ADVERTISEMENT

‘ರನ್ನ ಅಲ್ಲ, ರಾಹುಲ್‌ಗಾಂಧಿ ವೈಭವ’

ಸರ್ಕಾರಿ ಅನುದಾನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಳಕೆ: ಕಾರಜೋಳ ಆರೋಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 7:29 IST
Last Updated 16 ಮಾರ್ಚ್ 2018, 7:29 IST
ಕಾರಜೋಳ
ಕಾರಜೋಳ   

ಬಾಗಲಕೋಟೆ: ‘ಮುಧೋಳದ ರನ್ನ ವೈಭವ ಕಾರ್ಯಕ್ರಮಕ್ಕೆ ಬಿಡುಗಡೆ ಮಾಡಿದ ಅನುದಾನವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ವಾಗತಕ್ಕೆ ಹಾಕಿದ್ದ ಬ್ಯಾನರ್ ಹಾಗೂ ಬಂಟಿಂಗ್ಸ್‌ಗೆ ಖರ್ಚು ಮಾಡಲಾಗಿದೆ’ ಎಂದು ಶಾಸಕ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹಾಕಿದ್ದ ವೇದಿಕೆಗೂ ರನ್ನ ವೈಭವದ ಹೆಸರಿನಲ್ಲಿಯೇ ಖರ್ಚು ಹಾಕಲಾಗಿದೆ ಎಂಬ ಮಾಹಿತಿ ಇದೆ’ ಎಂದು ಹೇಳಿದರು.

‘ನಾಡು–ನುಡಿ, ಕವಿ ರನ್ನನ ಸ್ಮರಣೆಯ ಉತ್ಸವವಾಗಬೇಕಿದ್ದ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವರ ಹೈಕಮಾಂಡ್‌ ಓಲೈಕೆಯ ಪರಿಣಾಮ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವೈಭವವಾಗಿ ಬದಲಾಗಿತ್ತು’ ಎಂದು ವ್ಯಂಗ್ಯವಾಡಿದರು.

ADVERTISEMENT

ಸಿಎಂ ಕ್ಷಮೆಯಾಚಿಸಲಿ: ‘ರನ್ನವೈಭವದ ಸಮಾರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಾದರು. ಅಂದು ಮುಧೋಳದಲ್ಲಿಯೇ ಇದ್ದರೂ ಕೆಲವೇ ಮೀಟರ್ ಅಂತರದಲ್ಲಿ ಇದ್ದ ರನ್ನವೈಭವದ ವೇದಿಕೆಗೆ ಬರಲಿಲ್ಲ. ಇದು ಕವಿ ರನ್ನ ಹಾಗೂ ಮುಧೋಳದ ಜನತೆಗೆ ಮಾಡಿದ ಅಪಮಾನ. ಕೂಡಲೇ ಅವರು ಕ್ಷಮೆಯಾಚನೆ ಮಾಡಲಿ’ ಎಂದು ಆಗ್ರಹಿಸಿದರು.

ಹಿಂದೂಗಳನ್ನು ಕೈಬಿಡಲಾಗಿದೆ: ‘ಮುಧೋಳ ಕ್ಷೇತ್ರದ ಮತದಾರರ ಪಟ್ಟಿಯ ವಿಭಾಗ ಸಂಖ್ಯೆ 76ರಲ್ಲಿ 72 ಮಂದಿ ಹಿಂದೂಗಳ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಈ ಬಗ್ಗೆ ತಹಶೀಲ್ದಾರ್‌ಗೆ ದೂರು ನೀಡಿರುವುದಾಗಿ ತಿಳಿಸಿದ ಕಾರಜೋಳ, ‘ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡವಿದೆ’ ಎಂದು ಆರೋಪಿಸಿದರು.

