ADVERTISEMENT

ರಕ್ತದಾನ ವ್ಯಕ್ತಿಗೆ ಮರುಜೀವ ಕೊಡುವ ಕಾಣಿಕೆ

ಜಿಲ್ಲಾ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:19 IST
Last Updated 15 ಜೂನ್ 2013, 10:19 IST
ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜಿ.ಪಂ. ಸದಸ್ಯೆ ಮಹಾದೇವಿ ಮೂಲಿಮನಿ ಉದ್ಘಾಟಿಸಿದರು. ಡಾ.ಎಂ.ಎ. ದೇಸಾಯಿ, ಸಿದ್ದಪ್ಪ ತೇಲಿ, ಬಸವಂತಪ್ಪ ಹನಗಂಡಿ, ಯಲ್ಲವ್ವ ಬುರುಡ, ಶಂಕರ ಕೋರನವರ, ಮಹಾದೇವಿ ಬಿರಡಿ, ಶರಣ ಈಶ್ವರ ಮಂಟೂರ, ಡಾ. ಬಿ.ಡಿ.ಕಿತ್ತೂರ, ಶೇಖರ ಸಾವಳಗಿ ಚಿತ್ರದಲ್ಲಿದ್ದಾರೆ
ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜಿ.ಪಂ. ಸದಸ್ಯೆ ಮಹಾದೇವಿ ಮೂಲಿಮನಿ ಉದ್ಘಾಟಿಸಿದರು. ಡಾ.ಎಂ.ಎ. ದೇಸಾಯಿ, ಸಿದ್ದಪ್ಪ ತೇಲಿ, ಬಸವಂತಪ್ಪ ಹನಗಂಡಿ, ಯಲ್ಲವ್ವ ಬುರುಡ, ಶಂಕರ ಕೋರನವರ, ಮಹಾದೇವಿ ಬಿರಡಿ, ಶರಣ ಈಶ್ವರ ಮಂಟೂರ, ಡಾ. ಬಿ.ಡಿ.ಕಿತ್ತೂರ, ಶೇಖರ ಸಾವಳಗಿ ಚಿತ್ರದಲ್ಲಿದ್ದಾರೆ   

ಜಮಖಂಡಿ: `ರಕ್ತದಾನ ಮಾಡಿ ಒಂದು ವ್ಯಕ್ತಿಯ ಜೀವಕ್ಕೆ ಮರುಜನ್ಮ ನೀಡುವ ಮೂಲಕ ಆ ವ್ಯಕ್ತಿಗೆ ಶಕ್ತಿಯಾಗಿ ನಿಲ್ಲಬೇಕು. ರಕ್ತದಾನ ಅಂದರೆ ಶರೀರಕ್ಕೆ ಮರುಜೀವ ಕೊಡುವ ಕಾಣಿಕೆ' ಎಂದು ಹುನ್ನೂರ-ಮಧುರಖಂಡಿ ಗ್ರಾಮದ ಬಸವ ಜ್ಞಾನ ಗುರುಕುಲದ ಅಧ್ಯಕ್ಷ, ಶರಣ ಈಶ್ವರ ಮಂಟೂರ ನುಡಿದರು.

ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಡಿ. ಕಿತ್ತೂರ ಮುಖ್ಯ ಅತಿಥಿಯಾಗಿ ಮಾತನಾಡಿದರು. `ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೇ.90 ರಷ್ಟು ಪುರುಷರು ರಕ್ತದಾನ ಮಾಡಿದರೆ ಕೇವಲ ಶೇ.10 ರಷ್ಟು ಮಹಿಳೆಯರು ರಕ್ತದಾನ ಮಾಡುತ್ತಾರೆ. ರಕ್ತದಾನಕ್ಕೆ ಮಹಿಳೆಯರು ಹಿಂದೇಟು ಹಾಕಬಾರದು. ರಕ್ತದಾನಕ್ಕೆ ಮಹಿಳೆಯರು ಮುಂದೆ ಬಂದಲ್ಲಿ ರಕ್ತದ ಕೊರತೆ ನೀಗಿ ಸಾಯುವವರ ಪ್ರಾಣ ಉಳಿಸಬಹುದು' ಎಂದರು.

ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ ಡಾ.ಎಚ್.ಆರ್. ತೋಸನಿವಾಲ ಮಾತನಾಡಿ, `ರಕ್ತದಾನದಿಂದ ಅಶಕ್ತವಾಗುವುದಿಲ್ಲ. ಮನುಷ್ಯನ ಶರೀರದಲ್ಲಿ 5 ರಿಂದ 6 ಲೀಟರ್ ರಕ್ತವಿರುತ್ತದೆ. ಆದರೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರ ದಾನವಾಗಿ ಪಡೆಯಲಾಗುತ್ತದೆ. ಸ್ತ್ರೀಯರು ಪ್ರತಿ 4 ತಿಂಗಳಿಗೊಮ್ಮೆ ಹಾಗೂ ಪುರುಷರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು' ಎಂದು ಮಾಹಿತಿ ನೀಡಿದರು.

ಜಿ.ಪಂ. ಸದಸ್ಯೆ ಮಹಾದೇವಿ ಮೂಲಿಮನಿ ಶಿಬಿರ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷೆ ಯಲ್ಲವ್ವ ಬುರಡ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಮಹಾದೇವಿ ಬಿರಡಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಓಣಿ, ಉಪಾಧ್ಯಕ್ಷ ಶಂಭು ಕಡಕೋಳ, ತಾ.ಪಂ. ಸದಸ್ಯೆ ಭಾಗವ್ವ ಯಾದವಾಡ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಸ್.ಎಚ್. ಅರಹುಣಶಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುನಿತಾ ಎಚ್.ಡಿ., ಡಾ.ಟಿ.ಪಿ. ಬಾಂಗಿ, ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಂ.ಎ.ದೇಸಾಯಿ, ಗ್ರಾಮ ಪ್ರಮುಖರಾದ ಬಸವಂತಪ್ಪ ಹನಗಂಡಿ, ಪಂಡಿತಪ್ಪ ಕೋಳಿ, ಸಿದ್ದಪ್ಪ ತೇಲಿ, ಶಂಕರ ಕೋರನವರ, ಮಹಾದೇವ ಯಲಗುದ್ರಿ, ಶೇಖರ ಸಾವಳಗಿ ಮತ್ತಿತರರು ವೇದಿಕೆಯಲ್ಲಿದ್ದರು.

ಶಾಲಾ ಬಾಲಕಿಯರು ಪ್ರಾರ್ಥನೆ ಗೀತೆ ಹಾಡಿದರು. ಎಂ.ಎಚ್. ಕಡ್ಲಿಮಟ್ಟಿ ಸ್ವಾಗತಿಸಿದರು. ಎಸ್.ಎಸ್. ಮೋಳೆ ನಿರೂಪಿಸಿದರು. ಎಚ್.ಡಿ. ಸಿಂಧೂರ ವಂದಿಸಿದರು.

ಹವ್ಯಾಸಿ ರಕ್ತದಾನಿಗಳಾದ ದಿಗ್ವಿಜಯ ಬಾಂಗಿ, ಬಸವರಾಜ ಬೆನಕಟ್ಟಿ, ಡಿ.ಎಸ್. ಗವರೋಜಿ, ಶಂಕರ ಕೋರನವರ, ಉಮೇಶ ಆಲಮೇಲಕರ, ಅಶೋಕ ನ್ಯಾಮಗೌಡ ಅವರನ್ನು ಶಿಬಿರದ ಪರವಾಗಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.