ADVERTISEMENT

ರಾಹುಲ್‌ ಭೇಟಿ; ಶುದ್ಧೀಕರಣಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 8:44 IST
Last Updated 28 ಫೆಬ್ರುವರಿ 2018, 8:44 IST

ಬಾಗಲಕೋಟೆ: ಜನಾಶೀರ್ವಾದ ಯಾತ್ರೆ ಅಂಗವಾಗಿ ನಗರಕ್ಕೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ನಗರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ರಸ್ತೆಗೆ ಗೋಮೂತ್ರ ಸಿಂಪಡಿಸಿದ ಘಟನೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ವಕ್ತಾರ ಆನಂದ ಜಿಗಜಿನ್ನಿ ಮಾತನಾಡಿ, ‘ರಾಹುಲ್‌ ಗಾಂಧಿ, ನಗರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ರಸ್ತೆಗೆ ಗೋಮೂತ್ರ ಸಿಂಪಡಿಸಿರುವುದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಬಸವಣ್ಣನ ನಾಡಿನಲ್ಲಿ ಬಿಜೆಪಿಯವರು ಹಿಂದುತ್ವದ ವಿಷಬೀಜ ಬಿತ್ತುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುತ್ತಣ್ಣ ಬೆಣ್ಣೂರ ಮಾತನಾಡಿ, ‘ಅಪವಿತ್ರವಾಗಿದೆ ಎಂದು ಗೋಮೂತ್ರ ಸಿಂಪಡಿಸಿರುವ ಘಟನೆ ಅಮಾನವೀಯ. ಜನರಲ್ಲಿ ಹಿಂದುತ್ವದ ಭಾವನಾತ್ಮಕತೆಯನ್ನು ಮೂಡಿಸಿ ಸಮಾಜದ ಸಾಮರಸ್ಯವನ್ನು ಹಾಳುಮಾಡುವ ಕೆಲಸಕ್ಕೆ ಬಿಜೆಪಿ ಕೈಹಾಕಿದೆ’ ಎಂದು ದೂರಿದರು. ‘ಗೋಮಾತೆ ಕೇವಲ ಬಿಜೆಪಿ ಸ್ವತ್ತಲ್ಲ. ಇಡೀ ಭಾರತದ ಸ್ವತ್ತು. ಮಹಿಳೆಯರ ಬಗ್ಗೆ ಬಿಜೆಪಿಯವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದರು.

ADVERTISEMENT

ನಗರಸಭೆ ಸದಸ್ಯ ಹನುಮಂತ ರಾಕುಂಪಿ ಮಾತನಾಡಿ, ‘ಹಿಂದುತ್ವದಿಂದ ಎಲ್ಲವನ್ನು ಗೆಲ್ಲಬಹುದು ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಅದು ಬಸವಣ್ಣನ ನಾಡಿನಲ್ಲಿ ನಡೆಯುವುದಿಲ್ಲ. ತಮ್ಮ ತಪ್ಪಿಗೆ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. ರಾಜು ಮನ್ನಿಕೇರಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಮುಖಂಡರಾದ ನಿಂಗನಗೌಡ ಪಾಟೀಲ, ನಿಂಗಪ್ಪ ಕೋಟಿ, ದ್ಯಾಮಣ್ಣ ಗಾಳಿ, ಹೊಳೆಬಸವ ಶೆಟ್ಟರ್, ಶ್ರೀನಿವಾಸ ಶೆಬ್ಬಿ, ಎ.ಡಿ.ಮೊಕಾಶಿ, ತಿಪ್ಪಣ್ಣ ನೀಲನಾಯಕ, ಮುಮ್ತಾಜ್ ಸುತಾರ್, ಮಂಜುಳಾ ಬೂಸಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.