ADVERTISEMENT

`ರಾಜಕಾರಣಿಗಳಿಂದ ಪ್ರಜಾಪ್ರಭುತ್ವಕ್ಕೆ ಅಪಚಾರ'

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 7:47 IST
Last Updated 22 ಏಪ್ರಿಲ್ 2013, 7:47 IST

ಇಳಕಲ್: ಸ್ವಾರ್ಥಕ್ಕಾಗಿ ರಾಜಕಾರಣಿಗಳು ರಾಜಕೀಯ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಮಾನ ಎಸಗುತ್ತಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ ವಿಷಾದಿಸಿದರು.  

ಅವರು ನಗರದ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. `ರಾಜಕೀಯ ಲಾಭಕ್ಕಾಗಿ ಜನರನ್ನು ಜಾತಿ, ಧರ್ಮಗಳ ಆಧಾರದ ಮೇಲೆ ಒಡೆದರೆ  ಅದು ಸಂವಿಧಾನಕ್ಕೆ ವಿರೋಧವಾದದ್ದು ಹಾಗೂ ರಾಷ್ಟ್ರ ವಿರೋಧಿ ಕೃತ್ಯ. ಭ್ರಷ್ಟಾಚಾರ, ಜಾತೀಯತೆ ಹಾಗೂ ಭಯೋತ್ಪಾದನೆ ನಿಯಂತ್ರಿಸದ ಹೊರತು ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ವಿದ್ಯಾರ್ಥಿಗಳು ತಮ್ಮ ಓದಿನ ಜತೆಗೆ ರಾಷ್ಟ್ರದ ಹಿತಕ್ಕೆ ಧಕ್ಕೆಯಾಗುವದನ್ನು ತಡೆಯುವ ಶಕ್ತಿಯಾಗಿ ರೂಪಗೊಳ್ಳಬೇಕಿದೆ. ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು, ಆತ್ಮವಿಶ್ವಾಸದಿಂದ ನಿರಂತರ ಅಧ್ಯಯನ ಮಾಡಿ ಯಶಸ್ಸು ಸಾಧಿಸಬೇಕು. ಅದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಘಟನಾವಳಿಗಳ ಅರಿವು ಹಾಗೂ ಕಾರಣಗಳು ತಿಳಿದಿರಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.  ಡಾ.ಮಹಾಂತ ರ್ಸಾಮೀಜಿ, ಗುರು ಮಹಾಂತ ಸ್ವಾಮೀಜಿ, ಡಾ. ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಮವಿವ ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ ಬೋರಾ, ಪ್ರೊ.ವಿ.ವಿ.ಅಲೇಗಾವಿ, ಪ್ರೊ.ಎಸ್.ಜಿ ಲೋಕಾಪುರ, ವಿದ್ಯಾರ್ಥಿ ಕಾರ್ಯದರ್ಶಿ ಸಂಗಮೇಶ ಅಂಗಡಿ ಉಪಸ್ಥಿತರಿದ್ದರು.

ಗಣೇಶ ರಾಯಬಾಗಿ ಪ್ರಾರ್ಥಿಸಿ ದರು. ಪ್ರಾಚಾರ್ಯ ಪ್ರೊ. ಬಿ.ಎಂ ಹೊಸಮನಿ ಸ್ವಾಗತಿಸಿದರು. ಪ್ರೊ.ಎಸ್. ಎಸ್ ಪಾಟೀಲ ವರದಿ ವಾಚಿಸಿದರು. ಪ್ರೊ.ಪಿ.ಎಸ್ ಕಂದಗಲ್ಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.