ಟೆಂಡರ್ ಕರೆಯದೇ ಗುತ್ತಿಗೆ: ‘ಜಿಲ್ಲಾ ಗಣಿಗಾರಿಕೆ ನಿಧಿಯಲ್ಲಿ (ಡಿಎಂಎಫ್) ಮುಧೋಳ ತಾಲ್ಲೂಕಿನ ಗಣಿಗಾರಿಕೆ ಬಾಧಿತ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ₹ 16.15 ಕೋಟಿ ಬಿಡುಗಡೆ ಆಗಿದೆ. ಅದನ್ನು ಟೆಂಡರ್ ಕರೆಯದೇ ಜಿಲ್ಲಾ ಉಸ್ತುವಾರಿ ಸಚಿವರ ಹಿಂಬಾಲಕರಿಗೆ ಗುತ್ತಿಗೆ ನೀಡಲಾಗಿದೆ. ಈ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲು ಸಭೆ ನಡೆಸಿ ಅದಕ್ಕೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಬೇಕಿದೆ. ಆದರೆ ಆ ಬಗ್ಗೆ ನನಗೆ ಮಾಹಿತಿಯನ್ನೇ ನೀಡಿಲ್ಲ. ಇದರಲ್ಲಿ ಭ್ರಷ್ಟಾಚಾರದ ಕಮಟು ವಾಸನೆ ಕಂಡು ಬರುತ್ತಿದೆ. ನಿಯಮಾವಳಿಯಂತೆ ಟೆಂಡರ್ ಕರೆದು ಕಾಮಗಾರಿ ಆರಂಭಿಸದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು’ ಎಂದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಮುಧೋಳ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಎಲ್‌.ಕೆ.ಬಳಗಾನೂರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಶಿಷ್ಟಾಚಾರ ಉಲ್ಲಂಘನೆ ಆರೋಪ..
‘ಸರ್ಕಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆಗೆ ಶಿಷ್ಟಾಚಾರದ ಪ್ರಕಾರ ಶಾಸಕರನ್ನು ಆಹ್ವಾನಿಸಬೇಕಿದೆ. ಆದರೆ ಅಧಿಕಾರಿಗಳಿಂದ ಅದು ಆಗುತ್ತಿಲ್ಲ. ಜಿಲ್ಲೆಯ ಶಿಷ್ಟಾಚಾರ ಪಾಲನೆ ನಿಗಾ ವಹಿಸಬೇಕಾದ ಜಿಲ್ಲಾಧಿಕಾರಿ ಇತ್ತ ಗಮನ ನೀಡಬೇಕು’ ಎಂದು ಹೇಳಿದ ಕಾರಜೋಳ, ‘ಈ ರೀತಿ ಕರೆಯದೇ ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗಳಿಗೆ ನಾನು ಮತ್ತೆ ಚಾಲನೆ ನೀಡುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಪಮಾನ ಮಾಡುವ ಉದ್ದೇಶದಿಂದಲೇ ಮಾಡುತ್ತಿರುವೆ’ ಎಂದು ಹೇಳಿದರು.

‘ಹಿಂದಿನ ಚುನಾವಣೆಯಲ್ಲಿ ವಿಜಯಪುರದಿಂದ ಖೊಟ್ಟಿ ಮತದಾರರನ್ನು ಕರೆ ತಂದು ಮತ ಹಾಕಿಸಿಕೊಂಡಿದ್ದೇನೆ ಎಂದು ನನ್ನ ವಿರುದ್ಧ ಸಚಿವ ತಿಮ್ಮಾಪುರ ಸುಳ್ಳು ಆರೋಪ ಮಾಡಿದ್ದಾರೆ. ಸರ್ಕಾರ ಅವರದ್ದೇ ಇದೆ. ಅಧಿಕಾರವೂ ಇದೆ. ತನಿಖೆ ಮಾಡಿಸಿ ವಾಸ್ತವ ಬಹಿರಂಗಪಡಿಸಲಿ’ ಎಂದು ಕಾರಜೋಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.