಅರೆಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಂಡು ಶೋಷಣೆ ಮಾಡಲಾಗುತ್ತಿದೆ. ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ನೀಡದೇ ಮೂರು, ನಾಲ್ಕು ತಿಂಗಳಿಗೆ ನೀಡಲಾಗುತ್ತಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗೆ ಅಡಚಣೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಎನ್‌ಜಿಒ ಮೂಲಕ ಹೊರ ಗುತ್ತಿಗೆ ನೀಡಿರುವುದರಿಂದ ಸಮಸ್ಯೆಯಾಗಿದೆ. ಎನ್‌ಜಿಒ ಮುಖ್ಯಸ್ಥರು ಕಾಲೇಜಿನತ್ತ ಮುಖಮಾಡುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ದೂರಿದರು.

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡದಿರುವ ಕಾರಣ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು. ಕಾಲೇಜಿಗೆ ಪೂರ್ಣಾವಧಿ ಸಿಬ್ಬಂದಿ ನೇಮಕ ಮಾಡಬೇಕು, ಗುಣಮಟ್ಟದ ಆಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿ ಗೋವಿಂದರೆಡ್ಡಿ, ಬಿಸಿಎಂ ಅಧಿಕಾರಿ ವಿರೂಪಾಕ್ಷ ಅವರನ್ನು ಸ್ಥಳಕ್ಕೆ ಕರೆಸಿ, ಸಿಬ್ಬಂದಿಗೆ ತಕ್ಷಣ ಬಾಕಿ ವೇತನ ಪಾವತಿಸುವಂತೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಯನ್ನು ಒಂದು ದಿನದೊಳಗೆ ಬಗೆಹರಿಸುವಂತೆ ಸೂಚಿಸಿದರು.

ಕಾಲೇಜಿನ ವಿದ್ಯಾರ್ಥಿಗಳಾದ ಪ್ರಮೋದ ಬಾಗಲಕೋಟೆ, ನೀಲತೇಜ, ವೀರೇಶ ಬಡಿಗೇರ, ಅಮರೇಶ ಗದ್ದಿ, ಚೇತನ ಕುಮಾರ, ಪವಿತ್ರ ಮುತ್ತಣ್ಣವರ, ಶ್ವೇತಾ ಕೌಜಲಗಿ, ವರ್ಷ ಪಾಪನಾಳ, ಅನಿತಾ ಜಗ್ಗಿನ, ಸುಷ್ಮಾ ಪಾಟೀಲ, ಬೋಧಕ ಸಿಬ್ಬಂದಿಗಳಾದ ಎಸ್.ಎಸ್‌ಕಳಸದ, ವಿ.ಬಿ. ನಡುವಿನಮನಿ, ಎಸ್.ಕುಲಕರ್ಣಿ, ವಿಭೂತಿಮಠ, ಆರ್.ಎಚ್. ಮಾದರ, ವಿ.ಎಸ್. ಜತ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.